ಕಾಂಗ್ರೆಸ್‌ಗೆ ಜೆಡಿಯು ಶರದ್‌ಯಾದವ್ ಬಣದ ಬೆಂಬಲ ಸಾಧ್ಯತೆ

Update: 2018-03-29 17:25 GMT

ಬೆಂಗಳೂರು, ಮಾ.29: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಬೆನ್ನಲ್ಲೆ, ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಜೆಡಿಯು ಪಕ್ಷದ ಬಂಡಾಯ ನಾಯಕ ಶರದ್‌ಯಾದವ್ ನೇತೃತ್ವದ ಬಣ ಬೆಂಬಲಿಸಲು ಮುಂದಾಗಿದೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್ ಪಕ್ಷಕ್ಕೆ ಜೆಡಿಯು ಬೆಂಬಲ ನೀಡುವ ಕುರಿತು ಈಗಾಗಲೆ ಎರಡು ಸುತ್ತಿನ ಮಾತುಕತೆ ನಡೆದಿದೆ ಎನ್ನಲಾಗಿದೆ. ಜೆಡಿಯು ಪಕ್ಷದ ಮಾಜಿ ರಾಷ್ಟ್ರೀಯ ಅದ್ಯಕ್ಷ ಶರದ್‌ ಯಾದವ್ ಕಾಂಗ್ರೆಸ್ ಜೊತೆಗಿನ ಮೈತ್ರಿ ಕುರಿತು ಶುಕ್ರವಾರ ಪ್ರಕಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಗರದ ಮೌರ್ಯ ಹೊಟೇಲ್‌ನಲ್ಲಿ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಪತ್ರಿಕಾಗೋಷ್ಠಿಯನ್ನು ನಡೆಸಲಿರುವ ಶರದ್‌ಯಾದವ್, ರಾಷ್ಟ್ರಮಟ್ಟದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಜೊತೆಗೆ ರಾಜ್ಯ ವಿಧಾನಸಭಾ ಚುನಾವಣೆಯ ವಿಚಾರದಲ್ಲೂ ಹಲವು ಮಹತ್ವದ ವಿಷಯಗಳತ್ತ ಬೆಳಕು ಚೆಲ್ಲಲಿದ್ದಾರೆ. ಶರದ್‌ಯಾದವ್‌ಗೆ ಜೆಡಿಯು ರಾಜ್ಯಾಧ್ಯಕ್ಷ ಡಾ.ಎಂ.ಪಿ.ನಾಡಗೌಡ ಸಾಥ್ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

ಬಿಹಾರದ ಮುಖ್ಯಮಂತ್ರಿ ನಿತೀಶ್‌ಕುಮಾರ್ ಮಹಾ ಮೈತ್ರಿ ಕೂಟದಿಂದ ಹೊರ ಬಂದು ಬಿಜೆಪಿ ಜೊತೆ ಸೇರಿ ಸರಕಾರ ರಚನೆ ಮಾಡಿದ ಕ್ರಮವನ್ನು ವಿರೋಧಿಸಿದ ಶರದ್‌ಯಾದವ್‌ರನ್ನು ಜೆಡಿಯು ಪಕ್ಷದಿಂದ ಹೊರ ಹಾಕಲಾಗಿತ್ತು. ನಿತೀಶ್‌ಕುಮಾರ್ ನಡೆಯಿಂದ ಬೇಸರಗೊಂಡಿರುವ ಶರದ್‌ಯಾದವ್ ಹೊಸ ಪಕ್ಷವನ್ನು ಸ್ಥಾಪಿಸುವ ಕುರಿತು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News