ಚುನಾವಣಾ ನೀತಿಸಂಹಿತೆ ಜಾರಿ: ಖಾಸಗಿ ಕಾರು ಬಳಸಿದ ಬಿಬಿಎಂಪಿ ಮೇಯರ್

Update: 2018-03-28 17:20 GMT

ಬೆಂಗಳೂರು, ಮಾ. 28: ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಬಿಬಿಎಂಪಿ ಮೇಯರ್, ಉಪ ಮೇಯರ್, ಆಡಳಿತ, ವಿರೋಧ ಪಕ್ಷದ ನಾಯಕರು, ಮತ್ತು 12 ಸ್ಥಾಯಿ ಸಮಿತಿಗಳ ಅಧ್ಯಕ್ಷರಿಗೆ ನೀಡಿದ್ದ ವಾಹನಗಳನ್ನು ಚುನಾವಣಾ ಆಯೋಗ ವಾಪಸ್ಸು ಪಡೆದುಕೊಂಡಿದೆ.

ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಈ ಸಂಬಂಧ ಆದೇಶ ಹೊರಡಿಸಿದ್ದಾರೆ. ತಮಗೆ ಒದಗಿಸಿದ್ದ ಸರಕಾರಿ ಕಾರುಗಳ ಸೇವೆಯನ್ನು ವಾಪಸ್ಸು ಪಡೆಯುತ್ತಿದ್ದಂತೆ ಮೇಯರ್ ಸೇರಿದಂತೆ ಇತರರು ಖಾಸಗಿ ಕಾರುಗಳನ್ನು ಬಳಸಲಾರಂಭಿಸಿದ್ದಾರೆ. ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವಾಹನ ಸೇವೆಯನ್ನು ನೀಡಲಾಗುತ್ತದೆ.

ಮೇಯರ್ ಸೇರಿದಂತೆ ಸ್ಥಾಯಿಸಮಿತಿ ಅಧ್ಯಕ್ಷರಿಗಾಗಿ ನೇಮಿಸಿದ್ದ ಸರಕಾರಿ ಸಿಬ್ಬಂದಿಗಳನ್ನು ಚುನಾವಣಾ ಕರ್ತವ್ಯಗಳಿಗೆ ನಿಯೋಜಿಸಲಾಗಿದೆ. ಹೀಗಾಗಿ, ಈ ಸಿಬ್ಬಂದಿಗಳು ಚುನಾವಣಾ ಕರ್ತವ್ಯವನ್ನು ಹೊರತುಪಡಿಸಿ ಮತ್ತೆ ಯಾವುದೇ ಕೆಲಸವನ್ನು ಮಾಡುವಂತಿಲ್ಲ ಎನ್ನಲಾಗಿದೆ.

ಬಿಬಿಎಂಪಿ ಮಾಸಿಕ ಸಭೆಯನ್ನು ನಡೆಸಲು ಚುನಾವಣಾ ಆಯೋಗದ ಅನುಮತಿಯನ್ನು ಪಡೆಯಬೇಕು. ಅಲ್ಲದೇ, ಮೇಯರ್, ಉಪ ಮೇಯರ್, ಆಡಳಿತ ಮತ್ತು ಪ್ರತಿ ಪಕ್ಷದ ನಾಯಕರು, ಸ್ಥಾಯಿ ಸಮಿತಿಗಳ ಅಧ್ಯಕ್ಷರು ತಮ್ಮ ಕಚೇರಿಗೆ ಬಂದರೂ ಯಾವುದೇ ಕಡತಗಳನ್ನು ಅಥವಾ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಂತಿಲ್ಲ. ಹಾಗೂ ಕಚೇರಿಗಳಲ್ಲಿ ದೂರವಾಣಿ ಸೇವೆಯನ್ನು ಬಳಸುವಂತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News