×
Ad

ಬೆಂಗಳೂರು: ಗಾಳಿಯಲ್ಲಿ ಗುಂಡು; ರೌಡಿಶೀಟರ್‌ಗೆ ಕಾಲಿಗೆ ಗಾಯ

Update: 2018-03-28 23:35 IST

ಬೆಂಗಳೂರು, ಮಾ.28: ಅಪರಾಧ ಕೃತ್ಯಗಳಲ್ಲಿಭಾಗಿಯಾಗಿ ತಪ್ಪಿಸಿಕೊಂಡಿದ್ದ ರೌಡಿ ಶೀಟರ್‌ನನ್ನು ಹಿಡಿಯಲು ಮುಂದಾದ ಪೊಲೀಸರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗುವ ಸಂದರ್ಭದಲ್ಲಿ ಇನ್‌ಸ್ಪೆಕ್ಟರ್ ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ನಗರದಲ್ಲಿಂದು ನಡೆದಿದೆ.

ಈ ಸಂದರ್ಭದಲ್ಲಿ ರೌಡಿ ಶೀಟರ್ ರೂಪೇಶ್ ಅಲಿಯಾಸ್ ನಿರ್ಮಲ್‌ನ ಎಡಗಾಲಿಗೆ ಗುಂಡೇಟು ತಗುಲಿದ್ದು, ಗಾಯಗೊಂಡಿದ್ದಾರೆ. ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಲ್ಲದೆ, ಮಾರಾಕಾಸ್ತ್ರಗಳಿಂದ ಗಾಯಗೊಂಡಿರುವ ಪೊಲೀಸ್ ಕಾನ್‌ಸ್ಟೇಬಲ್ ಅಬ್ದುಲ್ ರಿಜಮನ್ ಮತ್ತು ಕುಮಾರ್ ಎಂಬುವವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ವಿವರ: ಹಲವು ಅಪರಾಧಗಳಲ್ಲಿ ಭಾಗಿಯಾಗಿರುವ ರೌಡಿ ಶೀಟರ್ ರೂಪೇಶ್ ಕಳೆದ ಮೂರೂವರೆ ವರ್ಷಗಳಿಂದ ತಲೆಮರೆಸಿಕೊಂಡಿದ್ದು, ನ್ಯಾಯಾಲಯ ದಿಂದ ವಾರೆಂಟ್ ಪಡೆದುಕೊಂಡಿದ್ದ. ಹೀಗಾಗಿ, ಬೆಳಗ್ಗೆ ಇಲ್ಲಿನ ಕಾಟನ್‌ಪೇಟೆ ಬಳಿಯ ಲಿಂಗಾಯತ ಭವನದ ಬಳಿಯಿರುವ ಬಗ್ಗೆ ಮಾಹಿತಿ ಪಡೆದ ಚಾಮರಾಜಪೇಟೆ ಮತ್ತು ಕಾಟನ್‌ಪೇಟೆಯ ಪೊಲೀಸರು ಆತನನ್ನು ಹಿಡಿಯಲು ಕಾರ್ಯಾಚರಣೆ ಆರಂಭಿಸಿದರು. ಪೊಲೀಸರನ್ನು ಕಂಡು ಆತ ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸುವ ವೇಳೆ ಶರಣಾಗುವಂತೆ ಪೊಲೀಸರು ಸೂಚಿಸಿದ್ದಾರೆ.

ಈ ಸಂದರ್ಭದಲ್ಲಿ ಆತನನ್ನು ಬೆನ್ನಟ್ಟಿ ಅಬ್ದುಲ್ ಮತ್ತು ಕುಮಾರ್ ಹಿಡಿಯಲು ಮುಂದಾದಾಗ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ. ಕಾಟನ್‌ಪೇಟೆಯ ಇನ್‌ಸ್ಪೆಕ್ಟರ್ ಕುಮಾರಸ್ವಾಮಿ ತಮ್ಮ ಸಿಬ್ಬಂದಿಗಳ ರಕ್ಷಣೆಗಾಗಿ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದಾಗ ಮತ್ತೊಬ್ಬ ರೌಡಿ ನಿಶಾಂತ್ ಕಾಲಿಗೆ ಒಂದು ಗುಂಡು ತಗುಲಿ ಕುಸಿದು ಬಿದ್ದಿದ್ದಾನೆ. ಮತ್ತೊಬ್ಬ ರೌಡಿ ಶೀಟರ್ ಅತುಷ್‌ನನ್ನು ಕೊಲೆ ಮಾಡಲು ರೌಡಿ ನಿಶಾಂತ್ ಇಲ್ಲಿಗೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News