ಮತದಾನ ಜಾಗೃತಿಯ ರಾಯಭಾರಿಗಳಂತೆ ಕರ್ತವ್ಯ ನಿರ್ವಹಿಸಿ: ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್

Update: 2018-03-28 17:18 GMT

ಬೆಂಗಳೂರು, ಮಾ. 28: ಸ್ಕೌಟ್ಸ್ ಮತ್ತು ಗೈಡ್ಸ್ ಕೆಡೆಟ್ಸ್‌ಗಳು, ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕರು ಮತ್ತು ರೇಂಜರ್ಸ್‌ಗಳು ತಮ್ಮ ವ್ಯಾಪ್ತಿಯಲ್ಲಿ ಮತದಾನ ಜಾಗೃತಿಯ ರಾಯಭಾರಿಗಳಂತೆ ಕೆಲಸ ಮಾಡಬೇಕು ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಕರೆ ನೀಡಿದ್ದಾರೆ.

ಬುಧವಾರ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಬಿಬಿಎಂಪಿ ವತಿಯಿಂದ ಆಯೋಜಿಸಿದ್ದ ವಿಧಾನಸಭಾ ಚುನಾವಣೆ ಪ್ರಯುಕ್ತ ಸ್ಕೌಟ್ಸ್ ಮತ್ತು ಗೈಡ್ಸ್ ಕೆಡೆಟ್ಸ್, ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕರು ಮತ್ತು ರೇಂಜರ್ಸ್‌ಗಳಿಗೆ ಮತದಾನ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ನಗರದ ಮಾಲ್‌ಗಳು, ಮಾರುಕಟ್ಟೆ, ಕಾಲೇಜು ಮತ್ತು ಜನಸಂದಣಿ ಪ್ರದೇಶಗಳಲ್ಲಿ ಮತದಾನದ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಿ, ಈ ಬಾರಿಯ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸಲಾಗುವುದು. ಬೆಂಗಳೂರು ವ್ಯಾಪ್ತಿಯಲ್ಲಿ 8,200 ಮತಗಟ್ಟೆ ಕೇಂದ್ರಗಳಿದ್ದು, ಎಲ್ಲ ಮತದಾರರ ಬಳಿಗೆ ಚುನಾವಣಾ ಅಧಿಕಾರಿಗಳು ನೇರವಾಗಿ ಭೇಟಿಯಾಗಲು ಸಾಧ್ಯವಿಲ್ಲ. ಈ ಬಗ್ಗೆ ತಿಳುವಳಿಕೆ ಮೂಡಿಸಲು ಕಾಲೇಜು ವಿದ್ಯಾರ್ಥಿಗಳು ಮತ್ತು ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕೆಡೆಟ್ಸ್‌ಗಳನ್ನು ನಿಯೋಜಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಕೆಡೆಟ್ಸ್‌ಗಳು ತಮ್ಮ ಸುತ್ತಲಿನ ಪ್ರದೇಶದ ಮತದಾರರಲ್ಲಿ ಮತದಾನದ ಮಹತ್ವದ ಬಗ್ಗೆ ಮತ್ತು ಇವಿಎಂ ಬಳಕೆಯ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು. ಪ್ರತಿಯೊಬ್ಬ ಮತದಾರರನ್ನು ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಲು ಪ್ರೇರೇಪಿಸಬೇಕು ಮತ್ತು ಸಹಕರಿಸಬೇಕು ಎಂದು ಮನವಿ ಮಾಡಿದರು. ಮತದಾನಕ್ಕೂ ಮುನ್ನ ಪ್ರತಿಯೊಬ್ಬರು ಮತದಾರರ ಪಟ್ಟಿ ಪರಿಶೀಲಿಸಿ, ಪಟ್ಟಿಯಲ್ಲಿ ತಮ್ಮ ಹೆಸರು ಇರದಿದ್ದರೆ ಆನ್‌ಲೈನ್ ಇಲ್ಲವೇ ವಾರ್ಡ್ ಕಂದಾಯ ಅಧಿಕಾರಿಗಳ ಮುಖಾಂತರ ತಮ್ಮ ಹೆಸರು ಸೇರ್ಪಡೆಗೆ ಎ.14 ರವರೆಗೆ ಅವಕಾಶವಿದೆ. ಇವಿಎಂ ಬಳಕೆ ಬಗ್ಗೆ ಸಾಕಷ್ಟು ಭಿನ್ನಾಭಿಪ್ರಾಯಗಳು ಕೇಳಿಬರುತ್ತಿದ್ದು, ಅಧಿಕೃತ ಮತದಾನ ಆರಂಭಕ್ಕೂ ಮುನ್ನ ಸ್ಪರ್ಧಿಸಿದ ಅಭ್ಯರ್ಥಿಗಳ ವಕ್ತಾರರ ಸಮ್ಮುಖದಲ್ಲಿ 50ಕ್ಕೂ ಹೆಚ್ಚು ಅಣಕು ಮತದಾನ ನಡೆಸಲಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮತದಾನದ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ನಂತರ ಇವಿಎಂ ಬಳಕೆಯ ಕುರಿತು ಪ್ರಾಯೋಗಿಕ ಮಾಹಿತಿ ನೀಡಲಾಯಿತು. ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಆನಂದ, ನೋಡಲ್ ಅಧಿಕಾರಿ ಎಸ್.ಜಿ. ರವೀಂದ್ರ, ಎಂ.ಎ. ಚಲ್ಲಯ್ಯ, ಬಸವರಾಜ, ಶಿವಣ್ಣ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News