ಕಾಮನ್‌ವೆಲ್ತ್ ಗೇಮ್ಸ್ ಉದ್ಘಾಟನಾ ಸಮಾರಂಭದ ಪಥ ಸಂಚಲನದಲ್ಲಿ ಭಾರತಕ್ಕೆ ಸಿಂಧು ನೇತೃತ್ವ

Update: 2018-03-24 05:01 GMT

ಹೊಸದಿಲ್ಲಿ, ಮಾ.24: ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಆಸ್ಟ್ರೇಲಿಯದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್ ಉದ್ಘಾಟನಾ ಸಮಾರಂಭದ ಪಥ ಸಂಚಲನದಲ್ಲಿ ಭಾರತದ ಧ್ವಜಧಾರಿಣಿಯಾಗಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಮೂಲಗಳು ತಿಳಿಸಿವೆ.

 ಶುಕ್ರವಾರ ಸಂಜೆ ನಡೆದ ಐಒಎ ಸಭೆಯಲ್ಲಿ ಕಳೆದ ವಾರ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿರುವ ಸಿಂಧು ಅವರನ್ನು ಧ್ವಜಧಾರಿಣಿಯಾಗಿ ಆಯ್ಕೆ ಮಾಡಲು ನಿರ್ಧರಿಸಲಾಯಿತು. ಹೈದರಾಬಾದ್ ಬ್ಯಾಡ್ಮಿಂಟನ್ ಆಟಗಾರ್ತಿ ಸಿಂಧು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಪದಕ ಗೆದ್ದುಕೊಡಬಲ್ಲ ಫೇವರಿಟ್ ಆಟಗಾರ್ತಿ. 2014ರಲ್ಲಿ ಗ್ಲಾಸ್ಗೊ ಕಾಮನ್‌ವೆಲ್ತ್ ಗೇಮ್ಸ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಕಂಚು ಜಯಿಸಿದ್ದ ಸಿಂಧು ಈ ಬಾರಿ ತನ್ನ ಪ್ರದರ್ಶನ ಸುಧಾರಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ಕಳೆದ ಮೂರು ಆವೃತ್ತಿಯ ಕಾಮನ್‌ವೆಲ್ತ್ ಗೇಮ್ಸ್ ಬಳಿಕ ಇದೇ ಮೊದಲ ಬಾರಿ ಬ್ಯಾಡ್ಮಿಂಟನ್ ಆಟಗಾರ್ತಿ ಧ್ವಜಧಾರಿಯಾಗಿ ಆಯ್ಕೆಯಾಗಿದ್ದಾರೆ.

2006ರ ಮೆಲ್ಬೋರ್ನ್ ಗೇಮ್ಸ್‌ನಲ್ಲಿ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಶೂಟರ್, ಪ್ರಸ್ತುತ ಕೇಂದ್ರ ಕ್ರೀಡಾ ಸಚಿವರಾಗಿರುವ ರಾಜ್ಯವರ್ಧನ್ ಸಿಂಗ್ ರಾಥೋಡ್ ಉದ್ಘಾಟನಾ ಸಮಾರಂಭದಲ್ಲಿ ಧ್ವಜಧಾರಿಯಾಗಿದ್ದರು.

2010ರ ದಿಲ್ಲಿ ಗೇಮ್ಸ್‌ನಲ್ಲಿ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ಶೂಟರ್ ಅಭಿನವ್ ಬಿಂದ್ರಾ ಪಥ ಸಂಚಲನದಲ್ಲಿ ಭಾರತದ ಧ್ವಜ ಹಿಡಿದು ಮುನ್ನಡೆದಿದ್ದರು. 2014ರ ಗ್ಲಾಸ್ಗೊ ಗೇಮ್ಸ್‌ನಲ್ಲಿ ಲಂಡನ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಶೂಟರ್ ವಿಜಯ್ ಕುಮಾರ್‌ಗೆ ಧ್ವಜಧಾರಿಯ ಜವಾಬ್ದಾರಿಯನ್ನು ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News