×
Ad

ಬೆಂಗಳೂರು: ಚೀಟಿ ವ್ಯವಹಾರದಲ್ಲಿ ವಂಚನೆ; ನ್ಯಾಯಕ್ಕಾಗಿ ಒತ್ತಾಯ

Update: 2018-03-29 22:46 IST

ಬೆಂಗಳೂರು, ಮಾ. 29: ಅಕ್ರಮ ಚೀಟಿ ವ್ಯವಹಾರ ನಡೆಸಿ ಸುಮಾರು 4 ಕೋಟಿ 93ಲಕ್ಷ ರೂ ವಂಚನೆ ಮಾಡಿರುವ ಪಿ.ಕೆ ಉತ್ತಮನ್ ಎಂಬಾತನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸುದೀಶ್ ಅಸೋಸಿಯೇಟ್ಸ್‌ನ ಸದಸ್ಯರು ಒತ್ತಾಯಿಸಿದ್ದಾರೆ.

ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಟ್ಸ್‌ನ ಸದಸ್ಯ ಸಿದ್ದಲಿಂಗ ಪ್ರಸಾದ್, ನಗರದ ಜಾಲಹಳ್ಳಿ ಪಶ್ಚಿಮ ವಲಯದ ಶೆಟ್ಟಿಹಳ್ಳಿ ನಿವಾಸಿ ಪಿ.ಕೆ.ಉತ್ತಮನ್ ಎಂಬಾತ ಚೀಟಿ ವ್ಯವಹಾರ ನಡೆಸುತ್ತಿದ್ದು ಸುಮರು 60 ಜನರು ಅವನ ಬಳಿ 15ಲಕ್ಷದಿಂದ 30 ಲಕ್ಷದವರೆಗೂ ಹಣ ಕಟ್ಟಿದ್ದಾರೆ. 2016ನೇ ಸಾಲಿನಲ್ಲಿ ಚೀಟಿ ಮುಗಿದಿದ್ದರೂ ಯಾರೊಬ್ಬರಿಗೂ ಈವರೆಗೆ ಹಣ ಹಿಂದುರುಗಿಸಿಲ್ಲ ಎಂದು ಆರೋಪಿಸಿದರು.

ನಾವು ಹಣ ವಾಪಾಸ್ ಕೇಳಲು ಹೋದಾಗ ಹಣವನ್ನು ಬೇರೆ ಕಡೆ ಹೂಡಿಕೆ ಮಾಡಿದ್ದೇನೆ, ಅದು ಬಂದ ನಂತರ ಕೊಡುತ್ತೇನೆ ಎಂದು ಸಬೂಬು ಹೇಳುತ್ತಿದ್ದ. ನಾವು ಹಣ ಬೇಕೆ ಬೇಕು ಎಂದು ಒತ್ತಡ ಹಾಕಿದ ನಂತರ ನಿಮಗೆ ಯಾವುದೆ ಹಣ ಕೊಡಬೇಕಾಗಿಲ್ಲ ಎಂದು ಉಡಾಫೆ ಮಾತನಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಳುಹಿಸಿದ್ದಾನೆ ಎಂದು ದೂರಿದರು.

ನಮ್ಮ ಚೀಟಿ ಹಣವನ್ನು ಸ್ವಂತ ವ್ಯವಹಾರಕ್ಕೆ ಬಳಕೆ ಮಾಡಿಕೊಂಡಿದ್ದಾನೆ. ನಾವುಗಳು ನಗದು ಮೂಲಕ ಹಣ ಸಂದಾಯ ಮಾಡಿದ್ದೇವೆ. ಆತ ಚೀಟಿ ನಡೆಸಲು ಪರವಾನಿಗೆ ಹೊಂದಿರದ ಕಾರಣ ನಮಗೆ ಯಾವುದೇ ರಶೀದಿ ನೀಡಿಲ್ಲ. ಈ ಸಂಬಂಧ ಪಿ.ಕೆ.ಉತ್ತಮನ್ ವಿರುದ್ದ ಬಾಗಲಗುಂಟೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಪೊಲೀಸರು ದೂರು ಸ್ವೀಕರಿಸುತ್ತಿಲ್ಲ ಎಂದು ಹೇಳಿದರು.

ಈ ಸಂಬಂದ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಮುನಿರಾಜು, ಸೇರಿದಂತೆ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೇವೆ. ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ಅವರು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಚೀಟಿಹಣ ನೀಡಿದ್ದ ಬಹುತೇಕ ಸದಸ್ಯರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News