ಸಿಂಧುಗೆ ಗಾಯದ ಸಮಸ್ಯೆ?

Update: 2018-03-27 18:52 GMT

ಹೊಸದಿಲ್ಲಿ, ಮಾ.27: ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಮಂಗಳವಾರ ಗಾಯದ ಭೀತಿಗೊಳಗಾಗಿದ್ದಾರೆ. ಆದರೆ, ಮುಂದಿನ ತಿಂಗಳು ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಭಾಗವಹಿಸಲು ಇದರಿಂದ ಸಮಸ್ಯೆಯಾಗದು ಎನ್ನಲಾಗಿದೆ.

 ಸಿಂಧು ಹೈದರಾಬಾದ್‌ನಲ್ಲಿರುವ ಗೋಪಿಚಂದ್ ಅಕಾಡಮಿಯಲ್ಲಿ ಭಾರತದ ಮುಖ್ಯ ಕೋಚ್ ಪಿ.ಗೋಪಿಚಂದ್ ಅವರ ಮಾರ್ಗದರ್ಶನದಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಬಲಮಂಡಿಗೆ ಗಾಯವಾಗಿದೆ. ‘‘ಇಂದು ಅಕಾಡಮಿಯಲ್ಲಿ ತರಬೇತಿ ನಡೆಸುತ್ತಿದ್ದಾಗ ಸಿಂಧುಗೆ ಗಾಯವಾಗಿದೆ. ನಾವು ಎಂಆರ್‌ಐ ಸ್ಕಾನಿಂಗ್ ಮಾಡಿಸಿ 100 ಶೇ.ಫಿಟ್ ಇದ್ದಾರೆಂಬುದನ್ನು ದೃಢಪಡಿಸಿಕೊಂಡಿದ್ದೇವೆ. ಸ್ಕಾನಿಂಗ್‌ನಲ್ಲಿ ಮೂಳೆಗೆ ಏನೂ ಆಗಿಲ್ಲವೆಂದು ಗೊತ್ತಾಗಿದೆ. ಇದರಿಂದ ನಮಗೆ ಸಂತೋಷವಾಗಿದೆ. ನಾವು ಯಾವುದೇ ಸಮಸ್ಯೆ ಎದುರಿಸಲು ಬಯಸುವುದಿಲ್ಲ’’ ಎಂದು ಸಿಂಧು ತಂದೆ ಪಿ.ವಿ. ರಮಣ ಹೇಳಿದ್ದಾರೆ.

‘‘ಇಂದು ಸಿಂಧು ವಿಶ್ರಾಂತಿ ಪಡೆಯಲಿದ್ದಾರೆ. ನಾಡಿದ್ದು ಮತ್ತೆ ಅಭ್ಯಾಸ ಆರಂಭಿಸಲಿದ್ದಾರೆ. ನಾಳೆ ಆಕೆ ಮೈದಾನಕ್ಕೆ ತೆರಳಲಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಟೀಮ್ ಇವೆಂಟ್ ಆರಂಭವಾಗಲು ಸಾಕಷ್ಟು ಸಮಯವಿದೆ. ಹಾಗಾಗಿ ಚಿಂತಿಸುವ ಅಗತ್ಯವಿಲ್ಲ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News