×
Ad

ಕಾಂಗ್ರೆಸ್ ಜೊತೆ ಹೊಂದಾಣಿಕೆಯಿಲ್ಲ: ಎಚ್.ಡಿ.ದೇವೇಗೌಡ

Update: 2018-03-27 18:54 IST

ಬೆಂಗಳೂರು, ಮಾ.27: ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಜೊತೆಗಿನ ಮೈತ್ರಿ ವಿಚಾರವನ್ನು ವ್ಯಂಗ್ಯವಾಗಿ ಹೇಳಿದ್ದೇನೆ ಹೊರತು ಬೇರೆ ಯಾವ ಉದ್ದೇಶವೂ ಇಲ್ಲ. ಆದರೆ, ಮಾಧ್ಯಮಗಳಲ್ಲಿ ನಾನು ಈ ವಿಚಾರವಾಗಿ ಹೇಳಿದ್ದನ್ನು ಬೇರೆ ರೀತಿ ವಿಶ್ಲೇಷಿಸುತ್ತಿರುವುದು ಬೇಸರ ತಂದಿದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ಮಂಗಳವಾರ ನಗರದ ಜೆಪಿ ಭವನ(ಜೆಡಿಎಸ್ ಕಚೇರಿ)ದಲ್ಲಿ ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಈಗಾಗಲೆ ನಾವು ಬಿಎಸ್ಪಿ ಜೊತೆ ಕೈ ಜೋಡಿಸಿದ್ದೇವೆ. ಎಸ್ಪಿ ಬಂದರೆ ಪರಿಶೀಲನೆ ನಡೆಸುತ್ತೇನೆ. ಉಳಿದ ಪಕ್ಷಗಳ ಮೈತ್ರಿಯನ್ನು ಪರಿಗಣಿಸಲು ಸಮಯ ಇಲ್ಲ. ಕಾಂಗ್ರೆಸ್ ಜೊತೆಗಿನ ಮೈತ್ರಿ ಕೇವಲ ವ್ಯಂಗ್ಯಕ್ಕಾಗಿ ಹೇಳಿದ್ದು ಅಷ್ಟೇ ಎಂದರು.

ಪ್ರಗತಿಪರ ಸಂಘಟನೆಯವರು ಇವತ್ತು ಬೆಳಗ್ಗೆ ನನ್ನ ಬಳಿ ಬಂದು ಬಿಜೆಪಿ ಸೋಲಿಸಲು ಕಾಂಗ್ರೆಸ್ ಜೊತೆ ಸೇರಿ, ಬಿಜೆಪಿಗೆ ನಷ್ಟವಾಗುವಂತೆ ನೋಡಿಕೊಳ್ಳಬೇಕು ಎಂದರು. ಆದರೆ, ಪ್ರಗತಿಪರರು ಹೇಳಿರುವುದನ್ನುಮಾಡುವುದಕ್ಕೆ ಈಗ ಸಮಯ ಎಲ್ಲಿದೆ ಎಂದು ಅವರು ಪ್ರಶ್ನಿಸಿದರು.

ರಾಜ್ಯ ವಿಧಾನಸಭೆಗೆ ಈಗಾಗಲೆ ಚುನಾವಣೆ ಘೋಷಣೆಯಾಗಿದೆ. ಮೇ 12ರಂದು ಮತದಾನ, ಮೇ 15ರಂದು ಮತ ಎಣಿಕೆ, ಮೇ 18ರಂದು ನನ್ನ ಹುಟ್ಟುಹಬ್ಬ. ರಾಜ್ಯದ ಜನತೆ ಈ ಬಾರಿ ನನ್ನ ಹುಟ್ಟುಹಬ್ಬ ಆಚರಣೆ ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದು ದೇವೇಗೌಡ ಹೇಳಿದರು.

ರಾಜ್ಯ ಸರಕಾರವು ಕಳೆದ ಮೂರು ದಿನಗಳಿಂದ ಸ್ವೇಚ್ಛಾಚಾರವಾಗಿ ಅಧಿಕಾರಿಗಳನ್ನು ವರ್ಗಾವಣೆ ಮಾಡುತ್ತಿದೆ. ಸಾಧ್ಯವಾದ ಮಟ್ಟಿಗೆ ತಮಗೆ ಬೇಕಾದ ಅಧಿಕಾರಿಗಳನ್ನು ಬೇಕಾದ ಕಡೆಗೆ ವರ್ಗಾವಣೆ ಮಾಡಿದ್ದಾರೆ. ಈ ವಿಚಾರವನ್ನು ಚುನಾವಣಾ ಆಯೋಗದ ಗಮನಕ್ಕೆ ತರುತ್ತೇವೆ ಎಂದು ಅವರು ತಿಳಿಸಿದರು.

ಮೂರು ವರ್ಷಕ್ಕಿಂತ ಹೆಚ್ಚು ಕಾಲ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಬೀಡುಬಿಟ್ಟಿರುವ ಹಾಗೂ ಜನಪ್ರತಿನಿಧಿಗಳ ಸಂಬಂಧಿಗಳಾಗಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು. ಮತಗಟ್ಟೆಗೆ ತಟಸ್ಥ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ದೇವೇಗೌಡ ಒತ್ತಾಯಿಸಿದರು.

ಚುನಾವಣೆಗೂ ಮುಂಚೆ ಪೊಲೀಸ್ ವ್ಯವಸ್ಥೆ ಬದಲಾಗಬೇಕು. ಐದು ವರ್ಷ ಹೇಗೊ ಕೆಂಪಯ್ಯ ವ್ಯವಸ್ಥೆ ನಡೆದುಕೊಂಡು ಹೋಯಿತು. ಇನ್ನು ಇದಕ್ಕೆ ಅವಕಾಶ ಬೇಡ. ಈ ಸಂಬಂಧ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇನೆ ಎಂದು ದೇವೇಗೌಡ ಹೇಳಿದರು.

ಕಾಂಗ್ರೆಸ್ ಜೊತೆಗೆ ಮೈತ್ರಿ ಇಲ್ಲ
ಕಾಂಗ್ರೆಸ್ ಪಕ್ಷದ ಜೊತೆ ಯಾವುದೆ ಕಾರಣಕ್ಕೂ ಸಂಬಂಧ ಬೆಳೆಸುವ ಪ್ರಶ್ನೆಯೇ ಇಲ್ಲ. ರಾಜ್ಯದಲ್ಲಿ ಜೆಡಿಎಸ್ ಪಕ್ಷವು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದು, ಜನತೆ ಕುಮಾರಸ್ವಾಮಿಗೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವಿದೆ.
-ಎಚ್.ಡಿ.ದೇವೇಗೌಡ, ಜೆಡಿಎಸ್ ವರಿಷ್ಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News