×
Ad

ಬೆಂಗಳೂರು: ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಜಲಮಂಡಳಿ ವಿರುದ್ಧ ಆರೋಪಗಳ ಸುರಿಮಳೆ

Update: 2018-03-27 20:08 IST

ಬೆಂಗಳೂರು, ಮಾ. 27: ಬೇಸಿಗೆ ಆರಂಭವಾಗಿದ್ದು ನಗರದಲ್ಲಿ ಕುಡಿಯುವ ನೀರಿಗೆ ಅಭಾವ ಸೃಷ್ಟಿಯಾಗುತ್ತಿದೆ. ಬೆಂಗಳೂರು ಜಲಮಂಡಳಿ ನೀರಿನ ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮಕೈಗೊಳ್ಳದಿದ್ದರೆ ನಗರದ ಜನತೆ ಹಾಹಾಕಾರ ಪಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಿಬಿಎಂಪಿ ಸದಸ್ಯರು ಒಕ್ಕೂರಲಿನಿಂದ ಒತ್ತಾಯಿಸಿದ್ದಾರೆ.

ಮಂಗಳವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕೌನ್ಸಿಲ್ ಸಭೆಯಲ್ಲಿ ಮಾತನಾಡಿದ ಬಿಬಿಎಂಪಿ ಸದಸ್ಯರು, 'ನಮ್ಮ ವಾರ್ಡ್‌ಗಳಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಇದಕ್ಕೆ ಬೆಂಗಳೂರು ಜಲಮಂಡಳಿಯ ಅಧಿಕಾರಿಗಳ ನಿರ್ಲಕ್ಷವೇ ಕಾರಣ' ಎಂದು ದೂರಿದರು.

ಬಿಬಿಎಂಪಿ ವಿರೋಧ ಪಕ್ಷದ ನಾಯಕ ಎಂ.ಪದ್ಮನಾಭ ರೆಡ್ಡಿ ಮಾತನಾಡಿ, 'ನಗರದಲ್ಲಿ ಕುಡಿಯುವ ನೀರಿನ ಶುಲ್ಕದ ಜೊತೆಗೆ ಒಳಚರಂಡಿ ನಿರ್ವಹಣೆ ಶುಲ್ಕವನ್ನು ಜಲಮಂಡಳಿ ಸಂಗ್ರಹಿಸುತ್ತಿದೆ. ಆದರೆ, ಚರಂಡಿಗಳಲ್ಲಿ ಕೊಳಚೆ ನೀರು ಸೇರುವುದನ್ನು ತಡೆಗಟ್ಟುವಲ್ಲಿ ವಿಫಲವಾಗಿದೆ. ಕೊಳಚೆ ನೀರನ್ನು ರಾಜಕಾಲುವೆಗೆ ಸಂರ್ಕ ಕಲ್ಪಿಸಬೇಕೆಂದು ಹೇಳಿದರು.

ತ್ಯಾಜ್ಯನೀರು ಸಂಸ್ಕರಣ ಘಟಕಗಳಿಂದ ಸಂಸ್ಕರಿಸಿದ ಪ್ರಮಾಣ ಎಷ್ಟು ಎಂಬ ಮಾಹಿತಿಯನ್ನು ಸಭೆಗೆ ಜಲಮಂಡಳಿ ಅಧಿಕಾರಿಗಳು ನೀಡಬೇಕು. ಅಲ್ಲದೇ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಪಾರ್ಕ್‌ಗಳು ನೀರಿಲ್ಲದೆ ಒಣಗುತ್ತಿವೆ. ಸಂಸ್ಕರಿಸಿದ ನೀರನ್ನು ಎಲ್ಲ ಪಾರ್ಕ್‌ಗಳಿಗೂ ಉಚಿತವಾಗಿ ಪೂರೈಸಬೇಕೆಂದು ಪದ್ಮನಾಭರೆಡ್ಡಿ ಒತ್ತಾಯಿಸಿದರು.

ಬಿಬಿಎಂಪಿ ಸದಸ್ಯೆ ನೇತ್ರನಾರಾಯಣ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಒಂದು ಸಾವಿರ ಅಡಿ ಕೊಳವೆ ಬಾವಿ ಕೊರೆದರೂ ನೀರು ಸಿಗುವುದಿಲ್ಲ. ಸಿಕ್ಕರೂ ಕೆಲವೊಮ್ಮೆ ಫ್ಲೋರೈಡ್ ಮಿಶ್ರಿತ ನೀರಾಗಿದ್ದು, ಕುಡಿಯಲು ಯೋಗ್ಯವಾಗಿರುವುದಿಲ್ಲ. ಹೀಗಾಗಿ ನೀರು ಪರೀಕ್ಷಿಸುವ ಯಂತ್ರಗಳನ್ನು ನೀಡಬೇಕೆಂದು ಮನವಿ ಮಾಡಿದ ಅವರು, ನಮ್ಮ ವಾರ್ಡ್‌ನಲ್ಲಿ ಕೊಳವೆ ಭಾವಿಗಳ ನಿರ್ವಹಣೆ ಹದಗೆಟ್ಟಿದೆ. ನೀರು ಬಿಡುವ ವಾಲ್‌ಮೆನ್‌ಗಳು ಹಣ ನೀಡುವವರಿಗೆ ಮಾತ್ರ ಪ್ರತಿನಿತ್ಯ ನೀರು ಬಿಡುತ್ತಿದ್ದಾರೆ. ಇನ್ನುಳಿದವರಿಗೆ ವಾರದಲ್ಲಿ ಎರಡು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದೆ. ಜಲಮಂಡಳಿ ಅಧಿಕಾರಿಗಳಿಗೆ ಈ ಬಗ್ಗೆ ಮನವಿ ಮಾಡಿದರೂ ಸಹ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ದೂರಿದರು. ಇದಕ್ಕೆ ಪದ್ಮನಾಭ ರೆಡ್ಡಿ ಧ್ವನಿಗೂಡಿಸಿದರು.

ಬಿಬಿಎಂಪಿ ಆಡಳಿತ ಪಕ್ಷದ ಸದಸ್ಯ ಎಂ.ಶಿವರಾಜ್ ಮಾತನಾಡಿ, ನಗರದ ಜನತೆಗೆ ಜಲಮಂಡಳಿ ನೀರು ಪೂರೈಸದಿದ್ದರೆ ಬಿಬಿಎಂಪಿಗೆ ದೂರುತ್ತಾರೆ. ನಗರದಲ್ಲಿ ಸುಮಾರು 9ಸಾವಿರ ಬೋರ್‌ವೆಲ್‌ಗಳಿದ್ದು, ಇವುಗಳಲ್ಲಿ ಎರಡು ಸಾವಿರ ಕೊಳವೆಬಾವಿಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಕೊಳವೆಬಾವಿ ಕೊರೆಸಲು ಹಾಗೂ ನಿರ್ವಹಣೆಗೆ ಬಿಬಿಎಂಪಿ ಹಣ ಒದಗಿಸುತ್ತದೆ. ಜಲಮಂಡಳಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News