ಒಂದು ಇಂಚು ಮಳೆ ಎಂದರೆ?

Update: 2018-03-24 13:43 GMT

ಮಲೆನಾಡಿನ ಭೂ ಪ್ರದೇಶಗಳಿಗೆ ಮಳೆಯ ನೀರನ್ನು ಇಂಗಿಸಿಕೊಳ್ಳುವ ಮತ್ತು ಇಳಿಜಾರಿನ ಭೂ ಪ್ರದೇಶದಿಂದಾಗಿ ಹರಿದು ಹೋಗುವುದರಿಂದ ಆ ರೀತಿಯ ಅವಾಂತರಕ್ಕೆ ಕಾರಣವಿಲ್ಲವಾಗಿದೆ. ಭೂಮಿಯಲ್ಲಿ ನೀರು ಇಂಗಿಸಿಕೊಳ್ಳುವ ವ್ಯವಸ್ಥೆಯಿಲ್ಲದ ಬಯಲು ಸೀಮೆಯಲ್ಲಿ ಈ ಪಾಟಿ ಇಂಚುಗಟ್ಟಲೆ ಮಳೆ ಬಿದ್ದರೆ ಊರೇ ಮುಳುಗಿ ಹೋಗುತ್ತದೆ. ನಮ್ಮ ಘಾಟಿ ಗುಡ್ಡದ ಕಾಡುಗಳಲ್ಲೆಲ್ಲ ಅರ್ಧಕ್ಕಿಂತ ಹೆಚ್ಚು ಅಂದರೆ ಬಿದ್ದ ಮಳೆಯಲ್ಲಿ ಶೇ.56ಕ್ಕಿಂತಲೂ ಹೆಚ್ಚು ನೀರು ಇಂಗಿಸಿಕೊಳ್ಳುವ ಶಕ್ತಿ ಇದೆ.

ಒಂದು ಇಂಚು ಮಳೆ ಸುರಿದರೆ ಭೂಮಿಗೆ ಎಷ್ಟು ನೀರು ಬೀಳುತ್ತದೆ? ಮಳೆ ಬಿದ್ದ ಪ್ರಮಾಣವನ್ನು ಮೊದಲು ಇಂಪೀರಿಯಲ್ ಸಿಸ್ಟಮ್‌ನಲ್ಲಿ ಅಳೆಯುತ್ತಿದ್ದರು. 1824ರಲ್ಲಿ ಬ್ರಿಟಿಷರು ಮಳೆಯ ನೀರಿನ ಅಳತೆಯ ಪ್ರಮಾಣವನ್ನು ಸೆಂಟ್ಸ್ ಮತ್ತು ಇಂಚುಗಳಲ್ಲಿ ಅಳೆಯಲು ಪ್ರಾರಂಭಿಸಿದರು. ಒಂದು ಇಂಚಿಗೆ 100 ಸೆಂಟ್ಸ್ ಲೆಕ್ಕದಲ್ಲಿ 100 ಸೆಂಟ್ಸ್ ಅಥವಾ ಒಂದು ಇಂಚು ಮಳೆ ಬಂದಿದೆ ಎಂದರೆ ಅದು 1,02,789 ಲೀ. ನೀರು ಒಂದು ಎಕರೆ ಪ್ರದೇಶದಲ್ಲಿ ಬಿದ್ದಿದೆ ಎಂದು ಅರ್ಥ. ಒಂದು ಎಕರೆಗೆ 42,000 ಚದರ ಅಡಿಗಳು. ಅಂದರೆ ಒಂದು ಇಂಚು ಮಳೆ ಬಿದ್ದಿದೆ ಎಂದರೆ ಒಂದು ಚದರ ಅಡಿ ಪ್ರದೇಶದಲ್ಲಿ ಹತ್ತಿರ ಹತ್ತಿರ 2.5 ಲೀ. ನೀರು ಬಿದ್ದಿದೆ ಎಂದು ಅರ್ಥ.

ನಮ್ಮ ಘಾಟಿ ಗುಡ್ಡಗಳ ಪ್ರದೇಶಗಳಾದ ಆಗುಂಬೆ ಮಾಸ್ತಿಕಟ್ಟೆ ಭಗವತಿ ಕುದುರೆಮುಖ ಇಂತಹ ದಟ್ಟ ಮಳೆನಾಡಿನಲ್ಲಿ 300-400 ಇಂಚು ವಾರ್ಷಿಕ ಮಳೆಯಾಗುತ್ತದೆ. ಅಂದರೆ ಒಂದು ಅಡಿಗೆ 12 ಇಂಚು ಲೆಕ್ಕದಲ್ಲಿ ಸರಾಸರಿ 300 ಇಂಚಿಗೆ 25 ಅಡಿ ಆಗುತ್ತದೆ. ಅಂದರೆ ನಮ್ಮ ಮಲೆನಾಡಿನ ಘಾಟಿಗುಡ್ಡದ ಪ್ರದೇಶದಲ್ಲೆಲ್ಲ 25 ಅಡಿಯಷ್ಟು ಎತ್ತರದ ನೀರು ಬಿದ್ದಿರುತ್ತದೆ. ಅಷ್ಟೊಂದು ಅಗಾಧ ಪ್ರಮಾಣದ ನೀರು ಹರಿದು ಹೋಗದಿದ್ದರೆ ಮಲೆನಾಡಿನ ಈ ಎಲ್ಲಾ ಪ್ರದೇಶ 25 ಅಡಿ ನೀರಿನ ಆಳದಲ್ಲಿ ಮುಳುಗಿ ಹೋಗಿರುತ್ತದೆ ಅಲ್ಲವೇ. ಇನ್ನು ಘಾಟಿ ಗುಡ್ಡಗಳಿಂದ ಎಂಟು 10 ಕಿ.ಮೀ. ದೂರದಲ್ಲಿರುವ ನಮ್ಮ ಶೃಂಗೇರಿಯಲ್ಲೇ 200 ಇಂಚಿಗಿಂತಲೂ ಹೆಚ್ಚು ಮಳೆ ಬೀಳುತ್ತದೆ. ಶೃಂಗೇರಿ ಪಟ್ಟಣದ ವಾರ್ಷಿಕ ಸರಾಸರಿ ಮಳೆಯ ಪ್ರಮಾಣವೇ 150 ಇಂಚು. ಈ ರೀತಿ ಮಲೆನಾಡಿನ ಎಲ್ಲ ಪ್ರದೇಶಗಳಲ್ಲೂ ಬೀಳುವ ಮಳೆಯ ಲೆಕ್ಕಾಚಾರವನ್ನು ಆಯಾಯ ಪ್ರದೇಶದಲ್ಲಿ ಬಿದ್ದ ಮಳೆಯ ನೀರು ಹರಿದು ಹೋಗದೆ ಅಥವಾ ಇಂಗಿ ಹೋಗದೆ ಹಾಗೆಯೇ ಸಂಗ್ರಹಗೊಂಡರೆ ಮಲೆನಾಡೆಲ್ಲ ಜಲಾವೃತಗೊಂಡಂತೆ. ಮುಂಗಾರು ಮಳೆಯಿಂದಾಗಿ ಮಲೆನಾಡು ಎಷ್ಟು ಅಡಿ ನೀರಿನ ಆಳದಲ್ಲಿ ಮುಳುಗಿರುತ್ತದೆ ಎಂಬುದನ್ನು ಕಲ್ಪಿಸಿಕೊಳ್ಳಬಹುದು.

ಆದರೆ ಮಲೆನಾಡಿನ ಭೂ ಪ್ರದೇಶಗಳಿಗೆ ಮಳೆಯ ನೀರನ್ನು ಇಂಗಿಸಿಕೊಳ್ಳುವ ಮತ್ತು ಇಳಿಜಾರಿನ ಭೂ ಪ್ರದೇಶದಿಂದಾಗಿ ಹರಿದು ಹೋಗುವುದರಿಂದ ಆ ರೀತಿಯ ಅವಾಂತರಕ್ಕೆ ಕಾರಣವಿಲ್ಲವಾಗಿದೆ. ಭೂಮಿಯಲ್ಲಿ ನೀರು ಇಂಗಿಸಿಕೊಳ್ಳುವ ವ್ಯವಸ್ಥೆಯಿಲ್ಲದ ಬಯಲು ಸೀಮೆಯಲ್ಲಿ ಈ ಪಾಟಿ ಇಂಚುಗಟ್ಟಲೆ ಮಳೆ ಬಿದ್ದರೆ ಊರೇ ಮುಳುಗಿ ಹೋಗುತ್ತದೆ. ನಮ್ಮ ಘಾಟಿ ಗುಡ್ಡದ ಕಾಡುಗಳೆಲ್ಲೆಲ್ಲ ಅರ್ಧಕ್ಕಿಂತ ಹೆಚ್ಚು ಅಂದರೆ ಬಿದ್ದ ಮಳೆಯಲ್ಲಿ ಶೇ.56ಕ್ಕಿಂತಲೂ ಹೆಚ್ಚು ನೀರು ಇಂಗಿಸಿಕೊಳ್ಳುವ ಶಕ್ತಿ ಇದೆ. ಒಂದು ಇಂಚು ಮಳೆಯಿಂದ 2.5 ಲೀ. ನೀರು ಬಿದ್ದರೆ ಸರಾಸರಿ ಮುನ್ನೂರು ಇಂಚಿಗೆ ಏಳುನೂರ ಐವತ್ತು ಲೀಟರ್ ನೀರಾಗುತ್ತದೆ. ಅಂದರೆ 300 ಇಂಚು ಮಳೆ ಸುರಿಯುವ ಪ್ರದೇಶದ ಒಂದು ಚದರ ಅಡಿ ಜಾಗದಲ್ಲಿ 750 ಲೀಟರ್ ನೀರು ಬೀಳುತ್ತದೆ. ಅಂತಹ ಒಂದು ಚದರ ಅಡಿ ಜಾಗದಲ್ಲಿ 300ರಿಂದ 350 ಲೀಟರ್ ಇಂಗಿಸಿಕೊಳ್ಳುವ ಅದ್ಭುತವೂ ವಿಶೇಷವೂ ಆದ ಪರಿಸರ ಏರ್ಪಾಡು ಇದೆ. ಆ ಕಾರಣದಿಂದಲೇ ಈ ಎಲ್ಲಾ ಗುಡ್ಡಗಳು ನೂರಾರು ಜೀವನದಿಗಳ ಉಗಮಸ್ಥಾನಗಳಾಗಿದ್ದಾವೆ. ನಮ್ಮ ಘಾಟಿ ಗುಡ್ಡದ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಒಂದು ದೊಡ್ಡಮರ 50, 60 ಚದರ ಅಡಿ ಹಬ್ಬಿರುತ್ತದೆ. ಆ ಮರದ ಮೇಲೆ ಬಿದ್ದ ಅಗಾಧ ಪ್ರಮಾಣದ ನೀರೆಲ್ಲವೂ ಅದರ ಕಾಂಡದ ಮೂಲಕವೇ ಭೂಮಿಗೆ ಹರಿಯುವಂತಹ ಅದರ ಎಲೆಗಳು ಇರುತ್ತವೆ. ಅಂತಹ ಮರಗಳ ತಲೆಯ ಮೇಲೆ ಬೀಳುವ 1,000 ಲೀಟರ್ ನೀರು ತಮ್ಮ ಕಾಂಡದ ಮೂಲಕ ಹರಿದು ಬಂದು ತಮ್ಮ ಬೇರುಗಳ ಮೂಲಕ ಭೂಮಿಯಲ್ಲಿ ಇಂಗಿಸಿಕೊಳ್ಳುವಂತಹ ವ್ಯವಸ್ಥೆ ಇದೆ. ಮೃಗಶಿರ ಮಳೆಯಿಂದ ಶುರುವಾದ ಮುಂಗಾರು ಸತತವಾಗಿ 60 ದಿನಗಳಿಗೂ ಹೆಚ್ಚು ನಿರಂತರವಾಗಿ ಸುರಿದು ನೂರಾರು ಇಂಚು ಮಳೆ ಬಿದ್ದಾಗ ಮಲೆನಾಡಿನ ಭೂಮಿಯ ಒಳಗೆಲ್ಲ ನೀರು ತುಂಬಿಕೊಂಡಿರುತ್ತದೆ. ಆಶ್ಲೇಷಾ ಮಳೆಯ ಹೊತ್ತಿಗೆ ಮರದ ಬೇರುಗಳೇ ಅಲುಗಾಡುವಷ್ಟು ಗಾಳಿ ಜೋರಾಗಿ ಬೀಸುತ್ತದೆ. ಸಾಲದಕ್ಕೆ ಭೂಮಿ ನಡುಗುವಂತಹ ಗುಡುಗುಗಳು ಬರುತ್ತವೆ. ಭೂಮಿಯ ಹೊಟ್ಟೆ ಜಲಾವೃತಗೊಂಡು ಉಬ್ಬರಿಸುತ್ತದೆ. ಆಶ್ಲೇಷಾ ಮಳೆಯ ಉಡ್ರು ಗಾಳಿಯಿಂದ ಮರದ ಬೇರುಗಳೇ ಅಲುಗಾಡಿ ಭೂಮಿಯೆಲ್ಲಾ ಕಂಪನವಾಗುತ್ತದೆ. ಆ ಸಂದರ್ಭದಲ್ಲಿ ಮಲೆನಾಡಿನ ಎಲ್ಲೆಂದರಲ್ಲಿ ಜಲಬುಗ್ಗೆಗಳು ಚಿಮ್ಮುತ್ತವೆ. ಆ ಜಲಬುಗ್ಗೆಗಳು ಅಕ್ಟೋಬರ್ ನವೆಂಬರ್ ತಿಂಗಳಿನವರೆಗೂ ಉಕ್ಕಿ ಹರಿಯುತ್ತವೆ. ಮಲೆನಾಡಿನ ಮಳೆ ಆಶ್ರಯದ ಮಕ್ಕಿಗದ್ದೆಗಳಿಗೆ ನೀರಾಗುವುದೇ ಇಂತಹ ನೀರಿನ ವರ್ತೆಗಳಿಂದ. ಆ ಜಲ ಬುಗ್ಗೆಗಳನ್ನು ಒರತೆಗಳನ್ನೆನ್ನುತ್ತಾರೆ. ಮುಂಗಾರು ಮಳೆ ಸರಾಸರಿಯಾಗಿ ವಾರ್ಷಿಕ ಮಳೆ ಸುರಿದರೆ ಒರತೆಗಳು ಹುಟ್ಟುತ್ತವೆ. ಮಕ್ಕಿಗದ್ದೆಗಳ ಬೇಸಾಯವೂ ಸಾಂಗವಾಗಿ ಸಾಗಿ ಪೈರು ಸೊಂಪಾಗಿ ಬೆಳೆಯುತ್ತದೆ.

ಯಾವ ಮಳೆ ಎಷ್ಟು ದಿನ?

ಮಳೆಯ ನಕ್ಷತ್ರಗಳು ಸಾಮಾನ್ಯವಾಗಿ ಎರಡು ವಾರಗಳು ಇರುತ್ತವೆ. ಮೊದಲನೆಯ ವಾರವನ್ನು ಮೊದಲನೆಯ ಪಾದವೆಂದು ಮಳೆ ಹಿಡಿದ ದಿನದಿಂದ 8 ದಿನಕ್ಕೆ ಲೆಕ್ಕ ಹಾಕುತ್ತಾರೆ. ಮೊದನೆಯ ಪಾದದಲ್ಲಿ ಮಳೆ ಬಾರದಿದ್ದರೆ ಎರಡನೆಯ ಪಾದದಲ್ಲಿ ಬರುತ್ತದೆ ಎಂದು ಮೊದಲನೆಯ ಪಾದದಲ್ಲಿ ಹೆಚ್ಚು ಮಳೆ ಬಂದರೆ ಎರಡನೆಯ ಪಾದದಲ್ಲಿ ಹೊಳು ಆಗುತ್ತದೆ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಮಳೆ ಎಂದರೆ ಮಲೆನಾಡು. ಮಲೆನಾಡು ಎಂದರೆ ಮಳೆನಾಡು. ಕಳೆದ ನೂರು ವರ್ಷಗಳಲ್ಲಿ ಮಳೆನಾಡಿನಲ್ಲಿ ಸತತವಾಗಿ ಎರಡು ವರ್ಷ ಮಳೆ ಬಾರದ ವರ್ಷಗಳಿಲ್ಲ. ಆದರೆ 2014-15 ಮತ್ತು 2015-16ರ ಈ ಎರಡೂ ವರ್ಷ ಸಾಕಷ್ಟು ಮಳೆಯಾಗಿರುವುದಿಲ್ಲ. ಮಲೆನಾಡಿನಲ್ಲಿ ಮಳೆಯಾಗದಿದ್ದರೆ ಅದಕ್ಕೆ ಮಾತ್ರ ಬರಗಾಲವೆನ್ನುತ್ತಾರೆ. ಮಲೆನಾಡಿನಲ್ಲಿಯೇ ಬರಗಾಲ ಬಂದರೆ ಬಯಲು ನಾಡಿನಲ್ಲಿ ಕುಡಿಯುವ ನೀರಿಗೇ ತತ್ವಾರ.

 

 

 

Writer - ಕಲ್ಕುಳಿ ವಿಠಲ ಹೆಗಡೆ

contributor

Editor - ಕಲ್ಕುಳಿ ವಿಠಲ ಹೆಗಡೆ

contributor

Similar News