×
Ad

ಕಾಂಗ್ರೆಸ್, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ: ಎಚ್.ಡಿ.ಕುಮಾರಸ್ವಾಮಿ

Update: 2018-03-27 20:33 IST

ಮೈಸೂರು,ಮಾ.27: ಕಾಂಗ್ರೆಸ್ ಜೊತೆ ಯಾವುದೇ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು. 

ನಗರದ ಖಾಸಗಿ ಹೋಟೆಲ್ ನಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೆಲವು ಪ್ರಜ್ಞಾವಂತರೆನ್ನುವವರು ದೇವೇಗೌಡರ ಬಳಿ ಬಂದು 'ಕೋಮುವಾದಿ ಬಿಜೆಪಿಯನ್ನು ದೂರ ಇಡಬೇಕಾಗಿರುವುದರಿಂದ ಕಾಂಗ್ರೆಸ್ ಜೊತೆಗೆ ಕೈಜೋಡಿಸಿ' ಎಂಬ ಮನವಿಯನ್ನು ಮಾಡಿದ್ದಾರೆ. ಇದಕ್ಕೆ ದೇವೇಗೌಡರು 'ನಾನೇನೋ ಸಿದ್ಧನಿದ್ದೇನೆ, ಅವರು ಸಿದ್ಧರಿದ್ದಾರ ಕೇಳಿಕೊಂಡು ಬನ್ನಿ' ಎಂದು ವ್ಯಂಗ್ಯ ಮಾಡಿದ್ದಾರೆ ಅಷ್ಟೇ. ಅದನ್ನೇ ಮಾಧ್ಯಮಗಳು ತಿರುಚಿ ತೋರಿಸುತ್ತಿವೆ ಎಂದು ಹೇಳಿದರು.  

ನಂಜನಗೂಡಿನ ನಂಜುಂಡೇಶ್ವರನ ಆಶೀರ್ವಾದದಿಂದ ಈ ಬಾರಿ ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳದೆ ಜೆಡಿಎಸ್ ಮುನ್ನುಗುತ್ತದೆ ಎಂದರು. ಬಿಜೆಪಿಯ ಅಮಿತ್ ಶಾ ರಾಜ್ಯಕ್ಕೆ ಮೂರು ಬಾರಿಯೋ ನಾಲ್ಕು ಬಾರಿಯೋ ಬಂದಿದ್ದಾರೆ. ಅವರು ಜನಗಳ ಬಳಿ ಹೋಗದೆ ಮಠ ಗಳಿಗೆ ಭೇಟಿ ಕೊಡುತ್ತಿದ್ದಾರೆ. ಪಾಪ ರಾಹುಲ್ ಗಾಂಧಿಯವರಿಗೆ ದೇವರ ಮಂಗಾಳರತಿ ತಟ್ಟೆಗೆ ಯಾವ ರೀತಿ ದಕ್ಷಿಣೆ ಹಾಕಬೇಕು ಎಂಬ ಅರಿವಿಲ್ಲ. ಸಿದ್ದರಾಮಯ್ಯನವರು ಅವರಿಗೆ ಅದನ್ನಾದರೂ ಹೇಳಿ ಕೊಡಬೇಕಲ್ವಾ ಎಂದು ವ್ಯಂಗ್ಯ ವಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಜೆಡಿಎಸ್ ಸ್ವಂತ ಬಲದ ಮೇಲೆ ಅಧಿಕಾರ ರಚಿಸುವುದು ನಿಶ್ಚಿತ. ದೇವೆಗೌಡರು ನೀಡಿದ್ದ ಹೇಳಿಕೆ ಭೇಟಿ ನೀಡಿದ್ದ ಪ್ರಜ್ಞಾವಂತರನ್ನು ವ್ಯಂಗ್ಯ ಮಾಡುವ ರೀತಿಯಲ್ಲಿತ್ತು. ನೀವು ಅದನ್ನು ಸರಿಯಾಗಿ ಅರ್ಥೈಸಿಲ್ಲ ಅಷ್ಟೆ, ಚುನಾವಣಾ ದಿನಾಂಕ ಪ್ರಕಟವಾಗಿದೆ. ಜೆಡಿಎಸ್ ಚುನಾವಣೆ ಎದುರಿಸಲು ಸರ್ವ ಸನ್ನದ್ಧವಾಗಿದೆ. ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿರುವುದು ಒಳ್ಳೆಯದೇ. 113 ಸ್ಥಾನ ಗೆಲ್ಲುವುದಷ್ಟೇ ನನ್ನ ಗುರಿ. ಸಿ- ಫೋರ್ ಸಮೀಕ್ಷೆ ಹಸಿ ಸುಳ್ಳು. ಸಿ ಫೋರ್ ಮಾಲೀಕ ಸಿಎಂ ಸಿದ್ದರಾಮಯ್ಯ ಆಪ್ತ, ಯಾವಾಗಲೂ ಸಿಎಂ ಮನೆಯ ಕಾಂಪೌಂಡ್ ಒಳಗಡೆ ಇರುವವರು, ಅವರು, ಸಮೀಕ್ಷೆಗಳನ್ನೆಲ್ಲಾ ಜನ ನಂಬಲ್ಲ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎನ್ ಆರ್. ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅಬ್ದುಲ್ಲಾ, ಚಾಮರಾಜ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪ್ರೋ.ಕೆ.ಎಸ್.ರಂಗಪ್ಪ , ಸೋಮು, ಎಸ್.ಬಿ.ಎಂ ಮಂಜು ಸೇರಿದಂತೆ ಹಲವು ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News