ಚುನಾವಣೆಯಲ್ಲಿ ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗುತ್ತೇವೆ: ದಿನೇಶ್‌ಗುಂಡೂರಾವ್
ಬೆಂಗಳೂರು, ಮಾ.27: ರಾಜ್ಯವಿಧಾನಸಭೆಗೆ ಚುನಾವಣೆ ಘೋಷಣೆಯಾಗಿರುವುದು ಸಂತೋಷ ತಂದಿದೆ. ಎಲ್ಲ ಪಕ್ಷಗಳಿಗೂ ಇದು ಪರೀಕ್ಷಾ ಸಮಯ. ಚುನಾವಣೆ ಎಂಬ ಪರೀಕ್ಷೆಯಲ್ಲಿ ನಾವು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದರು.
ಮಂಗಳವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಮಾಜಿ ಶಾಸಕರಾದ ಝಮೀರ್‌ಅಹ್ಮದ್ ಖಾನ್, ಚಲುವರಾಯಸ್ವಾಮಿ, ಎಚ್.ಸಿ.ಬಾಲಕೃಷ್ಣ, ಅಖಂಡ ಶ್ರೀನಿವಾಸಮೂರ್ತಿ, ರಮೇಶ್ ಬಂಡಿಸಿದ್ದೇಗೌಡ, ಭೀಮಾನಾಯ್ಕಾ, ಮಾಜಿ ವಿಧಾನಪರಿಷತ್ ಸದಸ್ಯ ರಾಮಕೃಷ್ಣ ಸೇರಿದಂತೆ ಇನ್ನಿತರರಿಗೆ ಪಕ್ಷದ ಸದಸ್ಯತ್ವ ನೀಡಿದ ಬಳಿಕ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷಕ್ಕೆ ಜನ ಐದು ವರ್ಷ ಆಶೀರ್ವಾದ ಮಾಡಿದ್ದರು. ಈ ಅವಧಿಯಲ್ಲಿ ಕಾಂಗ್ರೆಸ್ ಸರಕಾರವು ಪ್ರಾಮಾಣಿಕವಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರವು ಎರಡನೆ ಬಾರಿಯೂ ತೇರ್ಗಡೆಯಾಗುತ್ತದೆ. ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಹಾಗೂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಯಾತ್ರೆಗಳಲ್ಲಿ ಅಪಾರ ಜನ ಬೆಂಬಲ ವ್ಯಕ್ತವಾಗಿದೆ ಎಂದು ಅವರು ತಿಳಿಸಿದರು.
ನಮ್ಮ ಸರಕಾರದ ಅವಧಿಯಲ್ಲಿ ರಾಜ್ಯದಲ್ಲಿ ಅಸ್ಥಿರತೆಯ ವಾತಾವರಣ ಸೃಷ್ಟಿಯಾಗಿಲ್ಲ. ಕರ್ನಾಟಕವು ದೇಶದಲ್ಲೆ ವೇಗವಾಗಿ ಬೆಳೆಯುತ್ತಿರುವ ರಾಜ್ಯ, ಎಲ್ಲ ಜನಪರ ಕಾರ್ಯಕ್ರಮಗಳು ಜನರ ಮನಸ್ಸು ಗೆದ್ದಿವೆ. ಇಷ್ಟೆಲ್ಲ ಕೆಲಸಗಳನ್ನೂ ಮಾಡಿರುವ ನಮಗೆ ಜನ ಮತ್ತೆ ಆಶೀರ್ವಾದ ಮಾಡುವ ವಿಶ್ವಾಸವಿದೆ ಎಂದು ದಿನೇಶ್‌ಗುಂಡೂರಾವ್ ಹೇಳಿದರು.
ಬಿಜೆಪಿ ನಾಯಕರು ಹತಾಶೆಯಿಂದ ಕಾಂಗ್ರೆಸ್ ಬಗ್ಗೆ ಮಾತನಾಡುತ್ತಿದ್ದಾರೆ. ಕೆಪಿಸಿಸಿ ಚುನಾವಣಾ ಪ್ರಣಾಳಿಕೆ ಸಮಿತಿಯು ಬುಧವಾರ ಸಭೆ ನಡೆಸಲಿದೆ. ಕಳೆದ ಚುನಾವಣೆಯಲ್ಲಿ ನಾವು ಜನತೆಗೆ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ದಿನೇಶ್‌ಗುಂಡೂರಾವ್ ಹೇಳಿದರು.
ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ವಿಚಾರದ ಕುರಿತು, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, 'ಮೈತ್ರಿ ವಿಚಾರದ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ. ಜೆಡಿಎಸ್, ಬಿಜೆಪಿಗಿಂತಲೂ ಕಾಂಗ್ರೆಸ್ ಪ್ರಭಾವ ಎಲ್ಲ ಕ್ಷೇತ್ರಗಳಲ್ಲೂ ಇದೆ. ಇಪ್ಪತ್ತು ಕ್ಷೇತ್ರಗಳಲ್ಲಿ ಕಾಂಗ್ರೆಸ್- ಬಿಜೆಪಿ ನಡುವೆ ನೇರ ಸ್ಪರ್ಧೆಯಿದೆ. ಜೆಡಿಎಸ್ ಬೆರಳೆಣಿಕೆಯಷ್ಟು ಕ್ಷೇತ್ರಗಳಲ್ಲಿ ಮಾತ್ರ ನಮಗೆ ಸ್ಪರ್ಧೆ ಕೊಡಲಿದೆ. ರೈತ ಸಂಘ, ದಲಿತ ಸಂಘರ್ಷ ಸಮಿತಿಗಳು ಮೈತ್ರಿಗೆ ಮುಂದೆ ಬಂದಿವೆ ಎಂದು ಅವರು ಹೇಳಿದರು.
ಕೇಂದ್ರ ಚುನಾವಣಾ ಆಯೋಗಕ್ಕೂ ಮುಂಚಿತವಾಗಿ ಬಿಜೆಪಿಯ ಐಟಿ ಸೆಲ್‌ನಿಂದ ರಾಜ್ಯದ ವಿಧಾನಸಭೆ ಚುನಾವಣಾ ದಿನಾಂಕ ಬಹಿರಂಗವಾಗಿದೆ. ಇದು ಬಿಜೆಪಿಯವರ ಕುತಂತ್ರವನ್ನು ತೋರಿಸುತ್ತದೆ. ಇದೊಂದು ಬಹಳ ಗಂಭೀರವಾದ ಲೋಪ. ಆಯೋಗಕ್ಕಿಂತ ಮುಂಚಿತವಾಗಿ ಬಿಜೆಪಿಯವರಿಗೆ ಹೇಗೆ ಚುನಾವಣೆ ದಿನಾಂಕ ತಿಳಿಯಿತು ಎಂದು ದಿನೇಶ್‌ಗುಂಡೂರಾವ್ ಪ್ರಶ್ನಿಸಿದರು.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥನ ಮೇಲೆ ಕ್ರಮ ತೆಗೆದುಕೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕೂಡಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಐಟಿ ಸೆಲ್ ಮುಖ್ಯಸ್ಥನ ಹುದ್ದೆಯಿಂದ ಆತನನ್ನು ಕಿತ್ತು ಹಾಕಬೇಕು. ಇಲ್ಲದಿದ್ದರೆ, ಕಾಂಗ್ರೆಸ್ ಪಕ್ಷದ ವತಿಯಿಂದ ಹೋರಾಟ ರೂಪಿಸಲಾಗುವುದು ಎಂದು ಅವರು ಹೇಳಿದರು.
ಜೆಡಿಎಸ್ ಭಿನ್ನಮತೀಯ ಶಾಸಕರು ಪಕ್ಷಕ್ಕೆ ಬಂದಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರಿದ್ದಾರೆ. ಇಂದು ಕಚೇರಿಯಲ್ಲಿ ಅಧಿಕೃತವಾಗಿ ಪಕ್ಷದ ಸದಸ್ಯತ್ವ ಪಡೆದಿದ್ದಾರೆ ಎಂದು ದಿನೇಶ್‌ಗುಂಡೂರಾವ್ ತಿಳಿಸಿದರು.
ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಒಂದು ವರ್ಷದ ಹಿಂದೆಯೆ ಜೆಡಿಎಸ್ ತೊರೆಯುವ ನಿರ್ಧಾರ ಮಾಡಿದ್ದೆವು. ಕಾನೂನು ಬದ್ಧವಾಗಿ ಇದೀಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದೇವೆ. 25 ವರ್ಷಗಳಿಂದ ಬೇರೊಂದು ಪಕ್ಷದ ಕೆಲಸ ಮಾಡುತ್ತಿದ್ದೆವು. ಇವತ್ತಿನಿಂದ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡುತ್ತೇವೆ ಎಂದರು.
ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ಗೆ ಶಕ್ತಿ ತುಂಬುವ ಕೆಲಸವನ್ನು ನಾವೆಲ್ಲರೂ ಒಟ್ಟಾಗಿ ಸೇರಿ ಮಾಡುತ್ತೇವೆ ಎಂದು ಚಲುವರಾಯಸ್ವಾಮಿ ಹೇಳಿದರು.