ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರ: ಮತ್ತೊಮ್ಮೆ ಅರ್ಜಿ ವಿಚಾರಣೆ ನಡೆಸಲು ಸಿಎಟಿಗೆ ಹೈಕೋರ್ಟ್ ನಿರ್ದೇಶನ
ಬೆಂಗಳೂರು, ಮಾ.27: ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಸಿಎಟಿ ಆದೇಶವನ್ನು ರದ್ದುಪಡಿಸಿದ್ದು, ಮತ್ತೊಮ್ಮೆ ಅರ್ಜಿ ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಿದೆ.
ಮಂಗಳವಾರ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಬಿ.ಎಂ.ಶ್ಯಾಮಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.
ಕೇಂದ್ರಿಯ ಆಡಳಿತಾತ್ಮಕ ನ್ಯಾಯಮಂಡಳಿ(ಸಿಎಟಿ) ನೀಡಿದ್ದ ಆದೇಶವನ್ನು ರದ್ದು ಪಡಿಸಿರುವ ನ್ಯಾಯಪೀಠವು ರೋಹಿಣಿ ಸಿಂಧೂರಿ ಅವರ ಅರ್ಜಿಯ ವಿಚಾರಣೆಯನ್ನು ಪುನಹ ನಡೆಸಬೇಕು ಎಂದು ಸೂಚಿಸಿದೆ.
ಎಪ್ರಿಲ್ 2ರಂದು ರೋಹಿಣಿ ಸಿಂಧೂರಿ ಅವರ ಪರ ವಕೀಲರು ಸಿಎಟಿ ಮುಂದೆ ವಾದ ಮಂಡನೆ ಮಾಡಬೇಕು. ಮುಂದಿನ ಆದೇಶದ ತನಕ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ನ್ಯಾಯಪೀಠವು ನಿರ್ದೇಶನ ನೀಡಿದೆ.
ಮಾರ್ಚ್ 7ರಂದು ರಾಜ್ಯ ಸರಕಾರ ರೋಹಿಣಿ ಸಿಂಧೂರಿ ಸೇರಿ 11 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿತ್ತು. ಮಾರ್ಚ್ 8ರಂದು ರೋಹಿಣಿ ಸಿಂಧೂರಿ ಅವರು ಸಿಎಟಿಯಲ್ಲಿ ವರ್ಗಾವಣೆ ಆದೇಶವನ್ನು ಪ್ರಶ್ನೆ ಮಾಡಿದ್ದರು.
ಸಿಎಟಿ ವರ್ಗಾವಣೆ ತಕರಾರಿಗೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸುವಂತೆ ರೋಹಿಣಿ ಸಿಂಧೂರಿ ಅವರಿಗೆ ಸೂಚಿಸಿತ್ತು. ಸಿಎಟಿ ಆದೇಶವನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಅವರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಅವಧಿಗೂ ಮೊದಲೇ ರಾಜ್ಯ ಸರಕಾರ ತಮ್ಮನ್ನು ವರ್ಗಾವಣೆ ಮಾಡಿದೆ. ಹೀಗಾಗಿ, ವರ್ಗಾವಣೆ ಆದೇಶಕ್ಕೆ ತಡೆ ನೀಡಬೇಕು ಎಂದು ರೋಹಿಣಿ ಸಿಂಧೂರಿ ರಿಟ್ ಅರ್ಜಿಯಲ್ಲಿ ಮನವಿ ಮಾಡಿದ್ದರು.