ಬೋರಿಸ್ ಲಿಯೋದೊವಿಚ್ ಪಾಸ್ತರ್‌ನಾಕ್

Update: 2018-03-24 12:47 GMT

ಪ್ರಖ್ಯಾತ ರಶ್ಯನ್ ಬರಹಗಾರ ಬೋರಿಸ್ ಪಾಸ್ತರ್‌ನಾಕ್‌ನ ಬದುಕು ಹಾಗೂ ಬರಹಗಳ ಬಗ್ಗೆ ಕನ್ನಡ ಲೇಖಕ ಕೇಶವ ಮಳಗಿಯವರ ಬರಹವಿದು. ಕನ್ನಡ ಪುಸ್ತಕ ಪ್ರಾಧಿಕಾರವು ಪ್ರಕಟಿಸಿರುವ ಕೃತಿಯಿಂದ ಈ ಲೇಖನ ಆರಿಸಲಾಗಿದೆ.

ಬೋರಿಸ್ ಲಿಯೋದೊವಿಚ್ ಪಾಸ್ತರ್ ನಾಕ್ (1890-1960) ತನ್ನ ಬದುಕಿನ ಕೊನೆಯ ಮೂರು ವರ್ಷಗಳಲ್ಲಿ ದಿಢೀರನೆ ಅಂತಾರಾಷ್ಟ್ರೀಯ ಸಾಹಿತ್ಯ- ರಾಜಕೀಯ ವೇದಿಕೆಯಲ್ಲಿ ಖ್ಯಾತಿ ಗಳಿಸಿದ. ಆತನ ಪ್ರಸಿದ್ಧಿಗೆ ಒಡೆದು ಕಾಣುವ ಕಾರಣ - ‘ಡಾಕ್ಟರ್ ಜಿವಾಗೋ’ ಕಾದಂಬರಿ; ನೊಬೆಲ್ ಪಾರಿತೋಷಕ. ಸೋವಿಯತ್‌ನಲ್ಲಿ ದಶಕಗಳ ಕಾಲ ಹಿಡಿದಿಟ್ಟಿದ್ದ ಕಲಾವಿದರ ಅಭಿವ್ಯಕ್ತಿ ವಿರೋಧವನ್ನು ಮೀರಿ ಪುಟಿದೆದ್ದು, ಎಲ್ಲರ ಸಾಮೂಹಿಕ ದನಿಯೆಂಬಂತೆ ‘ಡಾಕ್ಟರ್ ಜಿವಾಗೋ’ ದ ಮೂಲಕ ಕಾಣಿಸಿಕೊಂಡಿತ್ತು. ಇಪ್ಪತ್ತರ ದಶಕದಿಂದ ಸೋವಿಯತ್ ಹೊರಗೆ ಅನುಮತಿಯಿಲ್ಲದೆ ಬರಹಗಾರರು ಯಾವ ಕೃತಿಯನ್ನೂ ಪ್ರಕಟಿಸುವಂತಿರಲಿಲ್ಲ. ಈ ರೂಢಿಗತ ಅಂಧ ಸಂಪ್ರದಾಯ ಮುರಿದು ಬೋರಿಸ್ ತೋರಿಸಿದ ಧೈರ್ಯ ಎಲ್ಲ ಕಾಲಕ್ಕೂ ಮೆಚ್ಚುವಂತಹದ್ದೇ. ಆದರೆ ಸ್ಟಾಕ್ ಹೋಂ ತಾನು ನೀಡಿದ ಪಾರಿತೋಷಕ ಅತ್ಯಂತ ಶ್ರೇಷ್ಠ; ಸಮಂಜಸವೆಂದು ರುಜುವಾತು ಪಡಿಸಲು ಎಲ್ಲ ಬೌದ್ಧಿಕ ಚೌಕಟ್ಟಿನೊಳಗೆ ನೋಡಿದರೂ ಪ್ರಶಸ್ತಿಯ ಹಿಂದೆ ರಾಜಕೀಯ ಉದ್ದೇಶಗಳಿದ್ದಿರಬಹುದೇ ಎಂಬ ಅನುಮಾನವನ್ನು ತಳ್ಳಿ ಹಾಕಲಾಗುವುದಿಲ್ಲ. ಪಾಸ್ತರ್‌ನಾಕ್ ವಿಷಯದಲ್ಲಷ್ಟೇ ಅಲ್ಲ, ಅದು ನೀಡುವ ನೊಬೆಲ್ ಕಾಲ ಕಾಲಕ್ಕೆ ಕಟು ಟೀಕೆಗೆ, ವಿಮರ್ಶೆಗೆ ಒಳಗಾಗಿರುವುದನ್ನು ಗಮನಿಸಿದರೆ ಈ ಮಾತಿನ ಅರ್ಥ ಸ್ಪಷ್ಟವಾದೀತು.

ನೊಬೆಲ್ ನೀಡುವ ಮುಂಚೆಯೇ ಬೋರಿಸ್ ತನ್ನ ದೇಶದಲ್ಲಿ ಮೆಚ್ಚಿನ ಕವಿಯಾಗಿದ್ದ; ಅತ್ಯುತ್ತಮ ಅನುವಾದಕನಾಗಿದ್ದ. ಒಂದು ಸಂಕ್ರಮಣ ಸ್ಥಿತಿಯಲ್ಲಿ ಕಾವ್ಯ-ಸಾಹಿತ್ಯ ನಿರ್ಮಾಣ ಮಾಡಿದ ಬೋರಿಸ್ ಒಂದರ್ಥದಲ್ಲಿ ಎಲ್ಲ ಚಳವಳಿಯಿಂದಲೂ ಒಳ್ಳೆಯ ಅಂಶವನ್ನು ಪಡೆದು ಬೆಳೆದು ಬಂದವನೆಂದು ವಿಮರ್ಶಕರು ಗುರ್ತಿಸುತ್ತಾರೆ. ರಶ್ಯನ್ ‘ಸಿಂಬಲಿಸಂ’ ಪ್ರಭಾವದಿಂದ ಬರೆಯಲಾರಂಭಿಸಿ ‘ಭವಿಷ್ಯವಾದಿ’ ಕಾವ್ಯದಿಂದಲೂ ಪಡೆದು, ಆಮೇಲೆ ಕ್ರಾಂತಿನಂತರದ ಸೋವಿಯತ್‌ನಲ್ಲಿ ತನ್ನದೇ ಸ್ವಂತ ಧ್ವನಿ ರೂಢಿಸಿಕೊಂಡು, ಆಧುನಿಕ ಭಾವಗೀತೆಯನ್ನು ಹೊಸ ಅರ್ಥದಲ್ಲಿ ಬೆಳೆಸಿದವನು ಈತ. ಈತನದು ಅತಿಗೆ ಹೋಗದ ಸಮನ್ವಯ ಧ್ವನಿ. ಗುಂಪಿನಲ್ಲಿದ್ದಾಗ ಒಂಟಿಯಂತೆ ಕಾಣುವ; ಒಂಟಿಯಾಗಿದ್ದಾಗ ಗುಂಪಿನ ಗುಂಗಿಗೊಳಗಾದಂತೆ ಈತನ ಸಾಹಿತ್ಯ ಸೃಷ್ಟಿ. ವೈಯಕ್ತಿಕ ನೋವಿಗೆ ಕಾವ್ಯದಲ್ಲಿ ಎಷ್ಟು ಪ್ರಾಮುಖ್ಯತೆ ನೀಡಿದನೊ, ಕ್ರಾಂತಿ, ಸಮಾಜವಾದಕ್ಕೂ ಅಷ್ಟೇ ಮಹತ್ವ ನೀಡಿದ. ಆದರೆ ವ್ಯಕ್ತಿ ವ್ಯಕ್ತಿತ್ವದ ಅಧಿಕೃತತೆಗೆ ಹೆಚ್ಚಿನ ಪ್ರಾಶಸತ್ಯ ‘‘ಎಲ್ಲರಿಗಿಂತಲೂ ತಾನು ಭಿನ್ನ ಎಂದು ತೋರಿಸಿಕೊಳ್ಳುತ್ತಿದ್ದ’’ ಎಂದು ನದೇಜಾಮಾಂದಲ್‌ಷ್ತಮಾ ಹೇಳುತ್ತಾಳೆ. ಹೀಗಾಗಿಯೇ, ಹಲವೊಮ್ಮೆ ಈತನ ದ್ವಂದ್ವ, ಗೊಂದಲದಿಂದಾಗಿ ‘ಬಿಡಿಸದ ಒಗಟಂತೆ ಕಾಣುವ ಇಪ್ಪತ್ತನೆ ಶತಮಾನದ ಮಹತ್ವದ ಲೇಖಕ’ - ಎನ್ನುವ ತೀರ್ಮಾನಕ್ಕೆ ವಿಮರ್ಶಕರು ಬರಬೇಕಾಯಿತು.

ಒಂದು ರೀತಿಯಿಂದ ಬೋರಿಸ್ ತನ್ನ ಸಮಕಾಲೀನರಲ್ಲಿಯೇ ಅದೃಷ್ಟಶಾಲಿ. ಆನಾ ಆಖ್ಮತೋವಾ, ತ್ಸ್ವೇತಯೇವಾ, ಮಾಂದಲ್‌ಷ್ತಮ್, ಟೈಟಿಯನ್ ತಬಿಜ್ಜೆ, ಪಾವೆಲ್ ಯಾಷಿವಿಲಿಯರಂತೆ ತೀವ್ರ ನೋವು-ಸಾವಿಗೆ ಒಳಗಾಗಲಿಲ್ಲ. ಆತನಿಗೆಂದೂ ಹಣದ ಕೊರತೆ ಉಂಟಾಗಲಿಲ್ಲ; ಪುಸ್ತಕದ ಪ್ರಕಟನೆಗೆ, ನಿರ್ದಿಷ್ಟವಾದ ಒಂದೆರಡು ಉದಾಹರಣೆ ಬಿಟ್ಟರೆ, ಎಂದೂ ಪ್ರಯಾಸವಾಗಲಿಲ್ಲ. ಅವನ ಸಂಕಷ್ಟಗಳೇನಿದ್ದರೂ ತಾತ್ಕಾಲಿಕ.

‘ನಮ್ಮ ಮನಸ್ಸಿನೊಳಗೆ ಹೆಡೆಯಾಡುವ ವಿನಾಶದ ದನಿಯನ್ನು ನಾವು ಸದಾ ಹತ್ತಿಕ್ಕುತ್ತಿರಬೇಕು’ ಎಂದ ಬೋರಿಸ್ ಅನುಭವ ಮಾಗದೆ ಕಾಗದದ ಮೇಲೆ ಕಾರಿಕೊಳ್ಳುವ ಚಾಳಿಯನ್ನು ಕಟುವಾಗಿ ವಿರೋಧಿಸುತ್ತಿದ್ದ. ಅನಗತ್ಯವಾಗಿ ವೈಯಕ್ತಿಕ ಬದುಕು-ಉಂಡದ್ದು, ಉಟ್ಟಿದ್ದರ ಕುರಿತು ಬರೆಯುವುದು, ಮಾತಾಡುವುದನ್ನು ಕಂಡರೆ ಅಸಹ್ಯಪಟ್ಟುಕೊಳ್ಳುತ್ತಿದ್ದ.‘ ನನ್ನಲ್ಲಿ ಯಾವ ವ್ಯವಸ್ಥಿತ ದಾಖಲೆಗಳಿಲ್ಲ, ಹಸ್ತಪ್ರತಿ, ಪತ್ರಗಳು ಪೇರಿಸಿಡುವುದು ನನಗೆ ಒಗ್ಗದ್ದು, ಗುಪ್ತವಾಗಿ ಮುಚ್ಚಿಡುವ ಅಮೂಲ್ಯವಾದುದೇನೂ ನನ್ನಲ್ಲಿಲ್ಲ. ನನ್ನ ಕೋಣೆ ಹೊಟೇಲಿನ ಕೋಣೆಯಂತೆ ಸರಳ, ಸ್ವಚ್ಛ, ಸಾಧಾರಣ ವಿದ್ಯಾರ್ಥಿಯಂತೆ ಬದುಕುವುದು ನನಗಿಷ್ಟ’ ಎಂದು ಒಂದೆಡೆ ಆತ ಬರೆದುಕೊಂಡ. ಹೀಗಾಗಿಯೇ ಅವನ ಎರಡೂ ಆತ್ಮ ವಿವರಣೆಯಲ್ಲಿ ತನ್ನ ವೈಯಕ್ತಿಕ ಬದುಕಿಗಿಂತ ಹೆಚ್ಚಾಗಿ, ತನ್ನ ಮೇಲೆ ಪ್ರಭಾವ ಬೀರಿದವರ ಕುರಿತು, ತನ್ನ ಕಾಲದ ವೈರುಧ್ಯಗಳ ಕುರಿತು, ಸಾಂಸ್ಕೃತಿಕ ವಾತಾವರಣದ ಕುರಿತು ಬರೆದ. ಅವನ ಆತ್ಮ ವಿವರಣೆ ಬಿಟ್ಟರೆ ತನ್ನ ಗೆಳೆಯರಿಗೆ ಬೋರಿಸ್ ಬರೆದ ಪತ್ರಗಳಲ್ಲಿ ಅವನ ತುಂಡು ತುಂಡಾದ ವೈಯಕ್ತಿಕ ಜೀವನವನ್ನು ಕಾಣುತ್ತೇವೆ. ಅಲ್ಲಿ ಕೂಡ ಸಾಹಿತ್ಯ-ಕಲೆ-ವಿಮರ್ಶೆಯ ಬಗೆಗೆ ಅವನ ಆಸಕ್ತಿ ಅಧಿಕ. ಆದ್ದರಿಂದಲೇ ಅವನ ಕಥೆ, ಕಾವ್ಯ, ಕಾದಂಬರಿಯಷ್ಟೇ ಈ ಪತ್ರಗಳು ಸಾಹಿತ್ಯ ಪ್ರಾಧಾನ್ಯ ಪಡೆದಿವೆ.

ರಶ್ಯಾದ ಆಡಳಿತ, ಕಮ್ಯೂನಿಸಂ ಬಗ್ಗೆ ಅನುಮಾನ, ಭಿನ್ನಾಭಿಪ್ರಾಯವಿದ್ದವರೂ ಕೂಡಾ ಅಲ್ಲಿನ ಸಾಹಿತ್ಯವನ್ನು ಪ್ರೀತಿಸದೆ ಇರಲಾರರು; ಅಲ್ಲಿನ ಸಾಹಿತ್ಯ ಪರಂಪರೆಗೆ ಅಂಥ ಸೆಳೆತ, ಪಾಶ್ಚಾತ್ಯ ವ್ಯಕ್ತಿವಾದಿ ಸಾಹಿತ್ಯ ಸಿದ್ಧಾಂತಗಳು ಬರಡು ಬೌದ್ಧಿಕ ಕಸರತ್ತಾಗಿ ಸೊರಗುತ್ತಿದ್ದ ವೇಳೆಯಲ್ಲೇ ಇಲ್ಲಿನ ಸಾಹಿತ್ಯ ಜೀವಂತಿಕೆಯಿಂದ ಪುಟಿಯುತ್ತಿತ್ತು. ಇಲ್ಲಿನ ಭೌಗೋಳಿಕ ಶ್ರೀಮಂತಿಕೆ ಕೂಡಾ ಅಂಥದ್ದೇ. ಸಾಹಿತಿಗಳು ಅದನ್ನು ಸ್ಪರ್ಶಿಸಿದ್ದಲ್ಲೆಲ್ಲ ಪರಿಮಳ ಸೂಸುವಂಥದು. ಹಾಗೆಂದೇ ರಶ್ಯಾದ ಪ್ರಮುಖ ಸಾಹಿತಿಗಳು ಸಮಾಜ, ನಿಸರ್ಗ, ವ್ಯಕ್ತಿ, ಒಳಿತು-ಕೆಡಕು, ಜೀವ-ಮರಣ, ಪ್ರೇಮ-ಕಾಮ ಎಲ್ಲದರ ಬಗ್ಗೆಯೂ ಒಂದೇ ಸಲಕ್ಕೆ ಬರೆಯಬಲ್ಲರು. ಪ್ರೇಮದ ಕತೆ ಹೇಳುತ್ತಲೇ ಅಧ್ಯಾತ್ಮಕ್ಕೆ ನೆಗೆಯಬಲ್ಲರು. ಟಾಲ್‌ಸ್ಟಾಯ್, ದಸ್ತಯೇವಸ್ಕಿ, ಬ್ಲೋಕ್, ಚೆಕಾಪ್, ಗೋರ್ಕಿ, ತುರ್ಗನೆವ್, ಆಖ್ಮತೋವಾ, ಯೆತಿಷಂಕೋರಂಥ ಬರಹಗಾರರು ರಶ್ಯನ್ ಮಣ್ಣಿನಲ್ಲಿ ಮಾತ್ರ ಹುಟ್ಟಬಲ್ಲರೇನೋ ಎಂಬಷ್ಟು ಅವರಿಗೂ-ರಶ್ಯನ್ ನೆಲಕ್ಕೂ ಅವಿನಾಭಾವ ಸಂಬಂಧ. ಪಶ್ಚಿಮದ ಕಸರತ್ತು ಇಲ್ಲಿ ಸಹಜ-ಸರಳ ಸೃಷ್ಟಿಕ್ರಿಯೆಯಾಗುತ್ತದೆ, ಅದರ ಹಿರಿಮೆ-ಮಹತ್ವ ಇರುವುದು ಕೂಡ ಇಂಥಲ್ಲೇ.

ಈ ಹಿನ್ನೆಲೆಯಲ್ಲಿ ರಶ್ಯಾದ ಪ್ರಮುಖ ಕವಿ, ಬರಹಗಾರ ಪಾಸ್ತರ್‌ನಾಕ್‌ನನ್ನು ಓದಿದಾಗ ನಿರಾಶೆಯಾಗಬಹುದು. ಇದಕ್ಕೆ ಕಾರಣ - ಅವನ ಡಾಕ್ಟರ್ ಜಿವಾಗೋ ಕಾದಂಬರಿಯನ್ನು ಬಿಟ್ಟರೆ ಇಂಗ್ಲಿಷಿನಲ್ಲಿ ಪ್ರಾತಿನಿಧಿಕ ಬರಹಗಳು ದೊರೆಯದಿರುವುದು. ರಶ್ಯನ್-ಇಂಗ್ಲಿಷ್ ಆವೃತ್ತಿಗಳಲ್ಲಿ ಕತ್ತರಿಪ್ರಯೋಗಕ್ಕೆ ಒಳಗಾದ ತುಣುಕು ಬರಹಗಳಿಂದ ಯಾವುದೇ ಸಾಹಿತಿಯ ಒಟ್ಟು ಸಾಧನೆ ಅಳೆಯುವುದು ಕಷ್ಟ. ಜತೆಗೆ ರಶ್ಯನ್ನರು ಮಾಡಿದ ಇಂಗ್ಲಿಷ್ ಅನುವಾದಗಳು ಬರಹದ ಅರ್ಥ; ಸೌಂದರ್ಯಕ್ಕಿಂತ ಹೆಚ್ಚಾಗಿ ಮೂಲಕ್ಕೆ ಅಂಧನಿಷ್ಠತೆ ತೋರುವುದರಿಂದ ಓದುವುದೇ ದುಸ್ತರವಾಗಿಸುತ್ತವೆ. ಸ್ವತಃ ಅತ್ಯುತ್ತಮ ಅನುವಾದಕನೆಂದು ತಾಯ್ನೆಡಿನಲ್ಲಿ ಹೆಸರು ಗಳಿಸಿದ್ದ ಪಾಸ್ತರ್‌ನಾಕ್‌ನ ಇಂಗ್ಲಿಷ್ ಅನುವಾದಗಳ ಮೂಲಕ ರಶ್ಯನ್ನರು ಅವನ ಇತಿಶ್ರೀ ಹಾಡುವಂತಿವೆ. 1958ರಿಂದ ರಶ್ಯನ್ ಅಧಿಕೃತ ಪ್ರಕಾಶಕರಿಂದ ಬಹಿಷ್ಕಾರಕ್ಕೆ ಒಳಗಾಗಿದ್ದ ಪಾಸ್ತರ್‌ನಾಕ್ ಬರಹಗಳು ಗೊರ್ಬಚೇವ್‌ರ ಪೆರಸ್ತ್ರೋಯ್ಕ ಹಾಗೂ ಗ್ಲಾಸ್‌ನಾಸ್ತ್ ದೆಸೆಯಿಂದ ಮೊದಲ ಬಾರಿಗೆ 1990 ರಲ್ಲಿ ಎವ್ಗೆನಿ ಪಾಸ್ತರ್‌ನಾಕ್ ಸಂಪಾದಿಸಿದ ಬೋರಿಸ್ ಪಾಸ್ತರ್‌ನಾಕ್ ಆಯ್ದ ಬರಹಗಳನ್ನು ಪ್ರಕಟಿಸಿದರು. ಕನ್ನಡದಲ್ಲಿಯೂ ಬೇರೆ ರಶ್ಯನ್ ಬರಹಗಾರರಂತೆ ಇವನ ಅನುವಾದ ಕಾಣಸಿಗದು. ಎಸ್. ದಿವಾಕರ್ ‘ಕಥಾ ಜಗತ್ತು’ನಲ್ಲಿ ಅನುವಾದಿಸಿದ ತೂಲಾದಿಂದ ಬಂದ ಪತ್ರಗಳು ಕಥೆ ಅಡಿಗರ ‘ಕಾವ್ಯಜಗತ್ತು’ ಸಂಗ್ರಹದಲ್ಲಿ ಅನುವಾದಿಸಿದ ಮೂರು-ನಾಲ್ಕು ಕವಿತೆ ಬಿಟ್ಟರೆ ಯಾವ ಅನುವಾದವನ್ನೂ ನೋಡಿದ ನೆನಪು ನನಗಿಲ್ಲ. ಇದ್ದರೆ ನನ್ನ ಅಜ್ಞಾನಕ್ಕೆ ಮನ್ನಣೆ ಇರಲಿ.

ಬೋರಿಸ್ ಪಾಸ್ತರ್‌ನಾಕ್ ಒಂದರ್ಥದಲ್ಲಿ ಪಕ್ಕಾ ಮಾಸ್ಕೋ ನಗರದ ಮಧ್ಯಮ ವರ್ಗದ ಲೇಖಕ. ಅವನ ಸಂವೇದನೆ, ಬರಹ ಎಲ್ಲ ನಗರದ್ದೇ, ಶಿಷ್ಟ ಸಾಹಿತ್ಯವೆಂದು ಕರೆಯಬಹುದಾದಷ್ಟು ಸುಸಂಸ್ಕೃತ ಬರಹ ಅವನದು.

ತನ್ನ ಸಮಕಾಲೀನ ಬರಹಗಾರರಿಂದ ಪ್ರೀತಿ-ದ್ವೇಷ ಎರಡನ್ನೂ ಈತ ಸಂಪಾದಿಸಿದ್ದ. ಇವನ ದ್ವಂದ್ವ ನೀತಿ ಯಾವಾಗಲೂ ಗೆಳೆಯರಿಂದ ಕಟು ವಿಮರ್ಶೆಗೆ ಒಳಗಾಗುತ್ತಿದ್ದವು. ಈತನೊಂದಿಗೆ ಮುಕ್ತ ಮಾತುಕತೆ ಎಂದಿಗೂ ಸಾಧ್ಯವಿಲ್ಲ, ಏನಿದ್ದರೂ ಅವನು ಹೇಳುತ್ತಾನೆ; ನಾವು ಕೇಳಬೇಕು. (ಗ್ಲೋದ್‌ಕೊವ್); ‘ಈ ವ್ಯಕ್ತಿಯ ಕಪಟತನ ಸಹಿಸುವುದು ಅಸಾಧ್ಯ. (ಆಖ್ಮತೊವಾ); ಇವನಿಗೆ ಸಹನೆಯೇ ಇಲ್ಲ, ಯಾವಾಗ ವಿನಯ ಮರೆಯಾಗಿ ದುರಹಂಕಾರ ತಲೆ ಎತ್ತುತ್ತದೋ ಗೊತ್ತಾಗುವುದಿಲ್ಲ (ವಿನೋಕರ್)’ ಎಂಬುದು ಅವನ ಸಮಕಾಲೀನರ ಅಭಿಪ್ರಾಯವಾದರೂ ಬೋರಿಸ್ ಸ್ವಭಾವತಃ ಸ್ನೇಹ ಜೀವಿಯಾಗಿದ್ದ, ಸ್ನೇಹಕ್ಕಾಗಿ ಏನೆಲ್ಲವನ್ನೂ ಮಾಡಬಲ್ಲವನಾಗಿದ್ದ ಎಂಬುದೂ ಸುಳ್ಳಲ್ಲ. ಇದಕ್ಕೆ ಉದಾಹರಣೆ ಅವನ ಬದುಕಿನಿಂದಲೇ ಸಿಗುತ್ತದೆ.

ಬೋರಿಸ್ ಪಾಸ್ತರ್‌ನಾಕ್ ಒಂದರ್ಥದಲ್ಲಿ ಪಕ್ಕಾ ಮಾಸ್ಕೋ ನಗರದ ಮಧ್ಯಮ ವರ್ಗದ ಲೇಖಕ. ಅವನ ಸಂವೇದನೆ, ಬರಹ ಎಲ್ಲ ನಗರದ್ದೇ, ಶಿಷ್ಟ ಸಾಹಿತ್ಯವೆಂದು ಕರೆಯಬಹುದಾದಷ್ಟು ಸುಸಂಸ್ಕೃತ ಬರಹ ಅವನದು.ತನ್ನ ಸಮಕಾಲೀನ ಬರಹಗಾರರಿಂದ ಪ್ರೀತಿ-ದ್ವೇಷ ಎರಡನ್ನೂ ಈತ ಸಂಪಾದಿಸಿದ್ದ. ಇವನ ದ್ವಂದ್ವ ನೀತಿ ಯಾವಾಗಲೂ ಗೆಳೆಯರಿಂದ ಕಟು ವಿಮರ್ಶೆಗೆ ಒಳಗಾಗುತ್ತಿದ್ದವು. ಈತನೊಂದಿಗೆ ಮುಕ್ತ ಮಾತುಕತೆ ಎಂದಿಗೂ ಸಾಧ್ಯವಿಲ್ಲ, ಏನಿದ್ದರೂ ಅವನು ಹೇಳುತ್ತಾನೆ; ನಾವು ಕೇಳಬೇಕು.

Writer - ಕೇಶವ ಮಳಗಿ

contributor

Editor - ಕೇಶವ ಮಳಗಿ

contributor

Similar News