ತ್ರಿಕೋನ ಸರಣಿ: ಭಾರತದ ವನಿತೆಯರಿಗೆ ಮೊದಲ ಜಯ

Update: 2018-03-29 19:03 GMT

ಮುಂಬೈ, ಮಾ.29: ಇಲ್ಲಿ ಗುರುವಾರ ನಡೆದ ತ್ರಿಕೋನ ಸರಣಿಯ ಆರನೇ ಟ್ವೆಂಟಿ-20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ವನಿತೆಯರ ತಂಡ 8 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ. ಇದರೊಂದಿಗೆ ಭಾರತ ಸರಣಿಯಲ್ಲಿ ಮೊದಲ ಗೆಲುವು ದಾಖಲಿಸಿದೆ.

 ಗೆಲುವಿಗೆ 108 ರನ್‌ಗಳ ಸವಾಲನ್ನು ಪಡೆದ ಭಾರತ 15.4 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ ಗೆಲುವಿನ ದಡ ಸೇರಿತು.

ಸ್ಮತಿ ಮಂಧಾನ ಔಟಾಗದೆ 62 ರನ್ (41ಎ, 8ಬೌ,1ಸಿ) ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಔಟಾಗದೆ 20 ರನ್(31ಎಸೆತ,2 ಬೌಂಡರಿ) ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

 ಭಾರತ 5.1 ಓವರ್‌ಗಳಲ್ಲಿ 48 ರನ್ ಗಳಿಸುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತ್ತು. ಡೇನಿಯಲ್ ಹಝೆಲ್ ದಾಳಿಯನ್ನು ಎದುರಿಸಲಾರದೆ ಮಿಥಾಲಿ ರಾಜ್ (6) ಮತ್ತು ಜಮೀಮಾ ರೋಡ್ರಿಗಸ್ (7) ಬೇಗನೆ ಔಟಾದರು. ಮೂರನೇ ವಿಕೆಟ್‌ಗೆ ಸ್ಮತಿ ಮಂಧಾನ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ 60 ರನ್‌ಗಳ ಜೊತೆಯಾಟ ನೀಡಿ ತಂಡದ ಗೆಲುವಿಗೆ ನೆರವಾದರು.

ಟಾಸ್ ಜಯಿಸಿದ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಆಯ್ದುಕೊಂಡಿತ್ತು. ಅನುಜಾ ಪಾಟೀಲ್(21ಕ್ಕೆ 3), ರಾಧಾ ಯಾದವ್(16ಕ್ಕೆ 2), ದೀಪ್ತಿ ಶರ್ಮಾ (24ಕ್ಕೆ 2), ಪೂನಮ್ ಯಾದವ್(17ಕ್ಕೆ 2) ಮತ್ತು ಪೂಜಾ ವಸ್ತ್ರಾಕರ್ (17ಕ್ಕೆ 1) ದಾಳಿಗೆ ಸಿಲುಕಿ 18.5 ಓವರ್‌ಗಳಲ್ಲಿ 107 ರನ್‌ಗಳಿಗೆ ಆಲೌಟಾಗಿತ್ತು.

ಆರಂಭದಲ್ಲಿ ಇಂಗ್ಲೆಂಡ್ ಆಟಗಾರ್ತಿಯರ ಪ್ರದರ್ಶನ ಚೆನ್ನಾಗಿತ್ತು. ಡೇನಿಯಲ್ ವಿಯಟ್ (31), ಅಮೈ ಎಲೆನ್ ಜೋನ್ಸ್ (15), ತಾಮಿ ಬೀಯೊಮೊಂಟ್(10), ನಥಾಲಿಐ ಸ್ಕೀವೆರ್(15) ಮತ್ತು ಫ್ರಾನ್ ವಿಲ್ಸನ್(12) ಎರಡಂಕೆಯ ಸ್ಕೋರ್ ದಾಖಲಿಸಿದರು. ಅಲ್ಸೆ ಡೆವಿಡ್ಸನ್ (3), ಕಾಟೈ ಜಾರ್ಜ್ (0), ಡೇನಿಯಲ್ ಹಝೆಲ್(3), ಟಾಶ್ ಫಾರಂಟ್(2) ಒಂದಂಕಿಯ ಸ್ಕೋರ್ ದಾಖಲಿಸಿದರು. ಭಾರತದ ಅನುಜಾ ಪಾಟೀಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್ ವಿವರ

►ಇಂಗ್ಲೆಂಡ್ 18.5 ಓವರ್‌ಗಳಲ್ಲಿ 107 (ಡೇನಿಯಲ್ ವೈಟ್ 31, ಅಮೈ ಜೋನ್ಸ್ 15, ನಥಾಲಿ ಸ್ಕೀವೆರ್ 15; ಅನುಜಾ ಪಾಟೀಲ್ 21ಕ್ಕೆ 3. ರಾಧಾ ಯಾದವ್ 16ಕ್ಕೆ 2).

►ಭಾರತ 15.4 ಓವರ್‌ಗಳಲ್ಲಿ 108/2(ಮಂಧಾನ ಔಟಾಗದೆ 62, ಕೌರ್ ಔಟಾಗದೆ 20; ಹಝೇಲ್ 17ಕ್ಕೆ 2).

►ಪಂದ್ಯ ಶ್ರೇಷ್ಠ ಪ್ರಶಸ್ತಿ: ಅನುಜಾ ಪಾಟೀಲ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News