100 ಕ್ಷೇತ್ರಗಳಲ್ಲಿ ಟಿಕೆಟ್ ನೀಡಲು ಲಿಂಗಾಯತ ಬ್ರಿಗೇಡ್ ಆಗ್ರಹ

Update: 2018-03-28 18:04 GMT

ಬೆಂಗಳೂರು, ಮಾ.28: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಲಿಂಗಾಯತ ಸಮುದಾಯಕ್ಕೆ ಎಲ್ಲ ರಾಜಕೀಯ ಪಕ್ಷಗಳು ತಲಾ ಕನಿಷ್ಟ 100 ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ವೀರಶೈವ ಲಿಂಗಾಯತ ಯುವ ಬ್ರಿಗೇಡ್ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ರಿಗೇಡ್‌ನ ರಾಜ್ಯಾಧ್ಯಕ್ಷ ಬಿ.ಆರ್.ಮಹೇಶ್, ರಾಜಕೀಯದಲ್ಲಿ ವೀರಶೈವ-ಲಿಂಗಾಯತ ಪ್ರಾತಿನಿಧ್ಯ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ತಲಾ 100 ಲಿಂಗಾಯತ ಸಮುದಾಯ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಎಂದು ಹೇಳಿದರು.

ಲಿಂಗಾಯತ ಸಮುದಾಯವು ಬಹಳ ಹಿಂದಿನಿಂದಲೂ ಕರ್ನಾಟಕದ ಸರ್ವಾಂಗೀಣ ವಿಕಾಸಕ್ಕಾಗಿ ಶ್ರಮಿಸುತ್ತಾ ಬಂದಿದೆ. ಬಹುದೊಡ್ಡ ಸಮಾಜವಾದ ವೀರಶೈವ-ಲಿಂಗಾಯತ ಸಮುದಾಯದ ಪ್ರಾತಿನಿಧ್ಯ ಕರ್ನಾಟಕ ವಿಧಾನಸಭಾ ಮತ್ತು ವಿಧಾನಪರಿಷತ್‌ನಲ್ಲಿ ಗಣನೀಯವಾಗಿ ಮತ್ತು ಶೋಚನೀಯವಾಗಿ ಕಡಿಮೆಯಾಗುತ್ತಾ ಬಂದಿರುವುದು ಸಮಾಜದ ಯುವಕರಲ್ಲಿ ಮತ್ತು ಹದಿಹರೆಯದವರಲ್ಲಿ ಅಸಮಾಧಾನ ಉಂಟು ಮಾಡಿದೆ. ಈ ಹಿಂದೆ ರಾಜ್ಯಾದ್ಯಂತ 90 ಶಾಸಕರು ಲಿಂಗಾಯತ ಸಮುದಾಯವರು ಚುನಾಯಿತರಾಗುತ್ತಿದ್ದರು. ಆದರೆ, ಇದೀಗ ಆ ಪ್ರಮಾಣ ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಲಿಂಗಾಯತ ಸಮುದಾಯಕ್ಕೆ ಎಲ್ಲ ಪಕ್ಷಗಳು ಸೇರಿದಂತೆ ಸರಿಯಾದ ಪ್ರಾತಿನಿಧ್ಯ ನೀಡದೇ ಸಮುದಾಯಕ್ಕೆ ಅನ್ಯಾಯ ಮಾಡಲಾಗುತ್ತಿದೆ. ಹೀಗಾಗಿ, ಮುಂದಿನ ಚುನಾವಣೆಯಲ್ಲಿ ಎಲ್ಲ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳು ಲಿಂಗಾಯತ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಬೇಕು. ಒಂದು ವೇಳೆ ರಾಜಕೀಯ ಪಕ್ಷಗಳನ್ನು ನಮ್ಮ ಬೇಡಿಕೆಯನ್ನು ಕೀಳಾಗಿ ಪರಿಗಣಿಸಿ, ಟಿಕೆಟ್ ನೀಡುವಲ್ಲಿ ಇದುವರೆಗೂ ನಡೆದಿರುವ ಅನ್ಯಾಯವನ್ನು ಸರಿಪಡಿಸದಿದ್ದಲ್ಲಿ, ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News