ಮಿಡ್‌ಬ್ರೇನ್ ಆ್ಯಕ್ಟಿವೇಶನ್; ಮೂರ್ಖತನದ ಪರಮಾವಧಿ

Update: 2018-03-24 12:34 GMT

ಭಾಗ-36

ಪೋಷಕರೇ ಹುಷಾರಾಗಿರಿ. ಮತ್ತೆ ಬೇಸಿಗೆ ರಜೆ ಆರಂಭವಾಗಲಿದೆ. ವರ್ಷಪೂರ್ತಿ ಓದಿನ ಒತ್ತಡದಲ್ಲಿ ತಮ್ಮನ್ನು ತಾವು ತರಗತಿಯ ನಾಲ್ಕು ಗೋಡೆಗಳು ಹಾಗೂ ಟ್ಯೂಶನ್ ಎಂಬ ತರಗತಿಯಲ್ಲೇ ಕಳೆಯುವ ಮಕ್ಕಳು ರಜಾ ದಿನಗಳನ್ನಾದರೂ ತಮ್ಮ ಲೋಕದಲ್ಲಿ ಕಳೆಯಲು ಅವಕಾಶ ನೀಡೋಣ. ಅವರ ಭವಿಷ್ಯಕ್ಕೆ ನಾವು ಪ್ರೇರಣೆ ನೀಡೋಣವೇ ಹೊರತು, ಮೋಸದ ಜಾಲಕ್ಕೆ ಬಲಿಯಾಗಿ ಮಕ್ಕಳಲ್ಲಿ ಸುಳ್ಳನ್ನು ಹೇಳಿಸುವ, ಸುಳ್ಳಿಗೆ ತಮ್ಮನ್ನು ಒಗ್ಗಿಸಿಕೊಳ್ಳುವ ಪ್ರಕ್ರಿಯೆಗೆ ಬಲಿಪಶುಗಳನ್ನಾಗಿ ಮಾಡದಿರೋಣ. ಮಕ್ಕಳ ಬೇಸಿಗೆ ರಜೆ ಆನಂದಮಯವಾಗಿರಲಿ ಎಂಬುದು ನಮ್ಮ ನಿಮ್ಮೆಲ್ಲರ ಆಶಯವಾಗಿರಲಿ.

ಮಕ್ಕಳಿಗೆ ಸದ್ಯದಲ್ಲೇ ಬೇಸಿಗೆ ರಜೆ ಆರಂಭವಾಗಲಿದೆ. ಪರೀಕ್ಷೆಗಳು ಮುಗಿದು ರಜೆ ಆರಂಭಗೊಳ್ಳುವ ಮೊದಲೇ ಮಕ್ಕಳಿಗೆ ನಾನಾ ಸಂಸ್ಥೆಗಳು, ಶಾಲೆಗಳು, ಸಂಘಟನೆಗಳಿಂದ ನಾನಾ ರೀತಿಯ ತರಬೇತಿ, ಮನರಂಜನಾ, ಮನೋ ವಿಕಸನ, ಕ್ರೀಡೆಗೆ ಸಂಬಂಧಿಸಿದಂತೆ ಶಿಬಿರಗಳನ್ನು ನಡೆಸಲಾಗುತ್ತದೆ. ಬಹುತೇಕವಾಗಿ ಇಂತಹ ಶಿಬಿರಗಳು ಮಕ್ಕಳ ರಜಾ ದಿನಗಳಲ್ಲಿ ಒಂದಷ್ಟು ಕೌಶಲ್ಯಗಳನ್ನು ಕಲಿತುಕೊಳ್ಳಲು ಪ್ರೇರಣೆ, ನೆರವು ಒದಗಿಸಬಹುದು. ಆದರೆ ಇದೇ ವೇಳೆ ಕೆಲವೊಂದು ಮೋಸ ಮಾಡುವ ಕಂಪೆನಿಗಳಿಂದ ಮಕ್ಕಳ ಮನಸ್ಸನ್ನು ಏಕಾಗ್ರಗೊಳಿಸುವ, ಮಧ್ಯ ಮೆದುಳನ್ನು (ಮಿಡ್ ಬ್ರೇನ್) ಸಕ್ರಿಯಗೊಳಿಸುವ ಕಾರ್ಯಕ್ರಮಗಳು ಆರಂಭಗೊಳ್ಳುತ್ತವೆ. ಇದು ನಿಜಕ್ಕೂ ಆಘಾತಕಾರಿ. ಈ ಬಗ್ಗೆ ನಾನು ಈ ಹಿಂದೆಯೇ ತಿಳಿಸಿದ್ದೇನೆ.

ಇಂತಹ ಮೋಸದ ಜಾಲಗಳು ಪೋಷಕರ ಹಣವನ್ನು ಸುಲಿಯಲೆಂದೇ ಹುಟ್ಟಿಕೊಳ್ಳುತ್ತವೆ. ಬುದ್ಧಿವಂತರ ಜಿಲ್ಲೆಯಾಗಿರುವ ದಕ್ಷಿಣ ಕನ್ನಡದಲ್ಲಿಯೂ ಇಂತಹ ಜಾಲಗಳು ಆಗಾಗ್ಗೆ ಹೊಸ ಹೊಸ ರೂಪದಲ್ಲಿ ತಲೆ ಎತ್ತುತ್ತವೆ. ಡಿಎಂಐಟಿ ಪರೀಕ್ಷೆ (ಡರ್ಮಟಾಗ್ಲೆಪಿಕ್ಸ್ ಮಲ್ಟಿಪಲ್ ಇಂಟೆಲಿಜೆನ್ಸ್ ಟೆಸ್ಟ್) ಎಂಬುದಾಗಿಯೂ ಇದನ್ನು ಕರೆಯಲಾಗುತ್ತದೆ. ತಮ್ಮ ಮಕ್ಕಳು ಎಲ್ಲರಿಗಿಂತ ಮುಂದಿರಬೇಕು, ಇತರ ಮಕ್ಕಳಿಗಿಂತ ಬುದ್ಧಿವಂತರಾಗಿರಬೇಕೆಂದು ಪ್ರತಿಯೊಬ್ಬ ಪೋಷಕರು ಬಯಸುತ್ತಾರೆ, ಆಸೆ ಪಡುತ್ತಾರೆ. ಇದನ್ನೇ ಬಂಡವಾಳವಾಗಿಸಿಕೊಂಡು ಮೋಸ ಮಾಡುವ ಜಾಲಗಾರರು ಮಕ್ಕಳ ಮೆದುಳು ಸಕ್ರಿಯಗೊಳಿಸುವ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ನಡೆಸಿ ಹಣ ಸುಲಿಗೆ ಮಾಡುತ್ತಾರೆ. ಯಾವುದೇ ರೀತಿಯಲ್ಲಿ ಮಕ್ಕಳ ಬುದ್ಧಿ ಮತ್ತೆಯನ್ನು ಅಥವಾ ಅವರೇ ಹೇಳಿಕೊಳ್ಳುವಂತೆ ಮಿಡ್‌ಬ್ರೇನ್ ಆ್ಯಕ್ಟಿವೇಶನ್ ಎಂಬುದು ಮೂರ್ಖತನದ ಪರಮಾವಧಿ. ಈ ರೀತಿಯ ಪ್ರಕ್ರಿಯೆ ನಡೆಸುವುದಾಗಿ ಹೇಳಿಕೊಂಡು ಈವರೆಗೆ ಹುಟ್ಟಿಕೊಂಡ ಯಾವುದೇ ಸಂಸ್ಥೆಗಳು ಆ ಬಗ್ಗೆ ವೈಜ್ಞಾನಿ ಪುರಾವೆಯನ್ನು ಎಲ್ಲಿಯೂ ಒದಗಿಸಿಲ್ಲ.

ದ.ಕ. ಜಿಲ್ಲಾ ವಿಚಾರವಾದಿಗಳ ಸಂಘದ ವತಿಯಿಂದ ಈಗಾಗಲೇ ಇಂತಹ ಜಾಹೀರಾತುಗಳನ್ನು ಕಂಡಾಕ್ಷಣ, ಅಥವಾ ಇಂತಹ ಕಾರ್ಯಕ್ರಮಗಳು ನಡೆಯಲಿವೆ ಎಂಬುದು ಗೊತ್ತಾದಾಕ್ಷಣ ಸಂಬಂಧಪಟ್ಟವರಿಗೆ ಮುಖ್ಯವಾಗಿ ಭಾರತದ ಜಾಹೀರಾತು ಕೌನ್ಸಿಲ್‌ಗೆ ದೂರು ನೀಡುವ ಕೆಲಸ ಮಾಡುತ್ತೇವೆ. ಈ ಹಿಂದೆ ಪುತ್ತೂರಿನಲ್ಲಿ ಈ ಬಗ್ಗೆ ಸಂಸ್ಥೆಯೊಂದು ಹುಟ್ಟಿಕೊಂಡಾಗ ನಾವು ತಕ್ಷಣ ಜಿಲ್ಲಾಧಿಕಾರಿಗೆ ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದೆವು. ಮತ್ತೆ ಮತ್ತೆ ನಾವು ಈ ಬಗ್ಗೆ ಪೋಷಕರಿಗೆ ಮನದಟ್ಟು ಮಾಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ.

ಪೋಷಕರೇ ಹುಷಾರಾಗಿರಿ. ಮತ್ತೆ ಬೇಸಿಗೆ ರಜೆ ಆರಂಭವಾಗಲಿದೆ. ವರ್ಷಪೂರ್ತಿ ಓದಿನ ಒತ್ತಡದಲ್ಲಿ ತಮ್ಮನ್ನು ತಾವು ತರಗತಿಯ ನಾಲ್ಕು ಗೋಡೆಗಳು ಹಾಗೂ ಟ್ಯೂಶನ್ ಎಂಬ ತರಗತಿಯಲ್ಲೇ ಕಳೆಯುವ ಮಕ್ಕಳು ರಜಾ ದಿನಗಳನ್ನಾದರೂ ತಮ್ಮ ಲೋಕದಲ್ಲಿ ಕಳೆಯಲು ಅವಕಾಶ ನೀಡೋಣ. ಅವರ ಭವಿಷ್ಯಕ್ಕೆ ನಾವು ಪ್ರೇರಣೆ ನೀಡೋಣವೇ ಹೊರತು, ಮೋಸದ ಜಾಲಕ್ಕೆ ಬಲಿಯಾಗಿ ಮಕ್ಕಳಲ್ಲಿ ಸುಳ್ಳನ್ನು ಹೇಳಿಸುವ, ಸುಳ್ಳಿಗೆ ತಮ್ಮನ್ನು ಒಗ್ಗಿಸಿಕೊಳ್ಳುವ ಪ್ರಕ್ರಿಯೆಗೆ ಬಲಿಪಶುಗಳನ್ನಾಗಿ ಮಾಡದಿರೋಣ. ಮಕ್ಕಳ ಬೇಸಿಗೆ ರಜೆ ಆನಂದಮಯವಾಗಿರಲಿ ಎಂಬುದು ನಮ್ಮ ನಿಮ್ಮೆಲ್ಲರ ಆಶಯವಾಗಿರಲಿ.

Writer - ನಿರೂಪಣೆ: ಸತ್ಯಾ ಕೆ.

contributor

Editor - ನಿರೂಪಣೆ: ಸತ್ಯಾ ಕೆ.

contributor

Similar News