×
Ad

ಚುನಾವಣಾ ನೀತಿ ಸಂಹಿತೆ ಜಾರಿ: ಜಾಹೀರಾತು ಫಲಕಗಳ ತೆರವಿಗೆ ಸೂಚನೆ

Update: 2018-03-27 19:50 IST

ಬೆಂಗಳೂರು, ಮಾ. 27: ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವುದರಿಂದ ನಗರದೆಲ್ಲೆಡೆ ಹಾಕಲಾಗಿರುವ ಸರಕಾರ ಹಾಗೂ ರಾಜಕೀಯ ವಲಯದ ಎಲ್ಲ ಜಾಹೀರಾತು ಫಲಕಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿಯೂ ಆದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಮಂಗಳವಾರ ಬಿಬಿಎಂಪಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚುನಾವಣಾ ನೀತಿ ಸಂಹಿತೆ ಇಂದಿನಿಂದಲೇ ಜಾರಿಯಾಗಿದ್ದು, ಎಲ್ಲಾ ರೀತಿಯ ಜಾಹೀರಾತು ಫಲಕಗಳನ್ನು ತೆರವುಗೊಳಿಸಬೇಕೆಂದು ಎಂದು ತಿಳಿಸಿದರು.

ರೇಡಿಯೋ, ಟಿವಿ ಚಾನಲ್ ಗಳಲ್ಲಿ ಪ್ರಚಾರವಾಗುತ್ತಿರುವ ಸರಕಾರದ ಎಲ್ಲ ಜಾಹೀರಾತುಗಳನ್ನು ಕೂಡಲೇ ಸ್ಥಗಿತಗೊಳಿಸಬೇಕೆಂದು ಆಯಾ ಸಂಸ್ಥೆಯ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ. ಜಾಹೀರಾತುಗಳನ್ನು ನೀಡಲು ಜಿಲ್ಲಾ ಚುನಾವಣಾಧಿಕಾರಿಗಳ ಬಳಿ ಅನುಮತಿ ಪಡೆಯಬೇಕು. ಪ್ರಚಾರ ಮಾಡುವಾಗ ಶಬ್ದಮಾಲಿನ್ಯ ಮಾಡುವಂತಹ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಅಲ್ಲದೇ, ರಾತ್ರಿ 10 ರಿಂದ ಬೆಳಗ್ಗೆ 7ಗಂಟೆವರೆಗೆ ಬಳಸಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಅಲ್ಲದೆ, ಚುನಾವಣೆಯಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ಒಳಗೊಂಡ ಪ್ರಚಾರ ಸಾಮಗ್ರಿಗಳನ್ನು ಬಳಸುವಂತಿಲ್ಲ ಎಂದು ಎಂದು ಎಚ್ಚರಿಸಿದರು.

ಈ ಬಾರಿಯ ಬ್ಯಾಲೆಟ್ ಯೂನಿಟ್‌ನಲ್ಲಿ ಸೀರಿಯಲ್ ನಂಬರ್ ಚಿಹ್ನೆ ಜೊತೆಯಲ್ಲಿ ಭಾವಚಿತ್ರ ಹಾಕಲಾಗುವುದು. ಹೀಗಾಗಿ, ಒಂದೇ ಹೆಸರಿನ ವ್ಯಕ್ತಿಗಳು ಚುನಾವಣೆಗೆ ಸ್ಪರ್ಧಿಸಿರುವುದರಿಂದ ಅಭ್ಯರ್ಥಿಗಳನ್ನು ಗುರುತಿಸಲು ಸಹಾಯವಾಗುತ್ತದೆ ಎಂದು ಹೇಳಿದರು.

ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ನೋಡಲ್ ಅಧಿಕಾರಿ, 6 ಸ್ಕ್ವಾಡ್ ನೇಮಿಸಲಾಗುವುದು. ಚುನಾವಣೆ ವೇಳೆ ಯಾವುದೇ ದೂರುಗಳು ಬಂದಲ್ಲಿ ಈ ತಂಡ ಸ್ಥಳಕ್ಕೆ ತೆರಳಲಿದೆ. ಒಂದು ವಿಧಾನಸಭಾ ಕ್ಷೇತ್ರಕ್ಕೆ ಮೂರು ವಿಡಿಯೋ ಕ್ಯಾಮರಾ ತಂಡವಿದ್ದು, ಚುನಾವಣೆಯಲ್ಲಿ ಮತದಾನದ ಪ್ರತಿ ಹಂತವನ್ನು ಚಿತ್ರೀಕರಿಸಲಿವೆ. ಈ ಬಾರಿ ಹೊಸದಾಗಿ ಓಟ್ಸ್‌ಗ್ರೇಡ್ ಮಾಹಿತಿಯನ್ನು ಒಳಗೊಂಡಿರುತ್ತದೆ. ಕನ್ನಡ, ಇಂಗ್ಲೀಷ್ ಭಾಷೆಯಲ್ಲಿದ್ದು, ಮತದಾನದ ಅವಧಿ ಅಧಿಕಾರಿಗಳ ದೂರವಾಣಿ ಸಂಖ್ಯೆ ಎಫಿಕ್ ಕಾರ್ಡ್ ಇಲ್ಲದಿದ್ದಲ್ಲಿ ಹದಿನೇಳು ಮಾದರಿಯಲ್ಲಿ ಬದಲಿ ಕಾರ್ಡ್ ಮಾಹಿತಿ ಕೂಡ ಇರುತ್ತದೆ ಎಂದು ವಿವರಿಸಿದರು.

ಬ್ಯಾಲೆಟ್ ಯಂತ್ರದ ಜೊತೆಗೆ ವಿವಿ ಪ್ಯಾಟ್ ಇಟ್ಟಿರುವುದರಿಂದ ಕವರ್ ಬಾಕ್ಸ್ ಎತ್ತರ ಮಾಡಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬೆಂಗಳೂರು ಜಿಲ್ಲಾಧಿಕಾರಿ ದಯಾನಂದ್, ಬಿಬಿಎಂಪಿ ವಿಶೇಷ ಆಯುಕ್ತ ಮನೋಜ್ ರಾಜನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News