ಬೆಂಗಳೂರು: ಅಕ್ರಮ ಕಲ್ಲುಗಣಿಗಾರಿಕೆ ಮೇಲೆ ದಾಳಿ; ಇಬ್ಬರ ಬಂಧನ
ಬೆಂಗಳೂರು,ಮಾ.27: ನಗರದ ಹೊರವಲಯದ ಬ್ಯಾಡರಹಳ್ಳಿ ಸುತ್ತಮುತ್ತಲಿನ ಅಕ್ರಮ ಕಲ್ಲುಗಣಿಗಾರಿಕೆ ಮೇಲೆ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ 25 ಲಕ್ಷಕ್ಕೂ ಹೆಚ್ಚು ಮೌಲ್ಯದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ. ವಿದ್ಯಾನಗರದ ಬಾಬು(30) ಹಾಗೂ ತಮಿಳುನಾಡಿನ ಧರ್ಮಪುರಿ ಮೂಲದ ಮುರುಗ(38) ಬಂಧಿತ ಆರೋಪಿಗಳು ಎಂದು ಗುರುತಿಸಿದ್ದು, ಈ ಕೃತ್ಯದಲ್ಲಿ ಪಾಲ್ಗೊಂಡಿರುವ ಇನ್ನೂ ಮೂರು ಆರೋಪಿಗಳಿದ್ದು, ಅವರಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಅಕ್ರಮವಾಗಿ ಸ್ಫೋಟಕಗಳನ್ನು ಬಳಸಿ ಕಲ್ಲುಗಣಿಗಾರಿಕೆ ನಡೆಸಲಾಗುತ್ತಿದ್ದ ಖಚಿತ ಮಾಹಿತಿ ಆಧರಿಸಿ ದೇವನಹಳ್ಳಿಯ ಮುದ್ದುನಾಯಕನಹಳ್ಳಿ ಮತ್ತು ಬ್ಯಾಡರಹಳ್ಳಿ ಸುತ್ತಮುತ್ತಲಿನ ಕ್ರಷರ್‌ಗಳ ಮೇಲೆ ಬೆಳಗ್ಗೆಯೇ ದಾಳಿ ನಡೆಸಿ 6 ಲಕ್ಷ ಬೆಲೆಯ ಸ್ಫೋಟಕಗಳು 18 ಲಕ್ಷ ಮೌಲ್ಯದ ಲೈಲ್ಯಾಂಡ್ ವಾಹನಗಳು ಸೇರಿ 25 ಲಕ್ಷಕ್ಕೂ ಹೆಚ್ಚು ಮೌಲ್ಯದ ಮಾಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಗ್ರಾಮಾಂತರ ಎಸ್ಪಿ ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.
ಸ್ಫೋಟಕಗಳನ್ನ ಬಳಸಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಮಂಜುನಾಥ್ ಕ್ರಷರ್, ಎಸ್. ಕೆ.ಕ್ರಷರ್, ಶ್ರೀರಾಮ್ ಕ್ರಷರ್, ಆಂಜನೇಯ ಕ್ರಷರ್ ಮೇಲೆ ದಾಳಿ ನಡೆಸಿ ಒಂದು ಟಿಪ್ಪರ್, ಕಂಪ್ರೈಸರ್ ಅನ್ನು ವಶಕ್ಕೆ ಪಡೆಯಲಾಗಿದೆ ಈ ಸಂಬಂಧ ವಿಶ್ವನಾಥಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.