×
Ad

ಬೆಂಗಳೂರು: ಅಪಹರಿಸಿ, ಹಣ ದೋಚಿದ್ದ ಆರೋಪಿಗಳ ಬಂಧನ

Update: 2018-03-27 20:23 IST

ಬೆಂಗಳೂರು, ಮಾ. 27: ನಗರದಲ್ಲಿ ಸ್ಟುಡಿಯೋ ಆರಂಭ ಮಾಡುವ ಉದ್ದೇಶದಿಂದ ಹಣ ಕೂಡಿಸಿಟ್ಟುಕೊಂಡಿದ್ದ ಫೋಟೋಗ್ರಾಫರ್ ಪ್ರತಾಪ್ ಎಂಬುವವರನ್ನು ಅಪಹರಿಸಿ ಬಂಧನದಲ್ಲಿಟ್ಟುಕೊಂಡು ಹಣ ದೋಚಿದ್ದ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಕೋಣನಕುಂಟೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಪ್ರತಾಪ್‌ರಿಂದ ಮೂರು ಲಕ್ಷದವರೆಗೆ ಹಣ ದೋಚಿದ್ದ ಆರೋಪಿಗಳನ್ನು, ಕೃತ್ಯ ನಡೆದ 24 ಗಂಟೆಗಳ ಅವಧಿಯಲ್ಲಿ ಬಂಧಿಸಿದ್ದಾರೆ. ಕೆಂಬತ್ತಹಳ್ಳಿಯ ಮಧು ಕಿರಣ್ ಅಲಿಯಾಸ್ ಮಧು (32), ಮುನೇಶ್ವರ ಲೇಔಟ್‌ನ ಮಂಜುನಾಥ್ (29), ದೊಡ್ಡಕಲ್ಲಸಂದ್ರದ ಆನಂದ(26), ಜಿಗಣಿಯ ಚಿನ್ನಯ್ಯಪಾಳ್ಯ ನರೇಂದ್ರ (24) ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ.ಎಸ್.ಡಿ. ಶರಣಪ್ಪತಿಳಿಸಿದ್ದಾರೆ.

ಬಂಧಿತ ಆರೋಪಿಗಳಿಂದ 2.30 ಲಕ್ಷ ನಗದು, 2 ಚಿನ್ನದ ಸರ, 1 ಉಂಗುರ, 3 ಮೊಬೈಲ್ ಹಾಗೂ ಕೃತ್ಯಕ್ಕೆ ಬಳಕೆ ಮಾಡಿದ್ದ ಕಾರು, ದ್ವಿಚಕ್ರವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕೋಡಿಚಿಕ್ಕನಹಳ್ಳಿಯ ಫೋಟೋಗ್ರಾಫರ್ ಪ್ರತಾಪ್ ಹೊಸದಾಗಿ ಸ್ಟುಡಿಯೋ ಆರಂಭಿಸಲು ಸ್ನೇಹಿತರಿಂದ, ಸಂಬಂಧಿಕರಿಂದ 3 ಲಕ್ಷದವರೆಗೆ ಹಣಪಡೆದುಕೊಂಡಿದ್ದರು. ಸ್ಟುಡಿಯೋ ಆರಂಭಿಸಲು ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ, ಭಾರ್ಗವ ಎನ್ನುವ ಸ್ನೇಹಿತನನ್ನು ಅಪಹರಿಸಿ, ಅವನಿಂದ ಪ್ರತಾಪ್‌ಗೆ ಮೊಬೈಲ್ ಕರೆಮಾಡಿಸಿದ್ದರು.

ಭಾರ್ಗವ ತನ್ನ ಸಹೋದರಿಗೆ ಆರೋಗ್ಯ ಸರಿಯಿಲ್ಲ ಎಂದು ಕರೆ ಮಾಡಿದ ಕೂಡಲೇ ಕೊತ್ತನೂರು ದಿಣ್ಣೆಯ ಆಕ್ಸಿಸ್ ಬ್ಯಾಂಕ್ ಬಳಿ ಬಂದ ಪ್ರತಾಪ್‌ನನ್ನು ಆರೋಪಿ ಮಧುಕಿರಣ್ ಕಾರಿನಲ್ಲಿ ಅಪಹರಿಸಿ ಮೈಲಸಂದ್ರ ದಿಣ್ಣೆಯಲ್ಲಿರುವ ಐಫೆಲ್ ಗ್ರೀನ್ ರೆಸಾರ್ಟ್‌ಗೆ ಕರೆದುಕೊಂಡು ಹೋಗಿ ಅಲ್ಲಿನ ಕೊಠಡಿಯೊಂದರಲ್ಲಿ ಅಕ್ರಮ ಬಂಧನದಲ್ಲಿಟ್ಟು 80 ಸಾವಿರ ನಗದು, ಚಾಕು ತೋರಿಸಿ ಡೆಬಿಟ್ ಕಾರ್ಡಿನ ಪೀನ್ ನಂಬರ್ ಪಡೆದುಕೊಂಡರು.

ಆ ಕಾರ್ಡ್‌ನಿಂದ 95 ಸಾವಿರ ರೂ.ಗಳನ್ನು ಡ್ರಾ ಮಾಡಿಕೊಂಡು ಚುಂಚಘಟ್ಟ ಮುಖ್ಯರಸ್ತೆಯ ಮೇಘ ಜ್ಯುವೆಲ್ಲರಿ ಶಾಪ್‌ನಲ್ಲಿ 1 ಲಕ್ಷ 50 ಸಾವಿರ ರೂ.ಗಳ ಚಿನ್ನಾಭರಣ ಖರೀದಿಸಿ ನಂತರ 25 ಸಾವಿರ ಡ್ರಾ ಮಾಡಿದ್ದಾರೆ. ಒಟ್ಟಾರೆ 2 ಲಕ್ಷದ 72ಸಾವಿರ ಹಣ ಪಡೆದು ಪೊಲೀಸರಿಗೆ ದೂರು ಕೊಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಬಿಟ್ಟು ಕಳುಹಿಸಿದ್ದರು ಎಂದು ಪ್ರತಾಪ್ ದೂರಿನಲ್ಲಿ ತಿಳಿಸಿದ್ದ. ಕೋಣೆನಕುಂಟೆ ಪೊಲೀಸ್ ಇನ್ಸ್‌ಪೆಕ್ಟರ್ ಸದಾನಂದ ಅವರ ವಿಶೇಷ ತಂಡ ಕಾರ್ಯಾಚರಣೆ ನಡೆಸಿ, ಸಿಸಿಟಿವಿ ಕ್ಯಾಮರಾ, ದಶ್ಯಾವಳಿಗಳು ಇನ್ನಿತರ ಮಾಹಿತಿ ಸಂಗ್ರಹಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News