ನೀವು ಕ್ರೆಡಿಟ್ ಕಾರ್ಡ್ ಬೇಡವೆನ್ನಲು ಆರು ಕಾರಣಗಳಿಲ್ಲಿವೆ......

Update: 2018-03-24 11:16 GMT

ಕ್ರೆಡಿಟ್ ಕಾರ್ಡ್ ವ್ಯಕ್ತಿಯ ಅಗತ್ಯ ಮತ್ತು ಬಿಕ್ಕಟ್ಟಿನ ಸಮಯದಲ್ಲಿ ಆಪ್ತಮಿತ್ರ ಎಂದು ಹೇಳಲಾಗುತ್ತದೆ. ಕೆಲವೊಮ್ಮೆ ಇದು ನಿಜವೂ ಹೌದು. ಆದರೆ ಇದು ಕ್ರೆಡಿಟ್ ಕಾರ್ಡ್ ಹೊಂದಲು ಒಳ್ಳೆಯ ಕಾರಣವೇ ಎನ್ನುವುದು ನಿಜಕ್ಕೂ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ರಿಯಾಯಿತಿಗಳು, ಕ್ಯಾಷ್ ಬ್ಯಾಕ್ ರಿವಾರ್ಡ್‌ಗಳು, 45-55 ದಿನಗಳ ಬಡ್ಡಿರಹಿತ ಅವಧಿ ಮತ್ತು ಕ್ರೆಡಿಟ್ ಹಿಸ್ಟರಿ ನಿರ್ಮಿಸುವಲ್ಲಿ ನೆರವು ಇತ್ಯಾದಿಯಾಗಿ ಹಲವಾರು ಕ್ರೆಡಿಟ್ ಕಾರ್ಡ್ ಲಾಭಗಳಿವೆ ಎಂದು ನೀವು ವಾದಿಸಬಹುದು. ಒಳ್ಳೆಯದು, ನಿಮ್ಮ ಕ್ರೆಡಿಟ್ ಹಿಸ್ಟರಿ ಮತ್ತು ಸ್ಕೋರ್ ಉತ್ತಮಗೊಳಿಸಲು ಕ್ರೆಡಿಟ್ ಕಾರ್ಡ್‌ಗಳು ನೆರವಾಗುತ್ತವೆ ಯಾದರೆ ವಿವೇಚನೆಯಿಲ್ಲದೆ ಬಳಸಿದರೆ ಇವೇ ಕ್ರೆಡಿಟ್ ಕಾರ್ಡ್‌ಗಳು ಅವುಗಳನ್ನು ಶಾಶ್ವತವಾಗಿ ಹಾಳುಮಾಡುತ್ತವೆ ಮತ್ತು ಇದರಿಂದಾಗಿ ನೀವು ಜೀವನದಲ್ಲೆಂದೂ ವೈಯಕ್ತಿಕ ಸಾಲ ಅಥವಾ ಗೃಹಸಾಲವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎನ್ನುವುದು ನಿಮಗೆ ಗೊತ್ತೇ? ಕ್ರೆಡಿಟ್ ಕಾರ್ಡ್‌ಗಳಿಂದಾಗಿಯೇ ವಿಶ್ವಾದ್ಯಂತ ಕೋಟ್ಯಂತರ ಜನರು ಸಾಲದ ಸುಳಿಯಲ್ಲಿ ಸಿಲುಕಿ ಮನೆಮಾರು ಕಳೆದುಕೊಂಡಿರುವುದು ಮತ್ತು ಅನಿವಾರ್ಯವಾಗಿ ಆತ್ಮಹತ್ಯೆಗೆ ಶರಣಾಗಿರುವುದೂ ನಿಮಗೆ ಗೊತ್ತೇ?

ಹೀಗೇಕೆಂದರೆ ಕ್ರೆಡಿಟ್ ಕಾರ್ಡ್‌ಗಳು ಱಈಗ ವೆಚ್ಚ ಮಾಡಿ ಮತ್ತು ನಂತರ ಪಾವತಿಸಿ ೞಎಂಬ ತತ್ತ್ವದ ಮೇಲೆ ರೂಪುಗೊಂಡಿವೆ. ಈ ನೀತಿಯು ಹಲವಾರು ಜನರನ್ನು ಕೆಲವೊಮ್ಮೆ ಇತರರ ಮೇಲೆ ಪ್ರಭಾವ ಬೀರಲು ಅಥವಾ ಕೆಲವೊಮ್ಮೆ ತಮ್ಮ ಸ್ವಂತದ ಸ್ಥಾನಮಾನವನ್ನು ಹೆಚ್ಚಿಸಿಕೊಳ್ಳಲು ತಮ್ಮ ಆದಾಯಕ್ಕಿಂತ ವೆಚ್ಚ ಮಾಡುವಂತೆ ಪ್ರೇರೇಪಿಸುತ್ತದೆ. ಅವರಿಗೆ ತಮ್ಮ ತಪ್ಪಿನ ಅರಿವಾದಾಗ ತುಂಬ ತಡವಾಗಿರುತ್ತದೆ!

ಈಗ ವೆಚ್ಚ ಮಾಡಿ ನಂತರ ಪಾವತಿಸುವುದರಲ್ಲಿ ಏನು ತಪ್ಪಿದೆ ಎಂದು ನಿಮಗೆ ಅಚ್ಚರಿಯಾಗಬಹುದು. ನಿಮ್ಮ ವೈಯಕ್ತಿಕ ಸಾಲವನ್ನು ಕೆಲವೇ ವರ್ಷಗಳಲ್ಲಿ ತೀರಿಸಬಹುದಾದರೆ ಮತ್ತು ನೀವು ಕನಿಷ್ಠ ಬಾಕಿ ಹಣವನ್ನು ಮಾತ್ರ ತುಂಬುತ್ತಿದ್ದರೆ ನಿಮ್ಮ ಕ್ರೆಡಿಟ್ ಕಾರ್ಡ್ ಬಾಕಿಯನ್ನು ತೀರಿಸಲು ದಶಕಗಳು ಬೇಕಾಗುವವರೆಗೂ ಇದರಲ್ಲಿ ಯಾವುದೇ ತಪ್ಪು ಇಲ್ಲದಿರಬಹುದು! ಕಚ್ಚಾ ಅಂದಾಜಿನಂತೆ ನಿಮ್ಮ ಕ್ರೆಡಿಟ್ ಕಾರ್ಡ್ ಬಾಕಿಯು ಎರಡು ಲಕ್ಷ ರೂ.ಗಳಿದ್ದರೆ ಮತ್ತು ಶೇ.40ರಷ್ಟು ಬಡ್ಡಿ ವಿಧಿಸಲಾಗಿದ್ದರೆ ಪ್ರತಿ ತಿಂಗಳು ಕನಿಷ್ಠ ಬಾಕಿ ಮೊತ್ತವನ್ನು ಮಾತ್ರ ತುಂಬುತ್ತಿದ್ದರೆ ಸಾಲವನ್ನು ತೀರಿಸಲು ನಿಮಗೆ 15 ವರ್ಷಗಳೇ ಬೇಕಾಗಬಹುದು. ಹಣ ಪಾವತಿಯನ್ನು ಕೆಲವೇ ದಿನಗಳ ಕಾಲ ವಿಳಂಬಿಸುವುದರಿಂದ ದಂಡಕ್ಕೂ ನೀವು ತಲೆ ಕೊಡಬೇಕಾದ್ದರಿಂದ ನಿಮ್ಮ ಬದುಕು ಮುಗಿದುಹೋದರೂ ಸಾಲವು ತೀರಲಿಕ್ಕಿಲ್ಲ! ಕ್ರೆಡಿಟ್ ಕಾರ್ಡ್ ಹೊಂದುವುದನ್ನು ಏಕೆ ಸಾಧ್ಯವಾದಷ್ಟು ಮಟ್ಟಿಗೆ ತಪ್ಪಿಸಬೇಕು ಎನ್ನುವುದು ಈಗ ನಿಮಗೆ ಸ್ಪಷ್ಟವಾಗಿರಬಹುದು. 

ಕ್ರೆಡಿಟ್ ಕಾರ್ಡ್ ಬಳಕೆಯನ್ನು ನಿಲ್ಲಿಸಲು ಹಲವಾರು ಕಾರಣಗಳಿರಬಹುದಾ ದರೂ ಕ್ರೆಡಿಟ್ ಕಾರ್ಡ್ ಬೇಡವೇ ಬೇಡ ಎನ್ನಲು ಆರು ಪ್ರಮುಖ ಕಾರಣಗಳಿಲ್ಲಿವೆ....

► ದುಬಾರಿ ಬಡ್ಡಿದರ

ಕ್ರೆಡಿಟ್ ಕಾರ್ಡ್ ಬಡ್ಡಿದರಗಳು ಹೆಚ್ಚಾಗಿದ್ದು, ಇದರಿಂದಾಗಿ ನಿಮ್ಮ ಖರೀದಿಯೂ ದುಬಾರಿಯಾಗುತ್ತದೆ. ಕ್ರೆಡಿಟ್ ಕಾರ್ಡ್ ಮೂಲಕ ನಗದು ಸಾಲವನ್ನು ಪಡೆದುಕೊಂಡರೆ ಈ ಬಡ್ಡಿ ಇನ್ನಷ್ಟು ಹೆಚ್ಚಾಗುತ್ತದೆ.

► ಖರೀದಿ ನಿಮ್ಮ ಬಜೆಟ್‌ಗೂ ಹೆಚ್ಚಾಗಬಹುದು

ಜನರು ನಗದು ಪಾವತಿಗಿಂತ ಸಾಲದ ರೂಪದಲ್ಲಿ ಖರೀದಿಸುವಾಗ ಹೆಚ್ಚೇ ವೆಚ್ಚ ಮಾಡುತ್ತಾರೆ. ಕ್ರೆಡಿಟ್ ಕಾರ್ಡನ್ನು ಉಜ್ಜಿ ವಸ್ತುಗಳನ್ನು ಖರೀದಿಸುವಾಗ ಅದು ನಿಮಗೆ ದೊಡ್ಡದಾಗಿರುವುದಿಲ್ಲ. ಆದರೆ ನಗದು ಪಾವತಿಸುವಾಗ ನೀವು ಕಡಿಮೆ ಬೆಲೆಯಲ್ಲಿ ವಸ್ತು ಎಲ್ಲಿ ಸಿಗುತ್ತದೆ ಎನ್ನುವುದನ್ನು ನೋಡುತ್ತೀರಿ. ನಿಮ್ಮ ಬಜೆಟ್ ಮೀರಿ ಖರೀದಿಸುವ ಸಾಹಸಕ್ಕೆ ಹೋಗುವುದಿಲ್ಲ.

► ಕ್ರೆಡಿಟ್ ಕಾರ್ಡ್ ಸಾಲದ ಬಲೆಯಲ್ಲಿ ಸಿಲುಕಿಸುತ್ತದೆ

ಗುಪ್ತ ಶುಲ್ಕಗಳು ಮತ್ತು ದುಬಾರಿ ಬಡ್ಡಿದರಗಳಿಂದಾಗಿ ಕ್ರೆಡಿಟ್ ಕಾರ್ಡ್‌ಗಳು ಹೆಚ್ಚಿನವರನ್ನು ಸಾಲದ ಸುಳಿಯಲ್ಲಿ ಸಿಲುಕಿಸುತ್ತವೆ ಮತ್ತು ಒಂದು ಹಂತದ ನಂತರ ಅದರಿಂದ ಹೊರಬರುವುದೂ ಕಷ್ಟವಾಗುತ್ತದೆ. ಇದು ಈಗ ರಹಸ್ಯವಾಗುಳಿದಿಲ್ಲ.

► ಗುಪ್ತ ಷರತ್ತುಗಳು ಮತ್ತು ನಿಬಂಧನೆಗಳು

 ಕ್ರೆಡಿಟ್ ಕಾರ್ಡ್ ಪಡೆಯಲು ನಿಗದಿತ ಅರ್ಜಿಗೆ ಸಹಿ ಹಾಕುವ ಸಂದರ್ಭದಲ್ಲಿ ಷರತ್ತುಗಳು ಮತ್ತು ನಿಬಂಧನೆಗಳನ್ನು ಓದುವ ಗೋಜಿಗೆ ಹೆಚ್ಚಿನವರು ಹೋಗುವುದಿಲ್ಲ. ಆದರೆ ಅವುಗಳನ್ನು ಓದಿದರೆ ಕ್ರೆಡಿಟ್ ಕಾರ್ಡ್ ಬಳಕೆಯ ಬಗ್ಗೆ ಎಷ್ಟೊಂದು ವಿಷಯಗಳಿವೆಯಲ್ಲ ಎಂದು ನಿಮಗೇ ಅಚ್ಚರಿಯಾಗುತ್ತದೆ. ಸಣ್ಣ ಅಕ್ಷರಗಳಲ್ಲಿ ಮುದ್ರಣಗೊಂಡಿರುವ ಈ ನಿಯಮಗಳನ್ನು ಓದಲು ನಿಮಗೆ ಸಾಧ್ಯವಾದರೆ ಮಾತ್ರ ಕಂಪನಿಯು ಯಾವುದೇ ಸಂದರ್ಭದಲ್ಲಿ ಗ್ರಾಹಕರಿಗೆ 15 ದಿನಗಳ ಕಿರುನೋಟಿಸ್ ನೀಡಿ ಬಡ್ಡಿದರ, ಶುಲ್ಕಗಳು ಮತ್ತು ದಂಡಗಳನ್ನು ಹೆಚ್ಚಿಸುವ ಅಧಿಕಾರವನ್ನು ಹೊಂದಿರುತ್ತದೆ ಎಂಬ ಕಟುಸತ್ಯ ಗೊತ್ತಾಗುತ್ತದೆ.

► ನಿಮ್ಮ ಕ್ರೆಡಿಟ್ ಸ್ಕೋರ್‌ಗೆ ಹಾನಿಯನ್ನು ಮಾಡುತ್ತದೆ

ಕಡಿಮೆ ಕ್ರೆಡಿಟ್ ಸ್ಕೋರ್ ನೀವು ಹಾಲಿ ಪಾವತಿಸುತ್ತಿರುವ ಬಡ್ಡಿದರಕ್ಕಿಂತ ಬಹಳ ಹೆಚ್ಚಿನದನ್ನು ನಿರ್ಧರಿಸುತ್ತದೆ. ಕ್ರೆಡಿಟ್ ಕಾರ್ಡ್ ಬಾಕಿಯನ್ನು ಪಾವತಿಸದೆ ನಿಮ್ಮ ಕ್ರೆಡಿಟ್ ರೇಟಿಂಗ್‌ನ್ನು ಕಡಿಮೆ ಮಾಡಿಕೊಂಡರೆ ಭವಿಷ್ಯದಲ್ಲಿ ಗೃಹಸಾಲದಂತಹ ಪ್ರಮುಖ ಸಾಲಗಳನ್ನು ಪಡೆದರೆ ದುಬಾರಿ ಬಡ್ಡಿಯ ರೂಪದಲ್ಲಿ ಹೆಚ್ಚಿನ ಹಣವನ್ನು ಕಕ್ಕಬೇಕಾಗುತ್ತದೆ. ಅಲ್ಲದೆ ಕೆಲವು ಸಂದರ್ಭಗಳಲ್ಲಿ ನಿಮಗೆ ಸಾಲವೇ ದೊರೆಯದಿರ ಬಹುದು.

► ಮಾನಸಿಕ ಒತ್ತಡ

ನೀವು ಯಾರಿಗೂ ಸಾಲವನ್ನು ಮರುಪಾವತಿಸುವ ಪ್ರಮೇಯ ವಿಲ್ಲದಿದ್ದಾಗ ವಿಳಂಬಿತ ಪಾವತಿ, ದಂಡಗಳು, ಶುಲ್ಕಗಳು, ಬಡ್ಡಿ, ಕ್ರೆಡಿಟ್ ಸ್ಕೋರ್ ಇತ್ಯಾದಿಗಳ ಬಗ್ಗೆ ಚಿಂತಿಸಬೇಕಿರುವುದಿಲ್ಲ. ನೀವು ಸಾಲದಲ್ಲಿ ಖರೀದಿಸುವ ಯಾವುದೇ ಉತ್ಪನ್ನಕ್ಕಿಂತ ನಿಮ್ಮ ಮನಃಶಾಂತಿಯು ಮುಖ್ಯವಾಗಿದೆ. ಯಾರದೋ ವ್ಯಾಪಾರವನ್ನು ಹೆಚ್ಚಿಸಲು ಅಥವಾ ನಿಮಗೆ ನಿಜವಾಗಿಯೂ ಅಗತ್ಯವಿಲ್ಲದ ವಸ್ತುವನ್ನು ಖರೀದಿಸಲು ನಿಮ್ಮ ಮನಃಶಾಂತಿಯನ್ನು ನೀವೇಕೆ ಕಳೆದುಕೊಳ್ಳಬೇಕು?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News