ಪರಿಶ್ರಮದಿಂದ ಮಾತ್ರ ಮಹಾಕಾವ್ಯ ರಚನೆ ಸಾಧ್ಯ: ಡಾ.ಚಂದ್ರಶೇಖರ ಪಾಟೀಲ್

Update: 2018-03-29 12:38 GMT

ಬೆಂಗಳೂರು, ಮಾ.29: ಮಹಾಕಾವ್ಯಗಳಲ್ಲಿ ಬರುವ ಪಾತ್ರ, ಸಂಘರ್ಷ, ಸಂಖ್ಯೆ, ಕಾಲಘಟ್ಟ, ಸಾಹಿತ್ಯ ಅಪರಿಮಿತ ಆಗಿರುವುದರಿಂದ ಅದನ್ನು ಸುಲಭವಾಗಿ ರಚಿಸಲು ಸಾಧ್ಯವಿಲ್ಲ ಎಂದು ಹಿರಿಯ ಸಾಹಿತಿ ಡಾ. ಚಂದ್ರಶೇಖರ ಪಾಟೀಲ್ ಹೇಳಿದ್ದಾರೆ.

ಗುರುವಾರ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಕುವೆಂಪು ಕಲಾನಿಕೇತನ ಆಯೋಜಿಸಿದ್ದ ಕುವೆಂಪು ಅವರ 114ನೆ ಜಯಂತಿ ಅಂಗವಾಗಿ ಸಾಹಿತಿ ಡಾ.ಲತಾ ರಾಜಶೇಖರ್ ಅವರಿಗೆ ಅಭಿನಂದನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಹಾಕಾವ್ಯಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಮಹಾಕಾವ್ಯ ಯಾವ ಕಾಲಘಟ್ಟದಲ್ಲಿ ರಚನೆಯಾಗಿರುತ್ತದೆಯೋ ಆಗಿನ ಇತಿಹಾಸ, ಸಾಹಿತ್ಯ, ಆಯಾಮಗಳಿಗೆ ಅಕ್ಷರ ರೂಪ ಕೊಡಲಾಗುತ್ತದೆ. ಕಾವ್ಯದ ರಚನೆಯಿಂದ ಪ್ರಯೋಜನೆಗಳೇನು, ಏನನ್ನು ಹೇಳಲು ಹೊರಟಿದ್ದೀವಿ ಎಂಬ ಹಲವಾರು ಅಂಶ ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸತತ 20 ವರ್ಷ ಶ್ರಮವಹಿಸಿದ ಡಾ. ಲತಾ ರಾಜಶೇಖರ್ ಅವರು ಸಾಹಿತ್ಯ ಲೋಕಕ್ಕೆ ಐದು ಮಹಾಕಾವ್ಯ ನೀಡಿರುವುದು ಅದ್ಭುತ ಎಂದು ತಿಳಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕವಯತ್ರಿ ಡಾ. ಲತಾ ರಾಜಶೇಖರ್, ಕೇವಲ ಭಾವಗೀತೆ, ಕವನ, ಲೇಖನ ಬರೆಯುತ್ತಿದ್ದ ವೇಳೆ ಪತಿ ಡಾ. ಎಚ್.ಬಿ. ರಾಜಶೇಖರ್ ಅವರು ವಿವೇಕಾನಂದ, ಶಂಕರಾಚಾರ್ಯರಂತಹ ಮಹನೀಯರನ್ನು ನನ್ನಲ್ಲಿ ಸ್ಫೂರ್ತಿಯಾಗಿ ತುಂಬಿ ಕಾವ್ಯಗಳ ರಚನೆಗೆ ಒತ್ತಾಯಿಸಿ ಸದಾ ಬೆನ್ನೆಲುಬಾಗಿ ನಿಂತರು. ಜತೆಗೆ ಹಿರಿಯ ಸಾಹಿತಿ ಡಾ. ಚಂಪಾ, ವ.ಚ.ಚನ್ನೇಗೌಡ, ಮನು ಬಳಿಗಾರ್ ಸೇರಿದಂತೆ ಅನೇಕ ಹಿರಿಯ ಸಾಹಿತಿಗಳು ನನಗೆ ಪ್ರೋತ್ಸಾಹಿಸಿದ್ದರಿಂದ ಐದು ಮಹಾಕಾವ್ಯಗಳ ರಚನೆ ಸಾಧ್ಯವಾಯಿತು. ಸದ್ಯ ಇನ್ನೆರಡು ಮಹಾಕಾವ್ಯಗಳು ರಚನೆಯ ಹಂತದಲ್ಲಿವೆ ಎಂದರು.

ಈ ವೇಳೆ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ವ.ಚ.ಚನ್ನೇಗೌಡ, ಪರಿಷತ್ತಿನ ಬೆಂಗಳೂರು ಜಿಲ್ಲಾ ಮಾಜಿ ಅಧ್ಯಕ್ಷ ಸಿ.ಕೆ.ರಾಮೇಗೌಡ, ಕುವೆಂಪು ಕಲಾನಿಕೇತನ ಅಧ್ಯಕ್ಷ ಡಿ. ಪ್ರಕಾಶ್, ಸಮಾಜ ಸೇವಕ ರಾಜಣ್ಣ, ಡಾ. ಎಚ್.ಬಿ.ರಾಜಶೇಖರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News