ದ್ವಿತೀಯ ಪಿಯು ಮೌಲ್ಯಮಾಪನಕ್ಕೆ ಗೈರು: ಉಪನ್ಯಾಸಕರಿಗೆ ನೋಟಿಸ್
Update: 2018-03-27 20:04 IST
ಬೆಂಗಳೂರು, ಮಾ.27: ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಆರಂಭವಾಗಿದ್ದು, ಮೊದಲ ದಿನವೇ ಮೌಲ್ಯಮಾಪನಕ್ಕೆ ಉಪನ್ಯಾಸಕರು ಗೈರಾಗಿದ್ದರು. ಗೈರಾದ ಉಪನ್ಯಾಸಕರಿಗೆ ಪದವಿ ಪೂರ್ವ ಶಿಕ್ಷಣ ಮಂಡಳಿ ನೋಟಿಸ್ ನೀಡಿದೆ.
ರಾಜ್ಯದ 53 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯವನ್ನು ಏಕಕಾಲಕ್ಕೆ ಆರಂಭಿಸಲಾಗಿದೆ. ಮೌಲ್ಯಮಾಪನ ಕಾರ್ಯಕ್ಕೆ ಒಟ್ಟು 24,054ಉಪನ್ಯಾಸಕರನ್ನು ನಿಯೋಜನೆ ಮಾಡಲಾಗಿತ್ತು. ಮೊದಲ ದಿನ 16 ಸಾವಿರದಷ್ಟು ಉಪನ್ಯಾಸಕರು ಹಾಜರಾಗಿದ್ದರು.
ಇನ್ನುಳಿದಂತೆ, ಶೇ.30 ರಷ್ಟು ಉಪನ್ಯಾಸಕರು ಮೊದಲ ದಿನದ ಕರ್ತವ್ಯಕ್ಕೆ ಗೈರಾಗಿದ್ದು ಅವರಿಗೆಲ್ಲಾ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಮಂಡಳಿ ನಿರ್ದೇಶಕಿ ಶಿಖಾ ಮಾಹಿತಿ ನೀಡಿದ್ದಾರೆ. ಉಪನ್ಯಾಸಕರ ಗೈರಿನ ನಡುವೆಯೂ ಸಕಾಲಕ್ಕೆ ಮೌಲ್ಯಮಾಪನ ಕೆಲಸವನ್ನು ಪೂರ್ಣಗೊಳಿಸಿ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ತಿಳಿಸಿದ್ದಾರೆ.