×
Ad

ಕಳಪೆ ಕಾಗದ ಬಳಸಿ ಅಂಕಪಟ್ಟಿ ತಯಾರಿಕೆ: ಆರೋಪ

Update: 2018-03-27 20:47 IST

ಬೆಂಗಳೂರು, ಮಾ.27: ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಕಳಪೆ ಕಾಗದ ಬಳಕೆ ಮಾಡಿ ಅಂಕಪಟ್ಟಿಗಳನ್ನು ತಯಾರಿಸಲಾಗುತ್ತಿದೆ. ಈ ಕುರಿತು ಸೂಕ್ತ ತನಿಖೆ ಕೈಗೊಳ್ಳಬೇಕು ಎಂದು ಕರ್ನಾಟಕ ಹಿರಿಯ ಪತ್ರಕರ್ತರ ಮಹಾಸಭಾದ ಗೌರವಾಧ್ಯಕ್ಷ ಎಂ.ಎ.ಸುಗಂಧಿ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾಲಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಹಾಗೂ ಇನ್ನಿತರೆ ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಂಕಪಟ್ಟಿಗಳನ್ನು ಬಳಕೆ ಮಾಡಲಾಗುತ್ತದೆ. ಆದರೆ, ಸರಕಾರದಿಂದ ಗುಣಮಟ್ಟದ ಅಂಕಪಟ್ಟಿ ಹೆಸರಿನಲ್ಲಿ ಹಣ ಪಡೆದು, ಕಳಪೆ ಗುಣಮಟ್ಟದ ಕಾಗದ ಬಳಕೆ ಮಾಡಲಾಗುತ್ತಿದೆ. ಇದರಿಂದಾಗಿ ಸರಕಾರಕ್ಕೆ ಕೋಟ್ಯಂತರ ರೂ.ಗಳು ನಷ್ಟವನ್ನುಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಿರುವ ವಿದ್ಯಾರ್ಥಿಗಳು ಪ್ರಮಾಣ ಪತ್ರ ಅಥವಾ ಅಂಕಪಟ್ಟಿ ಪಡೆಯಲು 150 ರಿಂದ 500 ರೂ.ಗಳವರೆಗೆ ಪಾವತಿ ಮಾಡಲಾಗುತ್ತಿದೆ. ಅಲ್ಲದೆ, ಸರಕಾರ ಕೋಟ್ಯಂತರ ರೂ.ಗಳು ಹಣ ನೀಡುತ್ತದೆ. ಆದರೆ, ಅಧಿಕಾರಿಗಳು ಕಳಪೆ ಗುಣಮಟ್ಟದ ಅಂಕಪಟ್ಟಿಗಳನ್ನು ತಯಾರಿಸಿ ವಿದ್ಯಾರ್ಥಿಗಳಿಗೆ ಪೂರೈಕೆ ಮಾಡುತ್ತಿದ್ದಾರೆ. ಈ ಸರ್ಟಿಫಿಕೇಟ್‌ಗಳು ಕೆಲವು ತಿಂಗಳುಗಳ ನಂತರ ಅವುಗಳ ಮೇಲೆ ಮುದ್ರಣ ನಶಿಸಿ ಹೋಗಿ ಮತ್ತೊಂದು ಸರ್ಟಿಫಿಕೇಟ್ ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಅಂಕಪಟ್ಟಿ ದಂಧೆಗೆ ಸಂಬಂಧಿಸಿದಂತೆ ಹಲವು ಬಾರಿ ಉನ್ನತ ಶಿಕ್ಷಣ ಸಚಿವರಿಗೆ, ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೆ, ರಾಜ್ಯದ ಅಂಕಪಟ್ಟಿಗಳನ್ನು ಹಣ ನೀಡಿ ಬೇರೆ ರಾಜ್ಯದಿಂದ ಖರೀದಿ ಮಾಡಲಾಗುತ್ತಿದೆ. ಎನ್‌ಎಫ್‌ಸಿ ಯೋಜನೆ ಮೂಲಕ ಅಂಕಪಟ್ಟಿ, ಕಾನ್ವೊಕೇಷನ್ ಪ್ರಮಾಣಪತ್ರ ಪರಿಶೀಲಿಸಲು ಹಾಗೂ ಮಾಹಿತಿ ಪಡೆಯಲು ವಿದ್ಯಾರ್ಥಿಗಳಿಗೆ ನೀಡುವ ಅಂಕಪಟ್ಟಿಗಳಲ್ಲಿ ಎಲೆಕ್ಟ್ರಾನಿಕ್ ಚಿಪ್ ಅಳವಡಿಸಿ ಸ್ಮಾರ್ಟ್ ಫೋನ್ ಮೂಲಕ ಮಾಹಿತಿ ಪಡೆಯುವ ವಿಧಾನ ಜಾರಿ ಮಾಡಲು ಮುಂದಾಗಿದ್ದು, 10 ರೂ. ಚಿಪ್‌ಗೆ 125 ರೂ.ಗಳನ್ನು ಖರ್ಚು ಮಾಡಲು ಮುಂದಾಗಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News