ಚುನಾವಣಾ ಅಖಾಡಕ್ಕೆ ಇಳಿಯುತ್ತಿರುವ ಸ್ವಾಮೀಜಿಗಳು: ಜೈ ಭಾರತ್ ಜನಸೇನಾ ಪಕ್ಷ ಸ್ಥಾಪನೆ
ಬೆಂಗಳೂರು, ಮಾ.29: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮಠಾಧೀಶರ ನೇತೃತ್ವದ ಜೈ ಭಾರತ್ ಜನಸೇನಾ ಪಕ್ಷ ಕಣಕ್ಕಿಳಿಯಲು ಸಜ್ಜಾಗಿದೆ. ಆಂಧ್ರಪ್ರದೇಶ ಮೂಲದ ಸೇವಕ ಜ್ಞಾನಪ್ರಕಾಶಾನಂದ ಈ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಮೀಪದ ಪಾಲನಹಳ್ಳಿ ಮಠದ ಗೌರವಾಧ್ಯಕ್ಷರಾಗಿದ್ದಾರೆ.
ಚುನಾವಣಾ ಆಯೋಗವು ಜೈ ಭಾರತ ಜನಸೇನಾ ಪಕ್ಷಕ್ಕೆ ಗ್ಯಾಸ್ ಸ್ಟವ್‌ನ ಗುರುತು ನೀಡಿದೆ. ರಾಜ್ಯದ 224 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿರುವ ಜೈ ಭಾರತ್ ಜನಸೇನಾ ಪಕ್ಷವು, ಯಾವುದೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳದಿರಲು ನಿರ್ಧರಿಸಿದೆ.
ಪಕ್ಷದ ಧ್ಯೆಯೋದ್ದೇಶಗಳ ಕುರಿತು ಜ್ಞಾನಪ್ರಕಾಶಾನಂದ ಸ್ವಾಮಿ ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಕರೆದಿರುವ ಪತ್ರಿಕಾಗೋಷ್ಠಿಯಲ್ಲಿ ಬಹಿರಂಗಪಡಿಸಲಿದ್ದಾರೆ. ನಿರ್ಗತಿಕರ, ಶೋಷಿತರ, ಅವಕಾಶ ವಂಚಿತರ ಪರ ಪಕ್ಷ ಕೆಲಸ ಮಾಡಲಿದೆ ಎಂದು ಸುಮಾರು 10 ಪಿಎಚ್‌ಡಿ ಪದವಿಗಳನ್ನು ಪಡೆದಿರುವ ಜ್ಞಾನಪ್ರಕಾಶಾನಂದ ಸ್ವಾಮಿ ತಮ್ಮ ಆಪ್ತರ ಬಳಿ ಹೇಳಿಕೊಂಡಿರುವುದಾಗಿ ತಿಳಿದು ಬಂದಿದೆ.