ಲಿಂಗಾಯತರಿಗೆ ಟಿಕೆಟ್ ನೀಡಲು ಆಗ್ರಹ: ಕಾಂಗ್ರೆಸ್ ವರಿಷ್ಠರಿಗೆ ಮನವಿ ಸಲ್ಲಿಸಿದ ಟಿಕೆಟ್ ಆಕಾಂಕ್ಷಿಗಳು
ಬೆಂಗಳೂರು, ಮಾ.27: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯ ಮೇಲುಕೋಟೆ ವಿಧಾನಸಭಾ ಕ್ಷೇತ್ರದಿಂದ ಲಿಂಗಾಯತ ಸಮುದಾಯದ ಟಿಕೆಟ್ ಆಕಾಂಕ್ಷಿ ವಕೀಲ ಎಂ.ಗುರುಪ್ರಸಾದ್ ಮತ್ತು ಮಡಿಕೇರಿ ಕ್ಷೇತ್ರದಿಂದ ಜಿಲ್ಲಾ ಪಂಚಾಯತ್ ಸದಸ್ಯೆ ಕುಮುದಾ ಧರ್ಮಪ್ಪಗೆ ಟಿಕೆಟ್ ನೀಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ್ದಾರೆ.
ನಾಯಕರು ತಮ್ಮ ಬೆಂಬಲಿಗರೊಂದಿಗೆ ಮನವಿ ಸಲ್ಲಿಸಿದ ನಂತರ ಮಾತನಾಡಿದ ಅವರು, ಮೈಸೂರು ಭಾಗದ ಮಂಡ್ಯ ಜಿಲ್ಲೆ ಸೇರಿದಂತೆ 49 ವಿಧಾನ ಸಭಾಗಳ ಪೈಕಿ ಈ ಸಾಲಿಗೆ ಲಿಂಗಾಯತ ಸಮುದಾಯಕ್ಕೆ ಗುಂಡ್ಲುಪೇಟೆ ಕ್ಷೇತ್ರದ ಗೀತಾ ಮಹದೇವ ಪ್ರಸಾದ್‌ರನ್ನು ಹೊರತು ಪಡಿಸಿದರೆ ಹಳೆ ಮೈಸೂರು ಭಾಗದಲ್ಲಿ ಯಾರೂ ಲಿಂಗಾಯತ ಶಾಸಕರಿಲ್ಲ. ಈ ಹಿಂದೆ 15-20 ಶಾಸಕರು ವಿಧಾನಸಭೆಗೆ ಆಯ್ಕೆಯಾಗುತ್ತಿದ್ದರು. ಇತ್ತೀಚೆಗೆ ಎಲ್ಲ ರಾಜಕೀಯ ಪಕ್ಷಗಳು ಲಿಂಗಾಯತ ಸಮುದಾಯವನ್ನು ಬಳಸಿಕೊಂಡು ಟಿಕೆಟ್ ನೀಡದೇ ವಂಚಿಸಿವೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ 2.80 ಕೋಟಿ ಜನ ಲಿಂಗಾಯತ ಸಮುದಾಯದ ಮತದಾರರಿದ್ದು, ಈ ಭಾರಿ ಮೇಲುಕೋಟೆ ವಿಧಾನ ಸಭಾ ಕ್ಷೇತ್ರದಿಂದ ಟಿಕೆಟ್ ನೀಡಿ ಸಮುದಾಯದ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕು ಎಂದ ಅವರು, ಮಂಡ್ಯ ಜಿಲ್ಲೆಯಲ್ಲಿ 70 ವರ್ಷಗಳಿಂದ ಒಂದೇ ಕೋಮಿನವರು ಶಾಸಕರುಗಳಾಗಿ ಆಯ್ಕೆಯಾಗುತ್ತ ಬಂದಿದ್ದು, ಈ ಬಾರಿ ಬೇರೆಯವರಿಗೆ ಅವಕಾಶ ನೀಡಬೇಕು ಎಂದು ಕೋರಿದರು.
ನಿಯೋಗದಲ್ಲಿ ಮಡಿಕೇರಿ ಕ್ಷೇತ್ರದ ಆಕಾಂಕ್ಷಿ ಕುಮುದಾ ಧರ್ಮಪ್ಪ, ಮಾಜಿ ಶಾಸಕ ಎಚ್.ಸಿ.ಬಸವರಾಜು, ಲಿಂಗಾಯತ ಸಮುದಾಯದ ಅಧ್ಯಕ್ಷ ಸಿ.ಪಿ.ತಮ್ಮಣ್ಣ, ಪ್ರಭುಸ್ವಾಮಿ, ಬಿ. ಯೋಗೇಶ್, ಎಂ.ಎಸ್.ನಟರಾಜ್, ಎಂ.ಆರ್.ಮಂಜುನಾಥ್, ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪಕ್ಷದ ಬಾವುಟ ನೀಡುವ ಮೂಲಕ ದಿನೇಶ್ ಗುಂಡೂರಾವ್ ಟಿಕೆಟ್ ಕುರಿತು ಪರಿಶೀಲನೆ ನಡೆಸುವುದಾಗಿ ಭರವಸೆ ವ್ಯಕ್ತಪಡಿಸಿದರು.