ಬೆಂಗಳೂರು: ತೆರಿಗೆ ವಂಚಿತ ಎರಡು ಐಶಾರಾಮಿ ಕಾರುಗಳ ಜಫ್ತಿ
ಬೆಂಗಳೂರು, ಮಾ.27: ಯಶವಂತಪುರ ಸಾರಿಗೆ ಕಚೇರಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ತೆರಿಗೆ ಪಾವತಿ ಮಾಡದೇ ಸಂಚರಿಸುತ್ತಿದ್ದ ಐಶಾರಾಮಿ ಕಾರುಗಳನ್ನು ಜಪ್ತಿ ಮಾಡಿದ್ದು, ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಳೆದ ಎಂಟು ವರ್ಷಗಳಿಂದ ಪುದುಚೇರಿಯಲ್ಲಿ ನೋಂದಣಿ ಮಾಡಿಕೊಂಡು ತೆರಿಗೆ ಪಾವತಿ ಮಾಡದೇ ನಗರದಲ್ಲಿ ಸಂಚರಿಸುತ್ತಿದ್ದ ಮರ್ಸಿಡೀಸ್ ಬೆಂಜ್ ಕಾರ್(ಪಿವೈ 01, ಬಿಎಚ್ 8222) ಅನ್ನು ಸದಾಶಿವನಗರದಲ್ಲಿ ಹಿರಿಯ ವೋಟಾರು ವಾಹನ ತನಿಖಾಧಿಕಾರಿ ರಾಜಣ್ಣ ಜಫ್ತಿ ಮಾಡಿದ್ದಾರೆ.
ಸಂಚಾರ ಪೋಲಿಸರು ದಾಖಲಿಸಿರುವ ಪ್ರಕರಣಗಳು, ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಸೇರಿದಂತೆ ಇತರ ದಾಖಲೆಗಳನ್ನು ಪರಿಶೀಲಿಸಿದ ಸಂದರ್ಭದಲ್ಲಿ 8 ವರ್ಷದಿಂದ ವಾಹನ ಕರ್ನಾಟಕದಲ್ಲಿ ಇದ್ದದ್ದು ಖಚಿತವಾಗಿದೆ. ಅಲ್ಲದೆ, ತೆರಿಗೆ ಪಾವತಿಸದ ಹಿನ್ನೆಲೆಯಲ್ಲಿ ವಾಹನವನ್ನು ಜಫ್ತಿ ಮಾಡಿದ್ದು 18 ಲಕ್ಷ ರೂಪಾಯಿ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಲಾಗಿದೆ.
ಜುಲೈ 2015 ರಿಂದ ಇದುವರೆಗೂ ತೆರಿಗೆ ಪಾವತಿಸದೆ ಇರುವ ಮರ್ಸಿಡೀಸ್ ಬೆಂಜ್ ಕಾರ್(ಕೆಎ 05, ಟಿಎಫ್ 4555) ಮೇಲೆ ಯಶವಂತಪುರ ಸಾರಿಗೆ ಕಚೇರಿಯ ಅಧಿಕಾರಿಗಳು ಚಲನವಲನಗಳನ್ನು ಗಮನಿಸುತ್ತಿದ್ದರು. ಸರಿಯಾದ ಮಾಹಿತಿ ಸಿಕ್ಕಿದ್ದರಿಂದ ದಾಳಿ ನಡೆಸಿ ಕಾರನ್ನು ಜಫ್ತಿ ಮಾಡಲಾಗಿದೆ. 20 ಲಕ್ಷ ರೂಪಾಯಿಗಳ ತೆರಿಗೆಯನ್ನು ಪಾವತಿಸದೇ ಸಂಚರಿಸುತ್ತಿರುವ ಐಷಾರಾಮಿ ಕಾರುಗಳ ಚಲನವಲನಗಳ ಮೇಲೆ ಸಾರಿಗೆ ಇಲಾಖೆ ಗಮನ ಇಟ್ಟಿದ್ದು, ತೆರಿಗೆ ವಂಚಿಸುತ್ತಿರುವ ಜನರ ಮೇಲೆ ದಾಳಿ ಮುಂದುವರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.