ಸಂಘಪರಿವಾರದ ಪ್ರತಿಮೆ-ಧ್ವಂಸದ ರಾಜಕಾರಣವನ್ನು ಗುಹಾ ಸಮರ್ಥಿಸುತ್ತಿದ್ದಾರಾ?

Update: 2018-03-26 18:30 GMT

ಭಾಗ-1

ಇದು ಮಾರ್ಚ್ 16ರಂದು ಕನ್ನಡ ಪತ್ರಿಕೆಯೊಂದರಲ್ಲಿ ಪ್ರಕಟವಾದ ರಾಮಚಂದ್ರ ಗುಹಾ ಅವರ ‘ಗುಹಾಂಕಣ’ದಲ್ಲಿ ಪ್ರಕಟವಾದ ‘ಲೆನಿನ್ ಬದಲಿಗೆ ಭಗತ್ ಸಿಂಗ್ ಯಾಕಾಗದು?’ ಎಂಬ ಲೇಖನಕ್ಕೆ ಪ್ರತಿಕ್ರಿಯೆ. ಗುಹಾ ಅವರು ತಮ್ಮ ಲೇಖನದಲ್ಲಿ ಹಲವು ವಿಷಯಗಳ ಬಗ್ಗೆ ಆತಂಕಕಾರಿ ಎನ್ನಬಹುದಾದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಅದರಲ್ಲಿ ಮೊದಲನೆಯದು ತ್ರಿಪುರಾದಲ್ಲಿ ಲೆನಿನ್ ಪ್ರತಿಮೆಗಳನ್ನು ನೆಲಕ್ಕುರುಳಿಸಿದ ವಿಧ್ವಂಸಕ ಕೃತ್ಯಗಳ ಬಗ್ಗೆ ಅವರ ಪ್ರತಿಕ್ರಿಯೆ. ಅವರ ಪ್ರತಿಕ್ರಿಯೆಯ ಕೆಲವು ಉದಾಹರಣೆಗಳನ್ನು ನೋಡಿ:

* ‘‘ಲೆನಿನ್ ಪ್ರತಿಮೆಗಳ ಜಾಗದಲ್ಲಿ ತ್ರಿಪುರಾದ ಕಮ್ಯುನಿಸ್ಟ್ ನಾಯಕ ನೃಪೇನ್ ಚಕ್ರವರ್ತಿ ಪ್ರತಿಮೆಗಳಿದ್ದಿದ್ದರೆ ಅವನ್ನು ಒಡೆದು ಹಾಕುತ್ತಿರಲಿಲ್ಲವೇನೋ ಎಂದು ಬಿಜೆಪಿ ಕಾರ್ಯಕರ್ತನೊಬ್ಬ ಹೇಳಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆ ವರದಿ ಮಾಡಿದೆ.’’

* ‘‘ತ್ರಿಪುರಾದಲ್ಲಿ ಸಿಪಿಎಂ ಭಗತ್ ಸಿಂಗ್ ಪ್ರತಿಮೆಗಳನ್ನು ಸ್ಥಾಪಿಸಿದ್ದರೆ ಏನಾಗುತ್ತಿತ್ತು? ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಿಪಿಎಂ ಸೋತ ಬಳಿಕ ಬಿಜೆಪಿ ಕಾರ್ಯಕರ್ತರು ಈ ಪ್ರತಿಮೆಗಳನ್ನು ಒಡೆದು ಹಾಕುತ್ತಿದ್ದರೇ?’’ * ‘‘ತ್ರಿಪುರಾದಲ್ಲಿ ಲೆನಿನ್ ಪ್ರತಿಮೆಗಳನ್ನು ನೆಲಕ್ಕುರುಳಿಸಿದ ಬಿಜೆಪಿಯ ವಿಜಯೋತ್ಸಾಹಿ ದುರುಳರಿಗೆ ಅಸಡ್ಡೆಗಿಂತ ಹೆಚ್ಚಿನ ಬೆಲೆ ಕೊಡುವ ಅಗತ್ಯ ಇಲ್ಲ. ಆದರೆ, ಆ ಪ್ರತಿಮೆಗಳನ್ನು ಅಲ್ಲಿ ಸ್ಥಾಪಿಸಿದ ಜನರ ಬಗ್ಗೆ ಅನುಕಂಪ ತೋರುತ್ತದೆ ಮತ್ತು ಬೇಸರವೂ ಅನಿಸುತ್ತದೆ.’’
* ‘‘ನಾನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುತ್ತಿರುವ ವ್ಯಕ್ತಿ. ಹಾಗಾಗಿ ಸರ್ವಾಧಿಕಾರಿಗಳಿಂದ ದೂರ ಇರಬೇಕು.’’

ಈ ಎಲ್ಲಾ ಹೇಳಿಕೆಗಳ ಮೂಲಕ ಗುಹಾ ಏನು ಹೇಳಲು ಬಯಸು ತ್ತಾರೆ? ಸಂಘ ಪರಿವಾರಕ್ಕೆ ಕಿರಿಕಿರಿ ಉಂಟುಮಾಡದವರ, ಅವರಿಗೆ ಅಪಥ್ಯವಾಗದವರ ಪ್ರತಿಮೆ ಮಾತ್ರ ಸ್ಥಾಪಿಸಬೇಕು. ಪ್ರತಿಮೆ ಸ್ಥಾಪಿಸುವ ಮೊದಲು ಅವರ ಸಮ್ಮತಿ ತೆಗೆದುಕೊಳ್ಳಬೇಕು ಅಂತನಾ? ಭಗತ್ ಸಿಂಗ್ ಅಥವಾ ನೃಪೇನ್ ಚಕ್ರವರ್ತಿ ಪ್ರತಿಮೆಗಳನ್ನು ಸಂಘಪರಿವಾರದ ಗೂಂಡಾ ಗಳು ಒಡೆಯುವುದಿಲ್ಲ ಎಂದು ಗುಹಾ ಭರವಸೆಯಿಂದ ಹೇಳಬಲ್ಲರೇ? ಈ ವರೆಗೆ ಭಗತ್ ಸಿಂಗ್ ಯಾವುದೇ ವಿದೇಶಿ ಸಿದ್ಧ್ದಾಂತದಿಂದ ಕಳಂಕಿತನಾಗದ ಅಪ್ಪಟ ದೇಶಪ್ರೇಮಿ ಎಂದಷ್ಟೇ ಸಂಘ ಪರಿವಾರದ ಪುಂಡರಿಗೆ ಗೊತ್ತಿದ್ದದ್ದು. ಭಗತ್ ಸಿಂಗ್ ಮಾರ್ಕ್ಸ್‌ವಾದಿ ಎಂದು ಗುಹಾ ಸರ್ಟಿಫಿಕೆಟ್ ನೀಡಿದ್ದರಿಂದ ಖಂಡಿತ ಮುಂದಿನ ಅವಕಾಶದಲ್ಲಿ ಭಗತ್ ಸಿಂಗ್ ಪ್ರತಿಮೆಯೂ ಅವರ ಪಟ್ಟಿಗೆ ಸೇರಿಕೊಳ್ಳುತ್ತದೆ. ಮರುದಿನವೇ ಸಂಘ ಪರಿವಾರ ಪೆರಿಯಾರ್, ಅಂಬೇಡ್ಕರ್ ಅವರ ಪ್ರತಿಮೆಗಳ ಮೇಲೂ ವಿಧ್ವಂಸಕ ಕೃತ್ಯ ಮಾಡಿದ್ದಕ್ಕೆ ಗುಹಾ ಏನು ಹೇಳುತ್ತಾರೆ? ಅವರನ್ನೂ ಗುಹಾ ವಿದೇಶಿ ಮತ್ತು ಸರ್ವಾಧಿಕಾರಿ ಎಂದು ಕರೆಯುತ್ತಾರಾ? ಆ ಪ್ರತಿಮೆಗಳನ್ನು ಸ್ಥಾಪಿಸಿದವರ ಬಗೆಗೂ, ಪೆರಿಯಾರ್ ಹಾಗೂ ಅಂಬೇಡ್ಕರ್ ವಾದಿಗಳಿಗೂ ಮತ್ತು ಈ ನಾಯಕರನ್ನು ಒಪ್ಪದಿದ್ದರೂ ಗೌರವಿಸುವವರ ಬಗೆಗೂ ಗುಹಾ ಅವರಿಗೆ ಅನುಕಂಪ ತೋರುತ್ತದೆ ಮತ್ತು ಬೇಸರವೂ ಅನಿಸುತ್ತದೆಯಾ? ಈ ಬಗ್ಗೆ ಯಾಕೆ ಅವರು ಜಾಣಮೌನಕ್ಕೆ ಜಾರುತ್ತಾರೆ? ಸಂಘ ಪರಿವಾರದ ‘ಪ್ರತಿಮೆ-ವಿಧ್ವಂಸಕ’ ರಾಜಕಾರಣವನ್ನು ದೇಶದ ಪ್ರಜಾಪ್ರಭುತ್ವವಾದಿಗಳು ಒಕ್ಕೊರಲಿನಿಂದ ಖಂಡಿಸಿದ್ದಾರೆ. ಆತಂಕ ವ್ಯಕ್ತಪಡಿಸಿದ್ದಾರೆ. ತ್ರಿಪುರಾದ ಚುನಾವಣಾ ವಿಜಯದ ನಂತರ ಸಿಪಿಐ(ಎಂ) ಸದಸ್ಯರು ಬೆಂಬಲಿಗರ ಮೇಲೆ ಸಂಘಪರಿವಾರ ನಡೆಸುತ್ತಿರುವ ದೌರ್ಜನ್ಯಗಳು, ಕೊಲೆ-ಸುಲಿಗೆಗಳು ಮತ್ತು ಕಚೇರಿಗಳ ನಾಶವನ್ನೂ ಅವರು ಖಂಡಿಸಿದ್ದಾರೆ. ಇವರಲ್ಲಿ ಹಲವು ಕಮ್ಯುನಿಸ್ಟ್-ವಿರೋಧಿಗಳೂ ಸೇರಿದ್ದಾರೆ. ಅವರೆಲ್ಲರೂ ಈ ಪ್ರತಿಮೆ ಯಾರದು? ಅವರ ಸಿದ್ಧಾಂತಗಳನ್ನು ತಾವು ಒಪ್ಪುತ್ತೇವೋ ಬಿಡುತ್ತೇವೋ? ಎಂಬುದರ ತಾರತಮ್ಯವಿಲ್ಲದೆ ಈ ವಿಧ್ವಂಸಕ ರಾಜಕಾರಣದ ಮಾದರಿ ಪ್ರಜಾಪ್ರಭುತ್ವವಾದಿ ವ್ಯವಸ್ಥೆ ಮೇಲೆ ಪ್ರಹಾರ ಎಂದು ಖಂಡಿಸಿದ್ದಾರೆ. ಈಗ ತ್ರಿಪುರಾದಲ್ಲಿ ಸಂಘಪರಿವಾರ ತೋರಿಸಿರುವುದು ಬರಿಯ ಟ್ರೈಲರ್. ಗುಹಾ ಸೂಚಿಸುವಂತೆ ಈ ಬಗ್ಗೆ ಎಲ್ಲರೂ ಅಸಡ್ಡೆ ತೋರಿದರೆ ನೆಹರೂ, ಭಗತ್ ಸಿಂಗ್, ಗಾಂಧೀಜಿ, ಬಸವಣ್ಣ ಎಲ್ಲಾ ಪ್ರತಿಮೆಗಳಿಗೂ ಅದೇ ಗತಿ ಕಾದಿದೆ.

 ನನಗೆ ಗೊತ್ತಿರುವ ಹಾಗೆ ಸಂಘಪರಿವಾರದ ಬೆಂಬಲಿಗರು, ಒಡನಾಡಿಗಳು ಬಿಟ್ಟರೆ ಯಾರೂ ಗುಹಾ ತಮ್ಮ ಲೇಖನದಲ್ಲಿ ಮಾಡಿದಂತಹ ವಿತಂಡವಾದ ಮಾಡಿ ‘ಪ್ರತಿಮೆ-ವಿಧ್ವಂಸಕ’ ರಾಜಕಾರಣವನ್ನು ಎಳ್ಳಷ್ಟು ಸಮರ್ಥಿಸಿಲ್ಲ. ‘ಅಸಡ್ಡೆ’ ಮಾಡಿದರೆ ಸಾಕು ಎಂದು ಕೂತಿಲ್ಲ. ಕೆಲವು ಸಂಘಪರಿವಾರದ ಬೆಂಬಲಿಗರೂ ಒಡನಾಡಿಗಳೂ ಅದನ್ನು ಸಮರ್ಥಿಸಲಾಗದೆ ಖಂಡಿಸಿದ್ದಾರೆ. ಇಲ್ಲಿ ಉದಾಹರಣೆಗಳಾಗಿ ಕೇವಲ ಎರಡು ಪ್ರತಿಕ್ರಿಯೆಗಳನ್ನು ನಾನು ಇಲ್ಲಿ ನೆನಪಿಸಲು ಬಯಸುತ್ತೇನೆ. ಒಂದು ಗೋಪಾಲಕೃಷ್ಣ ಗಾಂಧಿ ಅವರ (ದಿ ಹಿಂದೂನಲ್ಲಿ ಪ್ರಕಟವಾದ) ಪ್ರತಿಕ್ರಿಯೆ ಪ್ರಾಮಾಣಿಕ ಪ್ರಜಾಪ್ರಭುತ್ವವಾದಿಗಳ ಪ್ರತಿಕ್ರಿಯೆಯ ಉದಾಹರಣೆಯಾಗಿ. ಇನ್ನೊಂದು ಸಂಘಪರಿವಾರದ ಒಡನಾಡಿ ಚಂದನ್ ಗುಪ್ತಾ ಅವರ (ಎನ್‌ಡಿಟಿವಿ ವೆಬ್ ಸೈಟ್‌ನಲ್ಲಿ ಪ್ರಕಟವಾದ) ಪ್ರತಿಕ್ರಿಯೆ. ಗೋಪಾಲಕೃಷ್ಣ ಗಾಂಧಿ ಅವರು ಇದನ್ನು ಬಾಬರಿ ಮಸೀದಿ-ನಾಶದಿಂದ ಆರಂಭವಾದ ‘ಆಪರೇಶನ್ ಧಕ್ಕಾ’ದ ಧ್ವಂಸ ಕೃತ್ಯಗಳ ಸರಣಿಯ ಭಾಗವಾಗಿ ನೋಡುತ್ತಾರೆ. ಚಂದನ್ ಗುಪ್ತಾ ತಮ್ಮ ಲೇಖನದಲ್ಲಿ ಲೆನಿನ್, ಸಿಪಿಐ(ಎಂ), ಕಮ್ಯುನಿಸಂ ವಿರುದ್ಧ ತಮ್ಮ ವಿರೋಧವನ್ನು ವ್ಯಕ್ತಪಡಿಸಿಯೂ ನಮ್ಮ ಸಮಾಜದ ಜಾತಿ ಮುಂತಾದ ಕಂದಕಗಳ ಸಾಮಾಜಿಕ ಹಂದರವನ್ನೇ ನಾಶ ಮಾಡಬಲ್ಲ ಪ್ರತಿಮೆ-ವಿಧ್ವಂಸಕ ರಾಜಕಾರಣದ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾರೆ.

ಚಂದನ್ ಗುಪ್ತಾ ಅವರಷ್ಟೂ ಆತಂಕ ವ್ಯಕ್ತಪಡಿಸದ, ಮಾತ್ರವಲ್ಲ ಅದನ್ನು ಸಮರ್ಥಿಸುವ, ತ್ರಿಪುರಾದ ಸಿಪಿಐ(ಎಂ) ಕಾರ್ಯಕರ್ತರ ಕಚೇರಿಗಳ ಮೇಲೆ ಕೊಲೆ-ಸುಲಿಗೆಗಳನ್ನು ಖಂಡಿಸದೆ ಅದರ ಬಗ್ಗೆ ಜಾಣ ಮೌನ ವಹಿಸುವ ಗುಹಾ ಅವರನ್ನು ಪ್ರಜಾಪ್ರಭುತ್ವವಾದಿ ಎಂದು ನಾವು ಒಪ್ಪಿಕೊಳ್ಳಬಹುದೇ? ‘ಚಾರಿತ್ರಿಕ’ ತಪ್ಪುಗಳು
ಖ್ಯಾತ ಇತಿಹಾಸಕಾರನೆನಿಸಿರುವ ಗುಹಾ ಲೇಖನದ ಕೆಲವು ಮುಖ್ಯ ‘ಚಾರಿತ್ರಿಕ’ ತಪ್ಪುಗಳನ್ನು ನೋಡಿ:
1. ‘‘ಭಗತ್ ಸಿಂಗ್‌ಗೆ ರಶ್ಯಾದಲ್ಲಿ ಲೆನಿನ್ ಮತ್ತು ಸ್ಟಾಲಿನ್ ಸೃಷ್ಟಿಸಿದ ವಿಕೃತಿಗಳು ಮತ್ತು ಭೀತಿಯ ಬಗ್ಗೆ ತಿಳಿದಿರುವುದು ಸಾಧ್ಯವೇ ಇಲ್ಲ.’’
ಲೆನಿನ್ ತೀರಿಕೊಂಡಿದ್ದು 1924ರಲ್ಲಿ. ಭಗತ್ ಸಿಂಗ್ ಹುತಾತ್ಮರಾದದ್ದು 1931ರಲ್ಲಿ. ಸ್ಟಾಲಿನ್ ಅಲ್ಲದಿದ್ದರೂ, ಲೆನಿನ್ ಅವರು ಸೃಷ್ಟಿಸಿದ ತಥಾಕಥಿತ ‘‘ವಿಕೃತಿಗಳು ಮತ್ತು ಭೀತಿಯ ಬಗ್ಗೆ ತಿಳಿದಿರುವುದು ಸಾಧ್ಯವೇ ಇಲ್ಲ.’’ ಎಂದು ಗುಹಾ ಹೇಗೆ ಹೇಳುತ್ತಾರೆ?
2. ‘‘1989ರಲ್ಲಿ ಬರ್ಲಿನ್ ಗೋಡೆ ಉರುಳಿತು; ಒಂದು ಕಾಲದಲ್ಲಿ ಆತ ಆಳಿದ್ದ ದೇಶಗಳೇ ಲೆನಿನನ್ನು ಸಮಗ್ರವಾಗಿ ತಿರಸ್ಕರಿಸಿಬಿಟ್ಟವು.’’
1989ರಲ್ಲಿ ಸಮಾಜವಾದಿ ವ್ಯವಸ್ಥೆಯನ್ನು ತ್ಯಜಿಸಿದ ದೇಶಗಳು ಪೂರ್ವ ಯುರೋಪಿನ ದೇಶಗಳು. ಅವುಗಳನ್ನು ಲೆನಿನ್ ಎಂದೂ ‘ಆಳಿ’ರಲಿಲ್ಲ, ಏಕೆಂದರೆ ಇವು ಸಮಾಜವಾದಿ ಬಣ ರೂಪಿಸಿದ್ದೇ ಲೆನಿನ್ ನಿಧನದ ಎರಡು ದಶಕಗಳ ನಂತರ.
3. ‘‘ಈಶಾನ್ಯ ಭಾರತದಲ್ಲಿ ಎಚ್.ಎಸ್.ಆರ್.ಎ. ಹೆಚ್ಚು ಸಕ್ರಿಯವಾಗಿತ್ತು. ಹೀಗಾಗಿ, ಭಗತ್ ಸಿಂಗ್ ಮಾರ್ಕ್ಸ್‌ವಾದಿ ಆಗಿದ್ದರೂ ಅವರು ಅವಿಭಜಿತ ಸಿಪಿಐ ಸದಸ್ಯ ಆಗಿರಲಿಲ್ಲ.’’
4. ‘‘ಸಿಪಿಎಂ ತನ್ನ ಮೂಲವನ್ನು ಗುರುತಿಸಿಕೊಳ್ಳುವುದು ಅವಿಭಜಿತ ಸಿಪಿಐನಲ್ಲಿ. ಸಿಖ್ ಕ್ರಾಂತಿಕಾರಿ ಭಗತ್ ಸಿಂಗ್ ಸಿಪಿಐನ ಸದಸ್ಯ ಆಗಿರಲಿಲ್ಲ. ಹಾಗಾಗಿಯೇ ಸಿಪಿಎಂನ ಮಹಾಪುರುಷರ ಪಟ್ಟಿಯಲ್ಲಿ ಭಗತ್ ಸಿಂಗ್ ಗೆ ಜಾಗ ಇಲ್ಲ.’’
ಎಚ್.ಎಸ್.ಆರ್.ಎ. ಸಕ್ರಿಯವಾಗಿದ್ದದ್ದು ವಾಯುವ್ಯ ಮತ್ತು ಉತ್ತರ ಭಾರತದಲ್ಲಿ ಮತ್ತು 1930ರ ದಶಕದಲ್ಲಿ. ಭಗತ್ ಸಿಂಗ್ ನನ್ನು ಸಿಖ್ ಕ್ರಾಂತಿಕಾರಿ ಎಂದು ಕರೆಯುವುದು ಚಾರಿತ್ರಿಕವಾಗಿ ತಪ್ಪು ಮತ್ತು ಇಡೀ ಭಾರತದ ವಿಮೋಚನೆಗೆ ಸ್ವಾತಂತ್ರ್ಯಕ್ಕೆ ಬಲಿದಾನ ನೀಡಿದ ಕ್ರಾಂತಿಕಾರಿ ಚೇತನಕ್ಕೆ ಘೋರ ಅಪಮಾನ.

(ನಾಳೆಯ ಸಂಚಿಕೆಗೆ)

Writer - ಜಿ.ವಿ.ಶ್ರೀರಾಮರೆಡ್ಡಿ

contributor

Editor - ಜಿ.ವಿ.ಶ್ರೀರಾಮರೆಡ್ಡಿ

contributor

Similar News