ಮಿಯಾಮಿ ಓಪನ್: ಡೆಲ್ ಪೊಟ್ರೊ ಸೆಮಿ ಫೈನಲ್‌ಗೆ ಲಗ್ಗೆ

Update: 2018-03-29 18:48 GMT

ಮಿಯಾಮಿ, ಮಾ.29: ಕೆನಡಾದ ಮಿಲೊಸ್ ರಾವೊನಿಕ್‌ರನ್ನು ಮಣಿಸಿದ ಅರ್ಜೆಂಟೀನದ ಜುಯಾನ್ ಮಾರ್ಟಿಲ್ ಡೆಲ್ ಪೊಟ್ರೊ ಮಿಯಾಮಿ ಟೆನಿಸ್ ಓಪನ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಇಲ್ಲಿ ಬುಧವಾರ 2 ಗಂಟೆ, 53 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಡೆಲ್ ಪೊಟ್ರೊ ಅವರು ರಾವೊನಿಕ್‌ರನ್ನು 5-7, 7-6(7/1), 7-6(7/3) ಸೆಟ್‌ಗಳಿಂದ ಸೋಲಿಸಿದರು. ಈ ಜೋಡಿ ಮೂರು ವಾರಗಳ ಹಿಂದೆ ಇಂಡಿಯನ್ ವೆಲ್ಸ್ ಟೂರ್ನಿಯಲ್ಲಿ ಮುಖಾಮುಖಿಯಾಗಿದ್ದು, 2009ರ ಯುಎಸ್ ಓಪನ್ ಚಾಂಪಿಯನ್ ಡೆಲ್ ಪೊಟ್ರೊ 6-2, 6-3 ನೇರ ಸೆಟ್‌ಗಳಿಂದ ಜಯ ಸಾಧಿಸಿದ್ದರು.

ಡೆಲ್ ಪೊಟ್ರೊ ಸೆಮಿ ಫೈನಲ್‌ನಲ್ಲಿ ಅಮೆರಿಕದ ಜಾನ್ ಇಸ್ನೇರ್‌ರನ್ನು ಎದುರಿಸಲಿದ್ದಾರೆ. ಮಿಯಾಮಿ ಓಪನ್‌ನಲ್ಲಿ ತನ್ನ ಮ್ಯಾಜಿಕ್ ಮುಂದುವರಿಸಿದ ಇಸ್ನೇರ್ ದಕ್ಷಿಣ ಕೊರಿಯಾದ ಚುಂಗ್ ಹಿಯೊನ್‌ರನ್ನು 6-1, 6-4 ಸೆಟ್‌ಗಳಿಂದ ಸೋಲಿಸಿದರು. 14ನೇ ಶ್ರೇಯಾಂಕದ ಇಸ್ನೇರ್ ದಕ್ಷಿಣ ಫ್ಲೋರಿಡಾಕ್ಕೆ ಆಗಮಿಸುವ ಮೊದಲು ಕೇವಲ 2 ಪಂದ್ಯ ಜಯಿಸಿದ್ದರು. ಈ ವಾರದಲ್ಲಿ ನಾಲ್ಕನೇ ಪಂದ್ಯ ಜಯಿಸಿದ ಇಸ್ನೇರ್ ಚೊಚ್ಚಲ ಎಟಿಪಿ ಮಾಸ್ಟರ್ಸ್‌ ಪ್ರಶಸ್ತಿ ಗೆಲ್ಲುವತ್ತ ಹೆಜ್ಜೆ ಇಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News