ಬಿಜೆಪಿಯನ್ನು ಸೋಲಿಸುವ ಶಕ್ತಿ ಇರುವಲ್ಲೆಲ್ಲ ಕಾಂಗ್ರೆಸ್‌ಗೆ ಬೆಂಬಲ: ಸಿಪಿಎಂ

Update: 2018-03-24 04:02 GMT

ಹೊಸದಿಲ್ಲಿ, ಮಾ. 24: ಕಾಂಗ್ರೆಸ್ ಪಕ್ಷದ ಜತೆಗಿನ ಚುನಾವಣಾ ಹೊಂದಾಣಿಕೆ ವಿರೋಧಿಸುವ ತನ್ನ ನಿರ್ಧಾರವನ್ನು ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಸಡಿಲಿಸಿದೆ. ಕಾಂಗ್ರೆಸ್ ಪಕ್ಷಕ್ಕೆ ಎಲ್ಲೆಲ್ಲ ಕೇಸರಿ ಪಕ್ಷವನ್ನು ಸೋಲಿಸುವ ಶಕ್ತಿ ಇದೆಯೋ ಅಂಥ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಲು ಸಿದ್ಧ ಎಂದು ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಘೋಷಿಸಿದ್ದಾರೆ.

ಸಿಪಿಎಂ ಮುಖವಾಣಿ 'ಪೀಪಲ್ಸ್ ಡೆಮಾಕ್ರಸಿ'ಯಲ್ಲಿ ಪ್ರಕಟವಾದ 'ಉತ್ತರ ಪ್ರದೇಶ ಪೋರ್ಟೆಂಟ್ಸ್' ಎಂಬ ಶೀರ್ಷಿಕೆಯ ಸಂಪಾದಕೀಯದಲ್ಲಿ ಕಾರಟ್, "ಉತ್ತರ ಪ್ರದೇಶ ಉಪಚುನಾವಣೆ, ಬಿಜೆಪಿಯನ್ನು ಸೋಲಿಸುವ ಕಾರ್ಯತಂತ್ರದ ಬಗ್ಗೆ ಪ್ರಮುಖ ಪಾಠ ಕಲಿಸಿದೆ. ಬಿಜೆಪಿಯೇತರ ಪ್ರಮುಖ ಪಕ್ಷಗಳು ಒಗ್ಗಟ್ಟಾದರೆ, ಆಗ ಸಣ್ಣ ಪಕ್ಷಗಳು ಮತ್ತು ಬಲಗಳು ತಮ್ಮ ಬೆಂಬಲ ಸೂಚಿಸಬಹುದು" ಎಂದು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿಯನ್ನು ಸೋಲಿಸುವ ಸಲುವಾಗಿ ಕಾಂಗ್ರೆಸ್ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಸಂಬಂಧ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯಚೂರಿ ಮುಂದಿಟ್ಟಿದ್ದ ಪ್ರಸ್ತಾವವನ್ನು ಪ್ರಕಾಶ್ ಕಾರಟ್, ಕೇರಳ ಸಿಎಂ ಪಿಣರಾಯಿ ವಿಜಯನ್ ಹಾಗೂ ಇತರರ ಬೆಂಬಲದೊಂದಿಗೆ ಬಲವಾಗಿ ವಿರೋಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ನಿಲುವನ್ನು ಸಡಿಲಿಸಿ, ಮತ ವಿಭಜನೆಯಿಂದ ಬಿಜೆಪಿಗೆ ಲಾಭವಾಗಬಹುದು ಎಂಬ ಕಾರಣಕ್ಕೆ, ರಾಜ್ಯವಾರು ಬಿಜೆಪಿ ವಿರೋಧಿ ಮತಗಳನ್ನು ಒಗ್ಗೂಡಿಸುವ ಕಾರ್ಯ ಆಗಬೇಕಿದೆ ಎಂದು ಪಕ್ಷದ ನಾಯಕತ್ವ ಅಭಿಪ್ರಾಯಪಟ್ಟಿದೆ.

ಪಶ್ಚಿಮ ಬಂಗಾಳ ಹಾಗೂ ತ್ರಿಪುರಾದಲ್ಲಿ ಕೂಡಾ ಬಿಜೆಪಿ ವಿರೋಧಿ ಶಕ್ತಿಗಳ ಮರು ಹೊಂದಾಣಿಕೆಯ ಸಾಧ್ಯತೆಯ ಬಾಗಿಲನ್ನು ಈ ಸಂಪಾದಕೀಯ ತೆರೆದಂತಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷವನ್ನು ಹೊರಗಿಟ್ಟು ತೆಲಂಗಾಣ ಸಿಎಂ ಕೆ.ಸಿ.ರಾವ್ ಮುಂದಿಟ್ಟಿರುವ ಫೆಡರಲ್ ಫ್ರಂಟ್ ಯಶಸ್ವಿಯಾಗುವ ಸಾಧ್ಯತೆ ಇಲ್ಲ ಎಂದೂ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News