ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ: ಎಸ್‌ಎಫ್‌ಐ ಖಂಡನೆ

Update: 2018-03-24 17:17 GMT

ಬೆಂಗಳೂರು, ಮಾ.24: ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್‌ಯು)ದಲ್ಲಿ ನ್ಯಾಯಯುತ ಬೇಡಿಕೆಗಳಿಗಾಗಿ ಶಾಂತಿಯುತ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ನಡೆಸಿರುವುದನ್ನು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ಖಂಡಿಸಿದೆ.

ಕೇಂದ್ರ ಸರಕಾರ ಜೆಎನ್‌ಯು ಸೇರಿದಂತೆ 60 ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸ್ವಾಯತ್ತತೆ ಹೆಸರಿನಲ್ಲಿ ಹಣಕಾಸು ನೆರವು ನೀಡುವುದರಿಂದ ನುಣಚಿಕೊಳ್ಳಲು ಪ್ರಯತ್ನ ಮಾಡುತ್ತಿದ್ದನ್ನು ವಿರೋಧಿಸಿ ಬೃಹತ್ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಜೆಎನ್‌ಯು ಕ್ಯಾಂಪಸ್‌ನಿಂದ ಸಂಸತ್ತಿನವರೆಗೂ ಶಾಂತಿಯುತ ಪ್ರತಿಭಟನಾ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.

ಆದರೆ, ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಏಕಾಏಕಿ ಪೊಲೀಸರು ಲಾಠಿ ಪ್ರಹಾರ ಹಾಗೂ ಜಲ ಪಿರಂಗಿಗಳನ್ನು ಬಳಸಿ ವಿದ್ಯಾರ್ಥಿಗಳನ್ನು ಚದುರಿಸಲು ಪ್ರಯತ್ನಿಸಿರುವುದು ಅತ್ಯಂತ ಖಂಡನೀಯ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಹಕ್ಕುಗಳನ್ನು ಕೇಳಿ ಪಡೆಯಲು ಅವಕಾಶವಿಲ್ಲದಂತಾಗಿದೆ ಎಂದು ಎಸ್‌ಎಫ್‌ಐ ರಾಜ್ಯಾಧ್ಯಕ್ಷ ವಿ.ಅಂಬರೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಣಕಾಸಿನ ವ್ಯವಸ್ಥೆಯನ್ನು ಶಿಕ್ಷಣ ಸಂಸ್ಥೆಯೇ ಹೊರುವುದು ಅಥವಾ ವಿದೇಶಗಳಿಂದ ಹಣ ಪಡೆಯಲು ಅಧಿಕಾರ ನೀಡುವ ಮೂಲಕ ಶಿಕ್ಷಣದ ವ್ಯಾಪಾರೀಕರಣಕ್ಕೆ ಎಲ್ಲಾ ಪೂರ್ವಸಿದ್ಧತೆಯನ್ನು ಕೇಂದ್ರ ಸರಕಾರ ಮಾಡಿಕೊಡುತ್ತಿದೆ. ಶೈಕ್ಷಣಿಕ ಸಂಸ್ಥೆಗಳು ವೆಚ್ಚವನ್ನೆಲ್ಲಾ ವಿದ್ಯಾರ್ಥಿಗಳ ಮೇಲೆ ಹಾಕಿ, ಲಕ್ಷಾಂತರ ರೂ.ಗಳನ್ನು ವಿದ್ಯಾರ್ಥಿಗಳಿಂದಲೇ ವಸೂಲಿ ಮಾಡುವಂತೆ ಸೂಚಿಸಿದಂತೆ ಇದೆ. ಈಗಾಗಲೇ ದೇಶದಲ್ಲಿ ಉನ್ನತ ಶಿಕ್ಷಣ ಅತ್ಯಂತ ದುಬಾರಿಯಾಗಿದ್ದು, ದಲಿತ, ಹಿಂದುಳಿದ, ಅಲ್ಪಸಂಖ್ಯಾತರು ಶಿಕ್ಷಣದಿಂದ ದೂರ ಮಾಡುವ ಹುನ್ನಾರ ಮಾಡಲಾಗುತ್ತಿದೆ ಎಂದು ಅವರು ಆರೆಪಿಸಿದ್ದಾರೆ.

ಇತ್ತೀಚಿಗೆ ಜೆಎನ್‌ಯುನಲ್ಲಿ ನಡೆದ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಆರೋಪದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂಬುದು ವಿದ್ಯಾರ್ಥಿಗಳ ರ್ಯಾಲಿಯ ಮತ್ತೊಂದು ಬೇಡಿಕೆಯಾಗಿತ್ತು. ಆದರೆ, ಕೇಂದ್ರ ಸರಕಾರದ ಹಿಡಿತದಲ್ಲಿರುವ ದಿಲ್ಲಿ ಪೊಲೀಸರು ವಿದ್ಯಾರ್ಥಿಗಳ ಮೇಲೆ ಲಾಠಿ ಬೀಸಿ, ಜಲಪಿರಂಗಿ ಬಳಕೆ ಮಾಡಿದ್ದಾರೆ. ಈ ಮೂಲಕ ವಿದ್ಯಾರ್ಥಿಚಳವಳಿ ದಮನ ಮಾಡಲು ಮುಂದಾಗಿದ್ದು, ಇದನ್ನು ಎಸ್‌ಎಫ್‌ಐ ತೀವ್ರವಾಗಿ ಖಂಡಿಸುತ್ತದೆ. ಹಾಗೂ ಈ ಕೃತ್ಯದಲ್ಲಿ ಭಾಗಿಯಾಗಿರುವ ಪೊಲೀಸ್ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು. ಅಲ್ಲದೆ, ವಿದ್ಯಾರ್ಥಿಗಳ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅಂಬರೀಶ್ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News