ದಾಳಿ ನೆಪದಲ್ಲಿ ಪೊಲೀಸ್ ಪೇದೆಗಳಿಂದ ಲೂಟಿ ಆರೋಪ: ಇಬ್ಬರ ಬಂಧನ

Update: 2018-03-28 17:23 GMT

ಬೆಂಗಳೂರು, ಮಾ.28: ಸಾರ್ವಜನಿಕರನ್ನು ರಕ್ಷಿಸಬೇಕಾದ ಪೊಲೀಸ್ ಪೇದೆಗಳೆ ಬ್ಯೂಟಿಪಾರ್ಲರ್ ಮೇಲೆ ದಾಳಿ ನಡೆಸುವ ನೆಪವೊಡ್ಡಿ ಹಣ ಲೂಟಿ ಮಾಡಿರುವ ಘಟನೆ ಇಲ್ಲಿನ ಬಾಣಸವಾಡಿಯಲ್ಲಿ ನಡೆದಿದೆ ಎಂದು ಆರೋಪಿಸಲಾಗಿದೆ.

ಹೆಣ್ಣೂರು ಪೊಲೀಸ್ ಠಾಣೆಯ ಪೇದೆಗಳಾದ ವಿಠಲ್, ಫಾರೂಖ್ ಎಂಬುವವರು ಲೂಟಿ ಮಾಡಿದ್ದು, ಈ ಇಬ್ಬರನ್ನೂ ಬಾಣಸವಾಡಿ ಪೊಲೀಸರು ಬಂಧಿಸಿ, ಸುಲಿಗೆ ಮಾಡಿದ್ದ 28 ಸಾವಿರ ಹಣ ಮತ್ತು 2 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ದಾಳಿ ಮಾಡುವ ನೆಪದಲ್ಲಿ ಬ್ಯೂಟಿ ಪಾರ್ಲರ್‌ಗೆ ಹೋದ ಆರೋಪಿಗಳು ಅಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರ ಬಳಿ ಹಣಕ್ಕೆ ಬೇಡಿಕೆಯಿಟ್ಟಿದ್ದರು. ಆದರೆ, ಅವರು ಹಣ ನೀಡಲು ನಿರಾಕರಿಸಿದ ಸಂದರ್ಭದಲ್ಲಿ ಅವರ ಮೇಲೆ ಹಲ್ಲೆ ನಡೆಸಿ 28 ಸಾವಿರ ರೂ. ನಗದು ಮತ್ತು 2 ಮೊಬೈಲ್‌ಗಳನ್ನು ದೋಚಿದ್ದೂ ಅಲ್ಲದೆ, ಸಾಕ್ಷಿ ನಾಶಪಡಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.

ಘಟನೆ ನಂತರ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಬಾಣಸವಾಡಿ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಎಸಿಪಿ ಮಹದೇವಪ್ಪ ನೇತೃತ್ವದ ತಂಡ ಆರೋಪಿಗಳನ್ನು ಶೋಧ ಮಾಡಿ ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News