ಜೊಕೊವಿಕ್, ವೋಝ್ನಿಯಾಕಿಗೆ ಸೋಲು

Update: 2018-03-24 18:44 GMT

ಮಿಯಾಮಿ, ಮಾ.24: ಮಿಯಾಮಿ ಓಪನ್ ಟೆನಿಸ್ ಟೂರ್ನಿಯಲ್ಲಿ ನೊವಾಕ್ ಜೊಕೊವಿಕ್ ಹಾಗೂ ಕರೊಲಿನ್ ವೋಝ್ನಿಯಾಕಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ಸಿಂಗಲ್ಸ್‌ನಲ್ಲಿ ಸೋತಿದ್ದಾರೆ.

ಜೊಕೊವಿಕ್ ಶುಕ್ರವಾರ ನಡೆದ ತನ್ನ ಮೊದಲ ಪಂದ್ಯದಲ್ಲಿ 47ನೇ ರ್ಯಾಂಕಿನ ಬೆನೊಟ್ ಪೈರ್ ವಿರುದ್ಧ 3-6, 4-6 ಸೆಟ್‌ಗಳಿಂದ ಸೋತಿದ್ದಾರೆ. ಮಣಿಕಟ್ಟು ನೋವಿನಿಂದ ಚೇತರಿಸಿಕೊಂಡು ಟೆನಿಸ್ ಅಂಗಣಕ್ಕೆ ವಾಪಸಾಗಿರುವ ಜೊಕೊವಿಕ್ ಮಿಯಾಮಿ ಓಪನ್‌ನಲ್ಲಿ ದಾಖಲಿಸಿರುವ ಸತತ 16 ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ. ಆಸ್ಟ್ರೇಲಿಯನ್ ಓಪನ್‌ನಲ್ಲಿ ಆರು ತಿಂಗಳ ವಿರಾಮದ ಬಳಿಕ ವಾಪಸಾಗಿದ್ದ ಜೊಕೊವಿಕ್ ನಾಲ್ಕನೇ ಸುತ್ತಿನಲ್ಲಿ ಎಡವಿದ್ದರು. 2 ವಾರಗಳ ಹಿಂದೆ ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ 109ನೇ ರ್ಯಾಂಕಿನ ಟಾರೊ ಡೇನಿಯಲ್ ವಿರುದ್ಧ ಸೋತು ನಿರಾಸೆಗೊಳಿಸಿದ್ದರು.

►ವೋಝ್ನಿಯಾಕಿಗೆ ಶಾಕ್: ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ವೋಝ್ನಿಯಾಕಿ ಪೋರ್ಟೊ ರಿಕೊದ ಮೊನಿಕಾ ಪುಗ್ ವಿರುದ್ಧ 6-0,4-6, 4-6 ಸೆಟ್‌ಗಳ ಅಂತರದಿಂದ ಸೋತು ಡಬ್ಲುಟಿಎ ಮಿಯಾಮಿ ಓಪನ್ ಟೂರ್ನಿಯಿಂದ ಬೇಗನೆ ನಿರ್ಗಮಿಸಿದರು.

ಮೊದಲ ಸೆಟ್‌ನ್ನು 30 ನಿಮಿಷದೊಳಗೆ ಗೆದ್ದುಕೊಂಡಿದ್ದ ವಿಶ್ವದ ನಂ.2ನೇ ಆಟಗಾರ್ತಿ ವೋಝ್ನಿಯಾಕಿ ಉತ್ತಮ ಆರಂಭ ಪಡೆದಿದ್ದರು. 2016ರ ರಿಯೋ ಸಮ್ಮರ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿರುವ ಮೋನಿಕಾ ಉಳಿದೆರಡು ಸೆಟ್‌ನಲ್ಲಿ ತಿರುಗೇಟು ನೀಡಿ ವೋಝ್ನಿಯಾಕಿಗೆ ಆಘಾತ ನೀಡಿದರು.

ಮೆಲ್ಬೋರ್ನ್‌ನಲ್ಲಿ ಚೊಚ್ಚಲ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿ ಟೀಕಾಕಾರರ ಬಾಯಿ ಮುಚ್ಚಿಸಿದ್ದ ವೋಝ್ನಿಯಾಕಿ ಮತ್ತೊಮ್ಮೆ ನಿರಾಸೆಗೊಳಿಸಿದರು. ಇತ್ತೀಚೆಗೆ ಇಂಡಿಯನ್ ವೆಲ್ಸ್ ಟೂರ್ನಿಯ ಅಂತಿಮ-16ರ ಸುತ್ತಿನಲ್ಲಿ ರಶ್ಯದ ಉದಯೋನ್ಮುಖ ಆಟಗಾರ್ತಿ ಡರಿಯಾ ಕಸಟ್‌ಕಿನಾ ವಿರುದ್ಧ ಸೋತಿದ್ದರು.

►ವೀನಸ್ ವಿಲಿಯಮ್ಸ್ ಮೂರನೇ ಸುತ್ತಿಗೆ ಲಗ್ಗೆ: ಏಳು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ವೀನಸ್ ವಿಲಿಯಮ್ಸ್ ಡಬ್ಲುಟಿಎ ಮಿಯಾಮಿ ಓಪನ್‌ನಲ್ಲಿ ಮೂರನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.

ಶುಕ್ರವಾರ ನಡೆದ ಮಹಿಳೆಯರ ಸಿಂಗಲ್ಸ್‌ನ 2ನೇ ಸುತ್ತಿನ ಪಂದ್ಯದಲ್ಲಿ ವೀನಸ್ ರಶ್ಯದ ಕ್ವಾಲಿಫೈಯರ್ ನಟಾಲಿಯಾ ವಿಖ್‌ಯಾನ್‌ಸೇವಾರನ್ನು 7-5, 6-4 ಸೆಟ್‌ಗಳಿಂದ ಸೋಲಿಸಿದರು.

  37ರ ಹರೆಯದ ವಿಲಿಯಮ್ಸ್ ಮೊದಲ ಸೆಟ್‌ನಲ್ಲಿ 2-5 ರಿಂದ ಹಿನ್ನಡೆಯಲ್ಲಿದ್ದರು. ಆದರೆ, ಸತತ 5 ಗೇಮ್‌ಗಳನ್ನು ಜಯಿಸಿ ತಿರುಗೇಟು ನೀಡಿದರು. ವಿಲಿಯಮ್ಸ್ ಮೂರನೇ ಸುತ್ತಿನಲ್ಲಿ ಹಾಲೆಂಡ್‌ನ ಕಿಕಿ ಬೆರ್ಟನ್ಸ್‌ರನ್ನು ಎದುರಿಸಲಿದ್ದಾರೆ. ಬೆರ್ಟನ್ಸ್ ಅಮೆರಿಕದ ವರ್ವರಾ ಲೆಪ್‌ಚೆಂಕೊರನ್ನು 5-7,7-6(7/5), 6-1 ಸೆಟ್‌ಗಳಿಂದ ಸೋಲಿಸಿದ್ದಾರೆ. ಇದೇ ವೇಳೆ, 4ನೇ ಶ್ರೇಯಾಂಕದ ಎಲಿನಾ ಸ್ವಿಟೋಲಿನಾ ವಿರುದ್ಧ 6-4, 6-2 ಅಂತರದಿಂದ ಸೋತಿರುವ ಜಪಾನ್‌ನ ನಯೊಮಿ ಒಸಾಕಾ ಅವರ ಗೆಲುವಿನ ಓಟಕ್ಕೆ ಕಡಿವಾಣ ಬಿದ್ದಿದೆ. ಒಸಾಕಾ ಟೂರ್ನಿಯ ಮೊದಲ ಸುತ್ತಿನಲ್ಲಿ 8 ಬಾರಿಯ ಚಾಂಪಿಯನ್ ಸೆರೆನಾ ವಿಲಿಯಮ್ಸ್‌ರನ್ನು ಸೋಲಿಸಿ ಗಮನ ಸೆಳೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News