ಅತಿಯಾದ ನೀರು ಸೇವನೆ ಆರೋಗ್ಯಕ್ಕೆ ಹಾನಿಕಾರಕ: ಡಾ.ಪರಮೇಶ್ವರ ಆರೋವರ
ಬೆಂಗಳೂರು, ಮಾ.27: ವರ್ಷದಲ್ಲಿ ನಿರ್ದಿಷ್ಟ ದಿನಗಳಲ್ಲಿ ಹೊರತುಪಡಿಸಿ ಇನ್ನಿತರೆ ಸಮಯದಲ್ಲಿ ಅತಿಯಾದ ನೀರು ಸೇವನೆ ಮಾಡುವುದು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುತ್ತದೆ ಎಂದು ಆಯುರ್ವೇದ ತಜ್ಞ ವೈದ್ಯ ಡಾ.ಪರಮೇಶ್ವರ ಆರೋವರ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಯಾರಿಕೆ ಸಂದರ್ಭದಲ್ಲಿ ಅತಿ ಹೆಚ್ಚು ನೀರು ಸೇವನೆ ಮಾಡುವುದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಆಯುರ್ವೇದ ಮಾಹಿತಿ ಅನ್ವಯ ಆರೋಗ್ಯವಂತ ಮನುಷ್ಯ ಬೇಸಿಗೆ ದಿನಗಳಲ್ಲಿ ಹೆಚ್ಚು ನೀರು ಸೇವನೆ ಮಾಡಬಹುದಾಗಿದೆ. ಇನ್ನುಳಿದ ಸಂದರ್ಭಗಳಲ್ಲಿ ಕಡಿಮೆ ಪ್ರಮಾಣದ ನೀರನ್ನು ಸೇವನೆ ಮಾಡಬೇಕು ಎಂದು ಸಲಹೆ ನೀಡಿದರು.
ಅತಿಯಾದ ನೀರು ಸೇವನೆ ಮಾಡುವುದರಿಂದ ಪಿತ್ತ ಮತ್ತು ಕಫಕ್ಕೆ ಸಂಬಂಧಿಸಿದಂತ ಸಮಸ್ಯೆಗಳಾದ ಅಜೀರ್ಣ, ವಾಂತಿ, ಮೈಭಾರ, ನೆಗಡಿ, ಶೀತ ಸೇರಿದಂತೆ ಉಸಿರಾಟ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ, ಕಡಿಮೆ ಪ್ರಮಾಣದ ನೀರು ಸೇವನೆಯಿಂದ ಸಮಸ್ಯೆಗಳಿಂದ ದೂರು ಉಳಿಯಬಹುದು ಎಂದು ಅವರು ತಿಳಿಸಿದರು.
ಸರಿಯಾದ ಕ್ರಮವಿಲ್ಲದೆ ನೀರು ಸೇವನೆ ಮಾಡುವುದರಿಂದ ಜೀರ್ಣ ಕ್ರಿಯೆ ಕುಂಠಿತಗೊಳ್ಳುತ್ತದೆ ಎಂದ ಅವರು, ಜಠರದಲ್ಲಿರುವ ಜಟರಾಗ್ನಿ ಪ್ರಮಾಣ ಹೆಚ್ಚು ನೀರು ಸೇವನೆಯಿಂದ ಕುಂಠಿತಗೊಳ್ಳಲಿದೆ. ಇದು ಇನ್ನಿತರೆ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದ ಅವರು, ಪ್ರತಿದಿನ ಆರೋಗ್ಯವಂತ ಮನುಷ್ಯ ಎಲ್ಲ ದ್ರವ ಆಹಾರಗಳನ್ನು ಒಳಗೊಂಡಂತೆ 1 ರಿಂದ 1.5 ಲೀಟರ್ ಮಾತ್ರ ನೀರು ಕುಡಿಯಬೇಕು. ಅದರಲ್ಲಿ ಅರ್ಧದಷ್ಟು ಮೂತ್ರವಿಸರ್ಜನೆ ಮಾಡಬೇಕು ಎಂದು ತಿಳಿಸಿದರು.