ಮಹಾವೀರ ಜಯಂತಿ, ಗುಡ್‌ಫ್ರೈಡೆ ಪ್ರಯುಕ್ತ ಕೆಎಸ್ಸಾರ್ಟಿಸಿ ವತಿಯಿಂದ ವಿಶೇಷ ಸಾರಿಗೆ ವ್ಯವಸ್ಥೆ

Update: 2018-03-28 16:50 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.28: ಮಹಾವೀರ ಜಯಂತಿ ಹಾಗೂ ಗುಡ್‌ಫ್ರೈಡೆ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮಾ.28 ರಿಂದ ಮಾ.31ರವರೆಗೆ ಬೆಂಗಳೂರಿನಿಂದ ರಾಜ್ಯದ ವಿವಿಧ ಭಾಗಗಳಿಗೆ 800 ರಿಂದ 850 ಹೆಚ್ಚುವರಿ ವಾಹನಗಳ ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.

ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರ್ಗಿ, ಬಳ್ಳಾರಿ, ಕೊಪ್ಪಳ, ಯಾದಗೀರ್, ಬೀದರ್, ತಿರುಪತಿ ಮುಂತಾದ ಸ್ಥಳಗಳಿಗೆ ವಿಶೇಷ ಬಸ್ಸುಗಳು ಕಾರ್ಯಾಚರಣೆ ನಡೆಸಲಿವೆ.

ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆ ಕಾರ್ಯಾಚರಣೆ ನಡೆಸಲಿವೆ. ಹಾಗೂ ತಮಿಳುನಾಡು ಮತ್ತು ಆಂಧ್ರಪ್ರದೇಶ/ತೆಲಂಗಾಣ ಮಾರ್ಗಗಳಾದ ಮಧುರೈ, ಕುಂಭಕೋಣಂ, ತಿರುಚಿ, ಚೆನ್ನೈ, ಕೊಯಂಬತ್ತೂರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಸ್ಥಳಗಳಿಗೆ ಹೋಗುವ ಪ್ರತಿಷ್ಠಿತ ಸಾರಿಗೆಗಳನ್ನು ಶಾಂತಿನಗರದಲ್ಲಿನ ಬೆಂಗಳೂರು ಕೇಂದ್ರ ಘಟಕ-4 ಮತ್ತು ಘಟಕ-2ರ ಮುಂಭಾಗದಿಂದ ವಿಶೇಷ ಕಾರ್ಯಾಚರಣೆ ನಡೆಸಲಿವೆ.

ಬೆಂಗಳೂರು ನಗರದ ಶ್ರೀಬಸವೇಶ್ವರ ಬಸ್ ನಿಲ್ದಾಣ, ವಿಜಯನಗರ, ಜಯನಗರ 4ನೇ ಬ್ಲಾಕ್, ಜಾಲಹಳ್ಳಿ ಕ್ರಾಸ್, ನವರಂಗ್(ರಾಜಾಜಿನಗರ), ಮಲ್ಲೇಶ್ವರಂ 18ನೆ ಅಡ್ಡ ರಸ್ತೆ, ಬನಶಂಕರಿ, ಜೀವನ್ ಭೀಮಾನಗರ, ಐಟಿಐ ಗೇಟ್, ಗಂಗಾನಗರ, ಕೆಂಗೇರಿ ಉಪನಗರ, ಮುಂತಾದ ಸ್ಥಳಗಳಿಂದ ಪ್ರಯಾಣಿಕರ ಒತ್ತಡಕ್ಕನುಗುಣವಾಗಿ ಶಿವಮೊಗ್ಗ, ದಾವಣಗೆರೆ, ತಿರುಪತಿ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ಕುಕ್ಕೆಸುಬ್ರಮಣ್ಯ, ಧರ್ಮಸ್ಥಳ ಮುಂತಾದ ಮಾರ್ಗಗಳಿಗೆ ಹೆಚ್ಚುವರಿ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ಮುಂಗಡ ಕಾಯ್ದಿರಿಸಲಾಗಿರುವ ಟಿಕೇಟುಗಳ ಮೇಲೆ ನಮೂದಿಸಲಾಗಿರುವ ಬಸ್ ನಿಲ್ದಾಣ ಹಾಗೂ ಪಿಕ್‌ಅಪ್ ಪಾಯಿಂಟ್‌ನ ಹೆಸರನ್ನು ಗಮನಿಸುವಂತೆ ಕೋರಲಾಗಿದೆ.

ಇ-ಟಿಕೇಟ್ ಬುಕ್ಕಿಂಗ್‌ನ್ನು www.ksrtc.in ವೆಬ್ ಸೈಟ್ ಮುಖಾಂತರ ಮಾಡಬಹುದಾಗಿದೆ. ಪ್ರಯಾಣಿಕರು ಬೆಂಗಳೂರು ನಗರದಲ್ಲಿರುವ 104, ರಾಜ್ಯದ ಇತರೆ ಸ್ಥಳಗಳಲ್ಲಿರುವ 428 ಹಾಗೂ ಅಂತರರಾಜ್ಯದಲ್ಲಿ 179 ಗಣಕೀಕೃತ ಬುಕಿಂಗ್ ಕೌಂಟರ್‌ಗಳ ಮೂಲಕ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಬಹುದಾಗಿದೆ.

ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೇಟು ಕಾಯ್ದಿರಿಸಿದಲ್ಲಿ ಶೇ.5 ರಷ್ಟು ರಿಯಾಯಿತಿ ನೀಡಲಾಗುವುದು ಹಾಗೂ ಹೋಗುವ ಬರುವ ಪ್ರಯಾಣದ ಟಿಕೇಟ್‌ನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇ.10ರಷ್ಟು ರಿಯಾಯಿತಿ ನೀಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News