ಮಾರ್ಚ್ 31ರಂದು ರಾತ್ರಿ 8 ಗಂಟೆಯವರೆಗೆ ತೆರೆದಿರಲಿವೆ ಬ್ಯಾಂಕ್ ಗಳು

Update: 2018-03-29 11:03 GMT

ಹೊಸದಿಲ್ಲಿ, ಮಾ.29: ತೆರಿಗೆ ಸಹಿತ ಸರಕಾರಿ ಪಾವತಿಗಳನ್ನು ಪಡೆಯುವ ಎಲ್ಲಾ ಬ್ಯಾಂಕುಗಳು ಮಾರ್ಚ್ 31ರಂದು ರಾತ್ರಿ 8 ಗಂಟೆ ತನಕ ಗ್ರಾಹಕರಿಗೆ ಸೇವೆಯೊದಗಿಸಬೇಕೆಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆದೇಶಿಸಿದೆ. ಅಂತೆಯೇ ಆರ್ ಟಿಜಿಎಸ್ ಹಾಗೂ ನೆಫ್ಟ್ ಸೇರಿದಂತೆ ಇಲೆಕ್ಟ್ರಾನಿಕ್ ವ್ಯವಹಾರಗಳೂ ಸರಕಾರಿ ಪಾವತಿಗಳಿಗಾಗಿ ಮಾರ್ಚ್ 31ರಂದು ಮಧ್ಯರಾತ್ರಿ ತನಕ ಕಾರ್ಯಾಚರಿಸಲಿವೆ.

ಆರ್ಥಿಕ ವರ್ಷ 2017-18ಗಾಗಿರುವ ಬ್ಯಾಂಕುಗಳಿಗೆ ಸಂಬಂಧಿಸಿದ ಎಲ್ಲಾ ಸರಕಾರಿ ವ್ಯವಹಾರಗಳೂ ಅದೇ  ವಿತ್ತ ವರ್ಷದ ಲೆಕ್ಕಕ್ಕೆ ಸೇರಬೇಕು ಎಂದು ಆರ್ ಬಿಐ ಸುತ್ತೋಲೆ ತಿಳಿಸಿದೆ. ಇದಕ್ಕಾಗಿ ವಿಶೇಷ ಏರ್ಪಾಟುಗಳನ್ನು ಮಾಡುವಂತೆ ಆರ್ ಬಿಐ ಎಲ್ಲಾ ಏಜನ್ಸಿ ಬ್ಯಾಂಕುಗಳಿಗೆ ತಿಳಿಸಿದೆ.

ಪರಿಷ್ಕೃತ ಮತ್ತು ತಡವಾದ ಆದಾಯ ತೆರಿಗೆ ರಿಟರ್ನ್ಸ್ ಅನ್ನು ಮಾರ್ಚ್ 31ರವರೆಗೆ ಸಲ್ಲಿಸುವವರಿಗೆ ಇದು ಅನುಕೂಲಕರವಾಗಲಿದೆ. ಆದಾಯ ತೆರಿಗೆ ಕಚೇರಿಗಳು ಹಾಗೂ ಆಯ್ಕರ್ ಸೇವಾ ಕೇಂದ್ರಗಳಿಗೂ ಮಾರ್ಚ್ 29ರಿಂದ 31ರ ತನಕ ರಜೆಯಿದ್ದರೂ ಅವುಗಳು ಆ ದಿನಗಳಂದು ಕಾರ್ಯಾಚರಿಸಿ ತೆರಿಗೆ ಪಾವತಿದಾರರಿಗೆ ಅನುಕೂಲ ಕಲ್ಪಿಸುವಂತೆ ಹೇಳಲಾಗಿದೆ.

2016-17 ಹಾಗೂ 2017-18 ವರ್ಷಗಳ ಐಟಿ ರಿಟರ್ನ್ಸ್ ಅನ್ನು ಸಲ್ಲಿಸಲು ಮಾರ್ಚ್ 31, 2018 ಕೊನೆಯ ದಿನಾಂಕವಾಗಿರುವುದರಿಂದ ಮೇಲಿನ ಕ್ರಮ ಕೈಗೊಳ್ಳಲಾಗಿದೆ. ಇಂದು ಮಾರ್ಚ್ 29 ಮಹಾವೀರ್ ಜಯಂತಿ ಪ್ರಯುಕ್ತ ರಜೆಯಾಗಿದ್ದರೆ ಮಾರ್ಚ್ 30 ಗುಡ್ ಫ್ರೈಡೆ ಆಗಿದೆ.  ಈ ವಿತ್ತ ವರ್ಷದ ಕೊನೆಯ ದಿನವಾದ ಮಾರ್ಚ್ 31  ಶನಿವಾರವಾಗಿದೆ. ಬ್ಯಾಂಕುಗಳು ಮಾರ್ಚ್ 29 ಹಾಗೂ 30ರಂದು ಕಾರ್ಯಾಚರಿಸುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News