ಬಿ.ಜಿ.ಎಲ್. ಸ್ವಾಮಿ-ನೂರರ ನೆನಪು

Update: 2018-03-25 10:00 GMT

‘ಜ್ಞಾಪಕ ಚಿತ್ರಶಾಲೆ’

 -ವಿದ್ವಾಂಸರು ವರ್ಣಿಸಿರುವಂತೆ, ಹತ್ತೊಂಬತ್ತು-ಇಪ್ಪತ್ತನೆಯ ಶತಮಾನದ ಅವಧಿಯ ಕನ್ನಡನಾಡಿನ ಸಾಂಸ್ಕೃತಿಕ ಚರಿತ್ರೆಯೇ ನವರಸಮಯವಾಗಿ ಮೈವೆತ್ತಿ ಬಂದಂತಿರುವ ಒಂದು ಅನನ್ಯ ಕೃತಿ. ಕನ್ನಡ ಸಾಹಿತ್ಯದ ಮಾರ್ಗಪ್ರವರ್ತಕರಲ್ಲೊಬ್ಬರಾದ ಡಿ.ವಿ.ಜಿ.ಯವರು ಈ ಕೃತಿಯ ಲೇಖಕರು. ಸುಮಾರು ಎರಡು ಸಾವಿರ ಪುಟಗಳಷ್ಟಿರುವ ಈ ರಸಮಯ ಸಾಹಿತ್ಯ ಹಿಂದೆ ಎಂಟು ಸಂಪುಟಗಳಲ್ಲಿ ಪ್ರಕಟಗೊಂಡಿತ್ತು. ಈಗ ಮೂರು ಸಂಪುಟಗಳಲ್ಲಿ ಪುನರ್ ಮುದ್ರಣಗೊಂಡಿರುವ ‘ಜ್ಞಾಪಕಚಿತ್ರ ಶಾಲೆ’ಯನ್ನು ಲೋಕಕ್ಕೆ ಅನಾವರಣಗೊಳಿಸುವ ಮೂಲಕ ಇತ್ತೀಚೆಗೆ ಬೆಂಗಳೂರಿನಲ್ಲಿ ಡಿ.ವಿ.ಜಿ.ಯವರ 131ನೇ ಜನ್ಮದಿನವನ್ನು ಆಚರಿಸಲಾಯಿತು. ಡಿ.ವಿ.ಜಿ. ಎಂದ ಕೂಡಲೇ ಆ ಹೆಸರಿನೊಂದಿಗೆ ನಮಗೆ ನೆನಪಾಗುವ ಇನ್ನೊಂದು ಹೆಸರು ಬಿ.ಜಿ.ಎಲ್. ಸ್ವಾಮಿಯವರದು. ಸ್ವಾಮಿ ಡಿ.ವಿ.ಜಿ.ಯವರ ಪುತ್ರರು. ಆದರೆ ಡಿ.ವಿ.ಜಿ.ಯವರ ಮಗ ಎನ್ನುವ ಕಾರಣಕ್ಕಾಗಿಯಷ್ಟೇ ಅಲ್ಲ, ಕನ್ನಡದ ಒಬ್ಬ ಒಳ್ಳೆಯ ಲೇಖಕರಾಗಿ, ರಾಷ್ಟ್ರ/ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾಗಿರುವ ವಿಜ್ಞಾನಿಗಳಾಗಿಯೂ ಅವರು ನೆನಪಿಗೆ ಬರುತ್ತಾರೆ. ಡಿ.ವಿ.ಜಿ.ಯವರು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಒಂದು ಮಾದರಿಯಾದರೆ ಅವರ ಮಗ ಬಿ.ಜಿ.ಎಲ್. ಸ್ವಾಮಿಯವರು ವಿಜ್ಞಾನ ಸಾಹಿತ್ಯ, ಸಂಶೋಧನೆಯ ಒಂದು ಮಾದರಿ.ಸಸ್ಯ ಶಾಸ್ತ್ರದ ಪ್ರಾಧ್ಯಾಪಕರಾಗಿ, ಸಂಶೋಧಕರಾಗಿ, ಲೇಖಕರಾಗಿ ಗಣನೀಯ ಕೊಡುಗೆ ನೀಡಿರುವ ಡಾ.ಬಿ.ಜಿ.ಎಲ್. ಸ್ವಾಮಿಯವರ ಜನ್ಮ ಶತಾಬ್ದಿ ವರ್ಷವಿದು.

ಬಿ.ಜಿ.ಎಲ್. ಸ್ವಾಮಿ ಹುಟ್ಟಿದ್ದು, 1918ರ ಫೆಬ್ರವರಿ 5ರಂದು. ಸಾಹಿತ್ಯ, ಸಂಗೀತ, ಕಲೆ, ವಿಚಾರ, ವಿಮರ್ಶೆಗಳ ಗಂಧಗಾಳಿ ಇಡಿಕಿರಿದಿದ್ದ ಮನೆಯಲ್ಲಿ. ಸಾಹಿತ್ಯಕಲೆಗಳ ಈ ‘ಸಿರಿವಂತ’ ಮನೆಯಲ್ಲಿ ಹಣಕಾಸಿನ ಸ್ಥಿತಿ ಅಷ್ಟಕ್ಕಷ್ಟೆ. ಐದು ವರ್ಷದ ಬಾಲಕನಾಗಿದ್ದಾಗಲೇ ತಾಯಿಯ ಪ್ರೀತಿ-ವಾತ್ಸಲ್ಯ, ಆರೈಕೆಗಳಿಂದ ವಂಚಿತರಾದ ಸ್ವಾಮಿಯವರ ಓದುವಿದ್ಯಾಭ್ಯಾಸಗಳೆಲ್ಲ ನಡೆದದ್ದು ಬೆಂಗಳೂರಿನಲ್ಲೇ. ಡಿ.ವಿ.ಜಿ.ಯವರಂಥ ಹಿರಿಯ ಸಾಂಸ್ಕೃತಿಕ ಚೇತನದ ಮಗನಾಗಿ ಬೆಳೆದ ಸ್ವಾಮಿ ತಂದೆಯವರಿಗಿಂತ ಹೆಚ್ಚಾಗಿ ತಂದೆಯವರ ಗ್ರಂಥ ಭಂಡಾರದಿಂದ ಹೆಚ್ಚು ಪ್ರಭಾವಿತರಾದವರು. ಹೈಸ್ಕೂಲಿನಲ್ಲಿ ‘ಜಗಳಗಂಟ’ಎಂದೇ ಪ್ರಸಿದ್ಧರಾಗಿದ್ದ ಸ್ವಾಮಿ, ಚರ್ಚೆಮಾಡದೇ ಯಾವುದನ್ನೂ ಒಪ್ಪಿ ಕೊಳ್ಳುತ್ತಿರಲಿಲ್ಲವೆಂದು ಅವರ ಜೀವನ ಚರಿತ್ರಕಾರ ಡಾ.ಬಿ.ಪಿ.ರಾಧಾಕೃಷ್ಣ ಬರೆಯುತ್ತಾರೆ. ಸೆಂಟ್ರಲ್ ಕಾಲೇಜು ಬೆಳೆಯುತ್ತಿದ್ದ ಯುವಕ ಸ್ವಾಮಿಯ ಮೇಲೆ ಸಾಂಸ್ಕೃತಿಕವಾಗಿ ಪ್ರಭಾವ ಬೀರಿದ ಇನ್ನೊಂದು ನೆಲೆಯಂತೆ ತೋರುತ್ತದೆ. 1936-ಪ್ರಾಣಿ ಶಾಸ್ತ್ರದಲ್ಲಿ ಆನರ್ಸ್ ಮಾಡಲು ಸ್ವಾಮಿ ಸೆಂಟ್ರಲ್ ಕಾಲೇಜಿಗೆ ಹೋದರು. ಆದರೆ ಎ.ಆರ್.ಕೃಷ್ಣ ಶಾಸ್ತ್ರಿಗಳ ಒತ್ತಾಯಕ್ಕೆ ಕಟ್ಟುಬಿದ್ದು ಸಸ್ಯ ಶಾಸ್ತ್ರವನ್ನು ಒಲಿಸಿಕೊಂಡರು. ಆಗ ಸೆಂಟ್ರಲ್ ಕಾಲೇಜಿನಲ್ಲಿದ್ದ ಕನ್ನಡಮಯ ವಾತಾವರಣದಿದಾಗಿ ಕನ್ನಡದ ಬಗೆಗೂ ಆಸಕ್ತಿ ಬೆಳೆದು ಕಾಲೇಜಿನ ಕರ್ನಾಟಕ ಸಂಘದ ಕಾರ್ಯದರ್ಶಿಯಾದರು.ಸಸ್ಯಶಾಸ್ತ್ರ ಅಧ್ಯಯನ ಮಾಡಿ 1939ರಲ್ಲಿ ಬಿ.ಎಸ್‌ಸಿ (ಅನರ್ಸ್) ಪರೀಕ್ಷೆಯನ್ನು ಪ್ರಥಮ ದರ್ಜೆಯಲ್ಲಿ ಪಾಸುಮಾಡಿದರು. 1947ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೆಟ್ ಪದವಿ ಪಡೆದರು. ಈ ನಡುವಣ ಅವಧಿಯಲ್ಲಿ ಸಂಶೋಧನಾ ಕಾರ್ಯ ಕೈಗೊಂಡು ಹಲವಾರು ಸಂಶೋಧನಾತ್ಮಕ ಲೇಖನಗಳನ್ನು ಬರೆದಿದ್ದರು. ಅವು ವಿದೇಶಗಳ ವಿದ್ವತ್ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಡಾಕ್ಟರೆಟ್ ಗಳಿಸಿದ ನಂತರ ಕೇಂದ್ರ ಸರಕಾರದ ನೆರವಿನಿಂದ ಅಮೆರಿಕದ ವಿಶ್ವವಿಖ್ಯಾತ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಸಸ್ಯ ಶಾಸ್ತ್ರದಲ್ಲಿ ಉನ್ನತ ವ್ಯಾಸಂಗ ನಡೆಸಿದರು. ಸುಪ್ರಸಿದ್ಧ ವಿಜ್ಞಾನಿ ಇರ್ವಿಂಗ್ ಬೈಲಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದರು. ಪೂರ್ವ ದೇಶಗಳಿಂದ ಬಂದ ವಿದ್ಯಾರ್ಥಿಗಳಲ್ಲಿ ಅತ್ಯಂತ ಸಮರ್ಥರು ಎಂದು ಮಾರ್ಗದರ್ಶಕ ಪ್ರೊಫೆಸರ್‌ರಿಂದ ಪ್ರಶಂಸೆ ಗಿಟ್ಟಿಸಿಕೊಂಡ ಸ್ವಾಮಿಯವರು ಸಸ್ಯ ಬೇರು ಮತ್ತು ಕಾಂಡಗಳ ಕಸಿ ಬಗ್ಗೆ ನಡೆಸಿದ ಸಂಶೋಧನೆ ಈ ಕುರಿತು ಅಲ್ಲಿಯವರೆಗಿನ ಎಲ್ಲ ಸಂಶೋಧನೆಗಳನ್ನೂ ತಲೆಕೆಳಗುಮಾಡಿ ಸಸ್ಯವಿಜ್ಞಾನಿಗಳನ್ನು ನಿಬ್ಬೆರಗಾಗಿಸಿತು.

ಸ್ವಾಮಿ 1950ರಲ್ಲಿ ಅಮೆರಿಕದಿಂದ ಸ್ವದೇಶಕ್ಕೆ ಹಿಂದಿರುಗಿದರು. ಸ್ವಾಮಿಯವರು ಹಟ್ಟಿದ್ದು ಬೆಳೆದಿದ್ದು ಕನ್ನಡದ ನೆಲದಲ್ಲಾದರೂ ಕೆಲಸಮಾಡಿದ್ದು ತಮಿಳುನಾಡಿನಲ್ಲಿ. ಬರೆದದ್ದು ಕನ್ನಡ, ಇಂಗ್ಲಿಷ್ ತಮಿಳುಗಳಲ್ಲಿ. 1953ರಲ್ಲಿ ಸಸ್ಯ ಶಾಸ್ತ್ರದ ಪ್ರೊಫೆಸರಾಗಿ ಆಗಿನ ಮದರಾಸಿನ ಪ್ರೆಸಿಡೆನ್ಸಿ ಕಾಲೇಜು ಸೇರಿದರು. ಎರಡೂವರೆ ದಶಕಗಳ ಕಾಲ ಅಲ್ಲಿ ಸಸ್ಯ ಶಾಸ್ತ್ರ ಬೋಧಿಸಿದರು. ಈ ಅವಧಿಯಲ್ಲಿ ಸಸ್ಯಶಾಸ್ತ್ರದಲ್ಲಿ ಸಂಶೋಧನೆ ಮುಂದುವರಿಸಿ ಅಮೆರಿಕ, ರಶ್ಯಾ ದೇಶಗಳ ಮಾನ್ಯತೆಗೂ ಪಾತ್ರರಾದರು. ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ನೆಲೆಸಿದ ಸ್ವಾಮಿ ಸ್ವಲ್ಪ ಕಾಲ ಮೈಸೂರು ವಿಶ್ವವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಜೀವಿತದ ಕೊನೆಯವರೆಗೂ ಸಂಶೋಧನೆ ಮತ್ತು ಬರವಣಿಗೆಯಲ್ಲಿ ತೊಡಗಿಕೊಂಡಿದ್ದ ಬಿ.ಜಿ.ಎಲ್. ಸ್ವಾಮಿ 1980ರ ನವೆಂಬರ್ 2ರಂದು ‘ಇನ್ನಿಲ್ಲ’ ವಾದರು.ಸ್ವಾಮಿ ಇನ್ನಿಲ್ಲವಾದರೂ ಸಸ್ಯ ವಿಜ್ಞಾನ ಮತ್ತು ಸಾಹಿತ್ಯದಲ್ಲಿ ಅವರು ಇಂದಿಗೂ ಪ್ರಸ್ತುತರು.

ಬಿ.ಜಿ.ಎಲ್. ಸ್ವಾಮಿಯವರು ವೃತ್ತಿಯಿಂದ ಅಧ್ಯಾಪಕರಾಗಿದ್ದರೂ ಅವರ ಪ್ರವೃತ್ತಿ, ಆಸಕ್ತಿಗಳು ಹಲವಾರು. ಸಾಹಿತ್ಯ, ಚಿತ್ರಕಲೆ, ಸಂಗೀತ ಹೀಗೆ...ಚೆನ್ನಾಗಿ ಪಿಟೀಲು ನುಡಿಸುತ್ತಿದ್ದ ಅವರಿಗೆ ಸಂಗೀತ ಶಾಸ್ತ್ರದಲ್ಲಿ ಆಳವಾದ ಜ್ಞಾನವಿತ್ತು. ಅವರು ಪ್ರತಿಭಾವಂತ ವ್ಯಂಗ್ಯ ಚಿತ್ರಕಾರರಾಗಿದ್ದರು. ಇದಕ್ಕೆ ಅವರು ತಮ್ಮ ಕೃತಿಗಳಿಗೆ ತಾವೇ ರೇಖಾ ಚಿತ್ರಗಳನ್ನು ರಚಿಸಿರುವುದಕ್ಕಿಂತ ಬೇರೆ ಪುರಾವೆ ಬೇಕಿಲ್ಲ. ಸ್ವಾಮಿಯವರ ಸಂಶೋಧನೆ ಸಸ್ಯವಿಜ್ಞಾನಕ್ಕೇ ಸೀಮಿಗೊಂಡಿರಲಿಲ್ಲ. ಸಾಹಿತ್ಯ ಮತ್ತು ಕಲೆಯ ಕ್ಷೇತ್ರಗಳ್ಲೂ ಅವರು ಸಾಕಷ್ಟು ಅಧ್ಯಯನ ಮತ್ತು ಸಂಶೋಧನೆಗಳನ್ನು ನಡೆಸಿದವರು. ಪಂಪ, ರನ್ನ, ಸ್ವಪ್ನವಾಸವದತ್ತ, ಶಿಲಪ್ಪದಿಕಾರ ಕುರಿತು ವಿಶೇಷ ಅಧ್ಯಯನ ನಡೆಸಿದ್ದರು ಹಾಗೂ ಅಧಿಕಾರಯುತವಾಗಿ ಮಾತನಾಡಬಲ್ಲವರೆಂಬ ಕೀರ್ತಿ ಗಳಿಸಿದ್ದರು. ಕನ್ನಡದ ವೈಜ್ಞಾನಿಕ ಬರವಣಿಗೆಯ ಕಡೆಗೆ ಸ್ವಾಮಿಯವರ ಮನಸ್ಸನ್ನು ತಿರುಗಿಸಿದ ಶ್ರೇಯಸ್ಸು ಎ.ಆರ್.ಕೃಷ್ಣ ಶಾಸ್ತ್ರಿಗಳಿಗೇ ಸಲ್ಲುತ್ತದೆ ಎನ್ನುತ್ತಾರೆ. ಅ.ರಾ.ಮಿತ್ರ, ಎ.ಆರ್.ಕೃ. ಒತ್ತಾಸೆಯಿಂದ ಬರೆದ ‘ಅರ್ಜಿತ ಗುಣಗಳೂ ಅನುವಂಶೀಯತೆಯೂ’ ಸ್ವಾಮಿಯವರ ಪ್ರಥಮ ಕನ್ನಡ ಲೇಖನ. 1944ರಲ್ಲಿ ‘ವಿಜ್ಞಾನ ವಿಹಾರ’ ಶೀರ್ಷಿಕೆಯಲ್ಲಿ ಬರೆದ ನಾಲ್ಕು ಲೇಖನಗಳು ‘ಕನ್ನಡ ನುಡಿ’ಯಲ್ಲಿ ಪ್ರಕಟವಾದವು. ಕನ್ನಡ ಸಾಹಿತ್ಯದಲ್ಲಿ, ವಿಶೇಷವಾಗಿ ವೈಜ್ಞಾನಿಕ ಬರಹಗಳ ಮೂಲಕ ಸ್ವಾಮಿಯವರು ಮಾಡಿರುವ ಕೆಲಸ ಅಸಾಧಾರಣವಾದುದು.‘ಫಲಶೃತಿ’, ‘ಶಾಸನಗಳಲ್ಲಿ ಗಿಡಮರಗಳು’,‘ಪಂಚ ಕಳಶ’,‘ಹಸುರುಹೊನ್ನು’, ‘ಸಸ್ಯಜೀವಿ-ಪ್ರಾಣಿ ಜೀವಿ’, ‘ನಮ್ಮ ಹೊಟ್ಟೆಯಲ್ಲಿ ಅಮೆರಿಕ’, ‘ಸಾಕ್ಷಾತ್ಕಾರದ ದಾರಿಯಲ್ಲಿ’, ಕಾಲೇಜು ರಂಗ’, ‘ಕಾಲೇಜು ಅಧ್ಯಾಪಕನಾಗಿ’, ‘ಕಾಲೇಜು ತರಂಗ’, ‘ತಮಿಳು ತಲೆಗಳ ನಡುವೆ’, ‘ಬೆಳುದಿಂಗಳಲ್ಲಿ ಅರಳಿದ ಮೊಲ್ಲೆ’ ಸ್ವಾಮಿಯವರ ಪ್ರಮುಖ ಕೃತಿಗಳು. ಈ ಕೃತಿಗಳಲ್ಲಿ ಸಂಶೋಧನೆ, ಶಬ್ದಜಿಜ್ಞಾಸೆ, ಇತಿಹಾಸ, ಭೂಗೋಳಗಳೆಲ್ಲವನ್ನೂ ಬೆರೆಸಿದ ಸಮೃದ್ಧ ಮಾಹಿತಿ ಇದೆ ಎಂಬ ವಿಮರ್ಶೆ ಸ್ವಾಮಿಯವರ ಬಹುಮುಖ ಆಸಕ್ತಿ ಮತ್ತು ಪಾಂಡಿತ್ಯವನ್ನು ಗುರುತಿಸಿದೆ.

ಶ್ರೀಸಾಮಾನ್ಯ ಓದುಗರು ಹಾಗೂ ವಿದ್ವತ್ ಪ್ರಪಂಚದ ಓದುಗರು ಇವರಿಬ್ಬರಲ್ಲೂ ಸಮಾನ ಆಸಕ್ತಿ ಕೆರಳಿಸಿ ಮೆಚ್ಚುಗೆಗೆ ಪಾತ್ರವಾಗಿರುವ ಸ್ವಾಮಿಯವರ ಎಡು ಕೃತಿಗಳು: ‘ಹಸಿರುಹೊನ್ನು’ ಮತ್ತು ‘ನಮ್ಮ ಹೊಟ್ಟೆಯಲ್ಲೊಂದು ದಕ್ಷಿಣ ಅಮೆರಿಕ’ ಮತ್ತು ‘ಸಸ್ಯಜೀವಿ-ಪ್ರಾಣಿಜೀವಿ’-ಇವು ಸಸ್ಯ ಶಾಸ್ತ್ರಕ್ಕೆ ಸಂಬಂಧಿಸಿದ ಕೃತಿಗಳು.ಕೇಂದ್ರ ಸಾಹಿತ್ಯ ಅಕಾಡಮಿಯ ಪ್ರಶಸ್ತಿ ಪುರಸ್ಕಾರ ಗಳಿಸಿರುವ ‘ಹಸಿರು ಹೊನ್ನು’ ಸಾಹಿತ್ಯಕವಾಗಿಯೂ ವೈಜ್ಞಾನಿಕವಾಗಿಯೂ ಒಂದು ಅಪೂರ್ವ ಗ್ರಂಥ. ಸ್ವಾಮಿ ತಮ್ಮ ವೃತ್ತಿ ಜೀವನದಲ್ಲಿ ಗಿಡಮರಬಳ್ಳಿಗಳನ್ನು ಅರಸುತ್ತಾ ವಿದ್ಯಾರ್ಥಿಗಳೊಂದಿಗೆ ಕಾಡುಮೇಡು ಅಲೆದರು. ಸಾಹಿತ್ಯ, ಸಂಶೋಧನೆಗಳಿಗೆ ಅಸಂವೇದನೀಯರಾದ ಸರಕಾರದ ಅಧಿಕಾರಿಗಳೊಂದಿಗೆ ಹೆಣಗಾಡಿದರು. ಸಸ್ಯಗಳನ್ನು ಬುಡಮಟ್ಟ ಕಿತ್ತು, ಭೂಮಿ ಅಗೆದು, ಕೋಟೆಕೊತ್ತಲಗಳನ್ನು ಜಾಲಾಡಿದರು. ಸಸ್ಯ ಪ್ರಪಂಚ, ಸಾಹಿತ್ಯ, ಕಲೆಗಳಿಗೆ ಸಂಬಂಧಿಸಿದಂತೆ ಅಪಾರ ಮಾಹಿತಿ ಸಂಗ್ರಹಿಸಿದರು. ಮಾಹಿತಿ ಸಂಗ್ರಹಿಸುವಾಗಲೇ ಅವುಗಳ ಮೂಲ ರಚನೆಯ ರೇಖಾ ಚಿತ್ರಗಳನ್ನು ರೂಪಿಸಿದರು. ಹೀಗೆ ಸಂಗ್ರಹಿಸಿದ ಮಾಹಿತಿಗೆ ಅಕ್ಷರ ರೂಪ/ರೇಖೆಗಳ ರೂಪ ಕೊಟ್ಟಾಗ ಅದು ‘ಹಸಿರು ಹೊನ್ನು’ ಆಯಿತು. ಸ್ವಾಮಿಯವರ ಬಹುಮುಖ ಪ್ರತಿಭೆ ಈ ಕೃತಿಯಲ್ಲಿ ವೈಜ್ಞಾನಿಕವಾಗಿ ಮಿಂಚಿದೆ, ಸಾಹಿತ್ಯವಾಗಿ ಬೆಳೆದಿದೆ ಎನ್ನುತ್ತಾರೆ ವಿಮರ್ಶಕರು. ಸ್ವಾಮಿ ಶುಷ್ಕ ಅಧ್ಯಯನದ ಸಂಶೋಧಕರಾಗಿರಲಿಲ್ಲ. ಅವರು ಸೃಜನಶೀಲ ಪ್ರತಿಭೆಯ ಲೇಖಕರೂ ಆಗಿದ್ದರು. ಅವರ ಸಂಶೋಧನಾ ವಿದ್ವತ್ತಿಗೆ ಸೃಜನಶೀಲ ಪ್ರತಿಭಾ ಸ್ಪರ್ಶವಾದಾಗ ‘ಹಸಿರುಹೊನ್ನು’ನಂತಹ ಕೃತಿಯ ಸೃಷ್ಟಿಯಾಗಿದೆ. ಸ್ವಾಮಿಯವರು ಒಬ್ಬ ಅನನ್ಯ ಸೃಜನಶೀಲ ಲೇಖಕರಾಗಿದ್ದರು ಎಂಬುದಕ್ಕೆ ನಿದರ್ಶನವಾಗಿ ‘ಹಸಿರುಹೊನ್ನು’ ಪುಸ್ತಕದಲ್ಲಿನ ಅಗುಂಬೆಯ ಮಳೆಯ ವರ್ಣನೆಯನ್ನು ಓದಿಯೇ ಸವಿಯಬೇಕು. ಇಲ್ಲಿ, ಕುಶಲ ಚಿತ್ರಕಾರನಂತೆ ಆಗುಂಬೆಯ ಮಳೆಯಾಗಸದ ಸಂಚಲನವನ್ನು ಅಕ್ಷರಗಳಲ್ಲಿ ದೃಶ್ಯವತ್ತಾಗಿಸುವ ಸ್ವಾಮಿಯವರ ಸೃಜನಶೀಲ ಬರವಣಿಗೆ ಮತ್ತು ವೀಕ್ಷಣಾ ಸಾಮರ್ಥ್ಯಗಳೆರಡೂ ನಮ್ಮ ಮನಸೂರೆಗೊಳ್ಳುತ್ತವೆ.

ನಾವು ತಿನ್ನುವ ಈರುಳ್ಳಿ, ನೆಲಗಡಲೆ, ಅನೇಕ ತರಕಾರಿಗಳು, ಹಣ್ಣುಹಂಪಲುಗಳು, ಗೆಡ್ಡೆ ಗೆಣಸುಗಳೂ ನಾವು ಪೂಜಿಸುವ ತುಳಸಿ ನಮ್ಮವಲ್ಲ ಪರದೇಶಿ ಎಂಬ ವಿಸ್ಮಯಕಾರಿ ಅಂಶಗಳನ್ನು ‘ನಮ್ಮ ಹೊಟ್ಟೆಯಲ್ಲೊಂದು ದಕ್ಷಿಣ ಅಮರಿಕ’ ಸ್ವಾರಸ್ಯಕರವಾಗಿ ವಿವರಿಸುತ್ತದೆ.

 ಹಾಸ್ಯದೃಷ್ಟಿ ಮತ್ತು ವ್ಯಂಗ್ಯ ಸ್ವಾಮಿಯವರ ಬರವಣಿಗೆಯಲ್ಲಿ ನಮ್ಮ ಗಮನವನ್ನು ವಿಶೇಷವಾಗಿ ಸೆಳೆಯುತ್ತವೆ. ವಿಜ್ಞಾನ ಬರಹವಿರಲಿ, ವ್ಯಕ್ತಿ ಚಿತ್ರವಿರಲಿ ಅಥವಾ ಪ್ರವಾಸ ಕಥನ, ಲಲಿತ ಪ್ರಬಂಧವಿರಲಿ ಸ್ವಾಮಿಯವರ ಬರವಣಿಗೆಯಲ್ಲಿ ನೋವಿನಲ್ಲೂ ನಗೆ ಅರಳಿಸುವ ಜೀವನ ಧರ್ಮ ಮತ್ತು ಕಾಣ್ಕೆಗಳು ಅವರ ಒಟ್ಟು ಸಾಹಿತ್ಯ ರಚನೆಯ ಒಂದು ಪ್ರಬಂಧ ದನಿಯೋ ಎಂಬಂತೆ ಪ್ರಕಟವಾಗುತ್ತದೆ. ಸ್ವಾಮಿಯವರು ವಿದ್ಯಾರ್ಥಿಯಾಗಿ, ಸಂಶೋಧಕರಾಗಿ, ಅಧ್ಯಾಪಕರಾಗಿ, ಆಡಳಿತಗಾರರಾಗಿ ನಮ್ಮ ಶೈಕ್ಷಣಿಕ ರಂಗದಲ್ಲಿ ಸಕ್ರಿಯವಾಗಿ ತೊಡಗಿಕೊಂಡವರು. ವಿವಿಧ ಹಂತಗಳಲ್ಲಿನ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಕಂಡ ‘ದರ್ಶನಗಳು’ ಮತ್ತು ಪಡೆದ ಅನುಭವಗಳು ಅವರ ಕೃತಿಗಳಲ್ಲಿ ಮೈಮನಗಳನ್ನು, ವಿವೇಕ ವಿಚಕ್ಷಣೆಗಳ ಸ್ಪರ್ಶವನ್ನೂ ಪಡೆದಿವೆ. ಈ ಮಾತಿಗೆ ನಿದರ್ಶನವಾಗಿ, ‘ಪಂಚಕಳಶ’, ‘ಕಾಲೇಜು ರಂಗ’, ‘ಕಾಲೇಜು ತರಂಗ’ ಮೊದಲಾದ ಕೃತಿಗಳನ್ನು ನೋಡಬಹುದು. ಸ್ವಾಮಿಯವರು ತಮ್ಮ ಸೆಂಟ್ರಲ್ ಕಾಲೇಜು ದಿನಗಳಲ್ಲಿ ಕಂಡ ದಿನಗಳನ್ನು ಹಸಿರುಗೊಳಿಸುವ ‘ಪಂಚಕಳಶ ಗೋಪುರ’ ಅನನ್ಯ ವ್ಯಕ್ತಿ ಚಿತ್ರಗಳ ಸಂಗ್ರಹ. ಟಿ.ಎಸ್.ವೆಂಕಣ್ಣಯ್ಯ, ಎ.ಆರ್.ಕ್ರಷ್ಣ ಶಾಸ್ತ್ರಿ ಮೊದಲಾಗಿ ನಾಡಿನ ಐವರು ಮಹಾನುಭಾವರ ಹಿರಿಮೆಗರಿಮೆಗಳನ್ನು ನಿರೂಪಿಸುತ್ತಲೇ ಅವರ ಕೆಲವು ದೌರ್ಬಲ್ಯಗಳನ್ನೂ ವಿನೋದದ ಶೈಲಿಯಲ್ಲಿ ಹೇಳಿರುವ ರೀತಿ ತುಂಬ ಆಕರ್ಷಕವಾದದ್ದು. ‘ಕಾಲೇಜು ರಂಗ’, ‘ಕಾಲೇಜು ತರಂಗ’, ‘ಪ್ರಾಧ್ಯಾಪಕನ ಪೀಠದಲ್ಲಿ’, ‘ತಮಿಳು ತಲೆಗಳ ನಡುವೆ’ ಕೃತಿಗಳೂ ಶೈಕ್ಷಣಿಕ ಜೀವನದ ಕ್ಯಾರಿಕೇಚರ್ ಮಾದರಿಯ ಬರಹಗಳು. ಸ್ವಾಮಿಯವರ ವೃತ್ತಿಜೀವನದ ಸ್ವಾರಸ್ಯಕರ ಸಂಗತಿಗಳನ್ನು ವಿನೋದಮಯ ಶೈಲಿಯಲ್ಲಿ ನಿರೂಪಿಸುತ್ತವೆ. ಇಲ್ಲಿ ಹಾಸ್ಯ-ವಿಡಂಬನೆಗಳೇ ಮುಖ್ಯ ರಸ. ‘ಅಮೆರಿಕದಲ್ಲಿ ನಾನು’ ವಿನೋದಪೂರ್ಣವಾದ ಪ್ರವಾಸ ಕಥನ.

‘ಬೆಳದಿಂಗಳಲ್ಲಿ ಅರಳಿದಮೊಲ್ಲೆ ಮತ್ತು ಇತರ ಪ್ರಬಂಧಗಳು’ಇವೆಲ್ಲಕ್ಕಿಂತ ವಿಭಿನ್ನವಾದ ಶಾಸ್ತ್ರ ಸಾಹಿತ್ಯ ಸಂಶೋಧಿಸುವ ಕೃತಿ. ಈ ಕೃತಿಯಲ್ಲಿ ಸ್ವಾಮಿಯವರು ಪ್ರಸಿದ್ಧ ತಮಿಳು ವಿದ್ವಾಂಸರಾಗಿದ್ದ ಯು.ವಿ.ಸ್ವಾಮಿನಾಥ ಅಯ್ಯರ್ ಅವರ ನಲವತ್ಮೂರು ಪ್ರಬಂಧಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಶ್ರೇಷ್ಠ ಪ್ರಬಂಧಗಳೆಂದು ಭಾರತೀಯ ಸಾಹಿತ್ಯದಲ್ಲಿ ಸ್ಥಾನಗಳಿಸಿರುವ ಇಲ್ಲಿನ ಲೇಖನಗಳು ಸಾಹಿತ್ಯ ಸಂಶೋಧನೆ ಕುರಿತವು. ಹಿರಿಯ ವಿದ್ವಾಂಸನೊಬ್ಬ ಸಾರಿಗೆ ಸೌಲಭ್ಯ ಇಲ್ಲದ ಕಾಲದಲ್ಲಿ ಎತ್ತಿನ ಗಾಡಿ, ಕಾಲ್ನಡಿಗೆ ಮೂಲಕ ಊರೂರು ಅಲೆದು ತಮಿಳು ಕಾವ್ಯಗಳ ಹಸ್ತಪ್ರತಿಗಳನ್ನು ಸಂಪಾದಿಸಲು ಪಟ್ಟ ಪಾಡು ಇದರಲ್ಲಿ ಸೊಗಸಾಗಿ ಚಿತ್ರಿತವಾಗಿದೆ. ಒಂದೊಂದು ಹಸ್ತಪ್ರತಿಯ ಹಿಂದೆಯೂ ಒಂದೊಂದು ಕಥೆ ಇದೆ. ಆ ಕಾಲದ ಜನ ಜೀವನ, ಶೈವ ಮಠಗಳ ರೀತಿನೀತಿಗಳು, ವ್ಯಕ್ತಿ ವೈಶಿಷ್ಟ್ಯಗಳು ಮೊದಲಾದ ವಿವರಗಳಿಂದ ಇದೊಂದು ತಮಿಳು ಸಂಸ್ಕೃತಿಯ ವಾಚಿಕೆಯಂತೆ ಭಾಸವಾಗುತ್ತದೆ.

 ಬಿ.ಜಿ.ಎಲ್. ಸ್ವಾಮಿಯವರು ಸಸ್ಯ ವಿಜ್ಞಾನ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಗೈದಿರುವ ಸಾಧನೆ ಅವರಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾನ್ಯತೆಯನ್ನು ತಂದುಕೊಟ್ಟಿರುವುದು ಕನ್ನಡಿಗರು ಹೆಮ್ಮೆ ಪಡಬೇಕಾದ ಸಂಗತಿ. 1975ರಷ್ಟು ಹಿಂದೆಯೇ ಅವರು ರಶ್ಯಾದ ಲೆನಿನ್ ಗ್ರಾಡ್ ಅಂತಾರಾಷ್ಟ್ರೀಯ ಸಸ್ಯವಿಜ್ಞಾನ ಸಮ್ಮೇಳನದ ಉಪಾಧ್ಯಕ್ಷರಾಗಿದ್ದರು. 1976ರಲ್ಲಿ ಅವರಿಗೆ ಬೀರಬಲ್ ಸಹಾನಿ ಸುವರ್ಣ ಪದಕದ ಗೌರವ ಲಭಿಸಿತು. ‘ಹಸಿರುಹೊನ್ನು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಬಂದಿತು.

ಕಲೆ, ಸಾಹಿತ್ಯಗಳ ಮೂಲಕ ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿ ಪರಂಪರೆಯ ಭಾಗವಾಗಿ ಹೋದ ಮಹನೀಯರನ್ನು ಜನ್ಮ ಶತಾಬ್ದಿಯಂಥ ಸಂದರ್ಭಗಳಲ್ಲಿ ಸಮಾರಂಭಗಳನ್ನೇರ್ಪಡಿಸಿ ಸ್ಮರಿಸುವುದು, ಉತ್ಸವರೂಪದಲ್ಲಿ ಅವರನ್ನು ಆರಾಧಿಸುವುದಕ್ಕಿಂತ ಮಿಗಿಲಾಗಿ ಅವರ ಬದುಕುಬರಹಗಳು ಇಂದಿನ ಪೀಳಿಗೆಯ ನವನವೋನ್ಮೇಶಿ ಕೆಲಸಕಾರ್ಯಗಳಿಗೆ ಪ್ರೇರಣೆ ಒದಗಿಸಲಿ/ಒದಗಿಸಬಹುದು ಎಂಬ ಆಶಯದಿಂದ. ಬಿ.ಜಿ.ಎಲ್. ಸ್ವಾಮಿಯವರು ಇವತ್ತಿನ ಪೀಳಿಗೆಗೆ ಪ್ರೇರಕ ಶಕ್ತಿಯಾಗಬಲ್ಲ ಮಹನೀಯರಲ್ಲೊಬ್ಬರು. ಅವರ ಜನ್ಮ ಶತಾಬ್ದಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡಮಿಗಳ ನೆನಪಿಗೆ ಬಂದಂತಿಲ್ಲ. ಇರಲಿ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಸ್ವಾಮಿಯವರ ಜನ್ಮ ಶತಾಬ್ದಿ ಅಂಗವಾಗಿ ಸ್ನಾತಕೋತ್ತರ ವಿದಾರ್ಥಿಗಳಿಗೆ ‘ಹಸಿರುಹೊನ್ನು’ ಕೃತಿ ವಿಮರ್ಶಾ ಸ್ಪರ್ಧೆ ಏರ್ಪಡಿಸಿರುವುದು ಶ್ಲಾಘನೀಯ.

ಕಲೆ, ಸಾಹಿತ್ಯಗಳ ಮೂಲಕ ನಮ್ಮ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿ ಪರಂಪರೆಯ ಭಾಗವಾಗಿ ಹೋದ ಮಹನೀಯರನ್ನು ಜನ್ಮ ಶತಾಬ್ದಿಯಂಥ ಸಂದರ್ಭಗಳಲ್ಲಿ ಸಮಾರಂಭಗಳನ್ನೇರ್ಪಡಿಸಿ ಸ್ಮರಿಸುವುದು, ಉತ್ಸವರೂಪದಲ್ಲಿ ಅವರನ್ನು ಆರಾಧಿಸುವುದಕ್ಕಿಂತ ಮಿಗಿಲಾಗಿ ಅವರ ಬದುಕುಬರಹಗಳು ಇಂದಿನ ಪೀಳಿಗೆಯ ನವನವೋನ್ಮೇಶಿ ಕೆಲಸಕಾರ್ಯಗಳಿಗೆ ಪ್ರೇರಣೆ ಒದಗಿಸಲಿ/ಒದಗಿಸಬಹುದು ಎಂಬ ಆಶಯದಿಂದ. ಬಿ.ಜಿ.ಎಲ್. ಸ್ವಾಮಿಯವರು ಇವತ್ತಿನ ಪೀಳಿಗೆಗೆ ಪ್ರೇರಕ ಶಕ್ತಿಯಾಗಬಲ್ಲ ಮಹನೀಯರಲ್ಲೊಬ್ಬರು. ಅವರ ಜನ್ಮ ಶತಾಬ್ದಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡಮಿಗಳ ನೆನಪಿಗೆ ಬಂದಂತಿಲ್ಲ.

Writer - ಜಿ.ಎನ್. ರಂಗನಾಥ ರಾವ್

contributor

Editor - ಜಿ.ಎನ್. ರಂಗನಾಥ ರಾವ್

contributor

Similar News