ಮೊಸರನ್ನದ ಆರೋಗ್ಯಲಾಭಗಳು ಏನೇನು?: ಇಲ್ಲಿದೆ ಮಾಹಿತಿ

Update: 2018-03-30 09:37 GMT

ಹಿಂದಿನಿಂದಲೂ ಮೊಸರನ್ನದ ಸೇವನೆಯು ಹಲವಾರು ಆರೋಗ್ಯಲಾಭಗಳೊಂದಿಗೆ ಗುರುತಿಸಿಕೊಂಡಿದೆ. ಮೊಸರನ್ನದ ರೂಪದಲ್ಲಿ ಆಗಾಗ್ಗೆ ಅಥವಾ ಪ್ರತಿದಿನ ಮೊಸರಿನ ಸೇವನೆಯು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಮಾತ್ರವಲ್ಲ, ಶರೀರದ ಒಟ್ಟಾರೆ ಆರೋಗ್ಯವನ್ನು ಉತ್ತಮಗೊಳಿಸುವಲ್ಲಿ ಪರಿಣಾಮಕಾರಿಯಾಗಿದೆ.

ದಕ್ಷಿಣ ಭಾರತವು ಮೊಸರನ್ನದ ಮೂಲವಾಗಿದೆಯಾದರೂ ಅದೀಗ ಉತ್ತರ ಭಾರತದಲ್ಲಿಯೂ, ವಿಶೇಷವಾಗಿ ಬೇಸಿಗೆಯ ದಿನಗಳಲ್ಲಿ ಜನಪ್ರಿಯ ಆಹಾರವಾಗಿದೆ.

ಇಂತಹ ಮೊಸರನ್ನದ ಆರೋಗ್ಯಲಾಭಗಳ ಕುರಿತು ಮಾಹಿತಿಯಿಲ್ಲಿದೆ....

► ಹೊಟ್ಟೆ ಉಬ್ಬರವನ್ನು ತಡೆಯುವ ತನ್ನ ಸಾಮರ್ಥ್ಯದಿಂದಾಗಿ ನಿಮ್ಮ ಹೊಟ್ಟೆ ಹದಗೆಟ್ಟಾಗ ಮತ್ತು ಅಜೀರ್ಣದಿಂದ ಬಳಲುತ್ತಿರುವಾಗ ಅದರಿಂದ ಮುಕ್ತಿ ಪಡೆಯಲು ಮೊಸರನ್ನವು ಅತ್ಯುತ್ತಮ ಮನೆಮದ್ದಾಗಿದೆ. ಅದು ನಾವು ಸೇವಿಸಿದ ಆಹಾರವು ಜೀರ್ಣವಾಗಲು ನೆರವಾಗುತ್ತದೆ.

► ಮೊಸರನ್ನವನ್ನು ತಣ್ಣಗಿನ ಸ್ಥಿತಿಯಲ್ಲಿ ಸೇವಿಸಿದರೆ ಹೆಚ್ಚು ಪರಿಣಾಮವನ್ನು ಬೀರುತ್ತದೆ. ಅದು ಶರೀರಕ್ಕೆ ತಂಪು ನೀಡುವ ಮೂಲಕ ಶರೀರದ ಆಂತರಿಕ ತಾಪಮಾನವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಆದ್ದರಿಂದ ನೀವು ಜ್ವರದಿಂದ ಬಳಲುತ್ತಿದ್ದರೆ ಮೊಸರನ್ನವು ಉತ್ತಮ ಆಹಾರವಾಗಿದೆ. ಅಲ್ಲದೆ ತೀವ್ರ ಧಗೆಯ ದಿನಗಳಲ್ಲಿ ಮೊಸರನ್ನದ ಸೇವನೆಯು ನಿಮ್ಮ ಶರೀರವು ಬೇಗನೆ ಬಿಸಿಯಾಗಲು ಅವಕಾಶ ನೀಡುವುದಿಲ್ಲ.

► ಮೊಸರಿನಲ್ಲಿ ಆ್ಯಂಟಿಆಕ್ಸಿಡಂಟ್‌ಗಳು, ಪ್ರೊಬಯೊಟಿಕ್‌ಗಳು ಮತ್ತು ಕೊಬ್ಬು ಇರುವುದರಿಂದ ಅದು ಮಾನಸಿಕಒತ್ತಡ, ಉದ್ವೇಗಗಳನ್ನು ಸುಲಭವಾಗಿ ನಿವಾರಿಸುತ್ತದೆ.

► ದೇಹತೂಕವನ್ನು ಇಳಿಸಿಕೊಳ್ಳಲು ಬಯಸುವವರು ಕನಿಷ್ಠ ಒಂದು ಹೊತ್ತಿನ ಊಟದಲ್ಲಾದರೂ ಮೊಸರನ್ನವನ್ನು ಸೇವಿಸುವುದು ಉತ್ತಮ ಆಯ್ಕೆಯಾಗಿದೆ. ಒಂದು ಬೌಲ್ ತುಂಬ ಮೊಸರನ್ನವನ್ನು ತಿಂದರೆ ಹೊಟ್ಟೆಯು ತುಂಬಿರುತ್ತದೆ ಮತ್ತು ಆಗಾಗ್ಗೆ ಹೆಚ್ಚಿನ ಕ್ಯಾಲರಿಗಳು ಇರುವ ತಿಂಡಿಗಳನ್ನು ತಿನ್ನುವ ಬಯಕೆ ದೂರವಾಗುತ್ತದೆ. ಫ್ರೈಡ್ ರೈಸ್‌ಗೆ ಹೋಲಿಸಿದರೆ ಮೊಸರನ್ನದಲ್ಲಿರುವ ಕ್ಯಾಲರಿಗಳ ಪ್ರಮಾಣ ತೀರ ಕಡಿಮೆಯಾಗಿರುತ್ತದೆ.

► ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುವುದರಿಂದ ವಿಶೇಷವಾಗಿ ಅನಾರೋಗ್ಯದ ಸಂದರ್ಭಗಳಲ್ಲಿ ಮೊಸರನ್ನವು ಅತ್ಯುತ್ತಮ ಆಹಾರಗಳಲ್ಲೊಂದಾಗಿದೆ. ಅದು ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಸೋಂಕುಗಳ ವಿರುದ್ಧ ಹೋರಾಡಲು ನೆರವಾಗುತ್ತದೆ. ಅನಾರೋಗ್ಯ ವೇಳೆ ತುಂಬ ಅಗತ್ಯವಾಗಿರುವ ಶಕ್ತಿಯನ್ನೂ ಮೊಸರನ್ನವು ನೀಡುತ್ತದೆ.

ಇವಿಷ್ಟೇ ಅಲ್ಲದೆ ಮೊಸರನ್ನವನ್ನು ತಿನ್ನಲು ಹಲವಾರು ಇತರ ಕಾರಣಗಳೂ ಇವೆ. ಅದು ಶಿಶುಗಳಿಗೆ ನೀಡಬಹುದಾದ ಆಹಾರಗಳಲ್ಲಿಯೂ ಒಂದಾಗಿದೆ. ಕಾರ್ಬೊಹೈಡ್ರೇಟ್‌ಗಳು ಮತ್ತು ಪ್ರೋಟಿನ್‌ಗಳನ್ನು ಹೇರಳವಾಗಿ ಒಳಗೊಂಡಿರುವ ಅದು ಶರೀರಕ್ಕೆ ಪೌಷ್ಟಿಕಾಂಶಗಳ ಪೂರೈಕೆಯನ್ನು ಹೆಚ್ಚಿಸುತ್ತದೆ.

ಮಸಾಲೆಭರಿತ ಆಹಾರದ ಬಳಿಕ ಮೊಸರನ್ನದ ಸೇವನೆಯು ಆರಾಮವನ್ನು ನೀಡುತ್ತದೆ. ಫ್ರೈ ಮಾಡಿದ ಮತ್ತು ಮಸಾಲೆಭರಿತ ಆಹಾರದ ಸೇವನೆಯ ಬಳಿಕ ಕಾಣಿಸಿಕೊಳ್ಳುವ ಕೆರಳುವಿಕೆ ಮತ್ತು ಉರಿಯನ್ನು ಕೇವಲ ಒಂದು ಕಪ್ ಮೊಸರನ್ನ ಸೇವನೆಯಿಂದ ನಿವಾರಿಸಬಹುದಾಗಿದೆ.

ಮೊಸರು ಚರ್ಮಕ್ಕೆ ಹೊಳಪನ್ನೂ ನೀಡುತ್ತದೆ, ಹೀಗಾಗಿ ಅದು ಮುಖದ ಸೌಂದರ್ಯ ವನ್ನು ಹೆಚ್ಚಿಸುವ ಮನೆಯಲ್ಲಿ ತಯಾರಿಸುವ ಪ್ರಸಾದನಗಳ ಭಾಗವೂ ಆಗಿದೆ.

ಅತಿಸಾರದಿಂದ ಬಳಲುತ್ತಿರುವವರಿಗೆ ತಂಪು ಮೊಸರನ್ನ ಉತ್ತಮ ಆಯ್ಕೆಯಾಗಿದೆ. ಕೊಂಚ ಮೆಂತ್ಯದೊಂದಿಗೆ ಮೊಸರನ್ನ ಸೇವಿಸುವುದು ಹೊಟ್ಟೆಗೆ ನಿರಾಳತೆಯನ್ನು ನೀಡುತ್ತದೆ. ಅದು ಹೊಟ್ಟೆನೋವನ್ನೂ ಶಮನಗೊಳಿಸುತ್ತದೆ.

ಋತುಬಂಧವನ್ನು ಸಮೀಪಿಸುತ್ತಿರುವ ಮಹಿಳೆಯರಿಗೆ ಮೊಸರನ್ನವನ್ನು ಸೇವಿಸುವಂತೆ ವೈದ್ಯರು ಶಿಫಾರಸು ಮಾಡುತ್ತಾರೆ. ಅದು ಶರೀರಕ್ಕೆ ಸಾಕಷ್ಟು ಕ್ಯಾಲ್ಸಿಯಂ ಅನ್ನು ಒದಗಿಸುತ್ತದೆ. ಹಾಲಿಗೆ ಹೋಲಿಸಿದರೆ ಮೊಸರು, ವಿಶೇಷವಾಗಿ ಮೊಸರನ್ನದ ರೂಪದಲ್ಲಿ ಉತ್ತಮ ಆಯ್ಕೆಯಾಗಿದೆ. ಒಂದು ಗ್ಲಾಸ್ ಹಾಲು ಕುಡಿದ ನಂತರ ಉಂಟಾಗುವ ಹೊಟ್ಟೆ ತುಂಬಿದಂತಹ ಅನುಭವ ಮೊಸರನ್ನದ ಸೇವನೆಯಿಂದ ಉಂಟಾಗುವುದಿಲ್ಲ.

ಅಲ್ಲದೆ ಹಾಲಿನಲ್ಲಿರುವ ಪ್ರೋಟಿನ್‌ಗಳಿಗಿಂತ ಮೊಸರಿನಲ್ಲಿರುವ ಪ್ರೋಟಿನ್‌ಗಳು ಬೇಗನೆ ಜೀರ್ಣವಾಗುತ್ತವೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ಪೊಟ್ಯಾಷಿಯಮ್‌ನ ಉತ್ತಮ ಮೂಲವಾಗಿರುವ ಅದು ರಕ್ತದೊತ್ತಡವನ್ನೂ ಕ್ರಮಬದ್ಧಗೊಳಿಸುತ್ತದೆ.

ಜೇನುತುಪ್ಪದೊಂದಿಗೆ ಮೊಸರಿನ ಸೇವನೆಯು ಕಾಮಾಲೆ ರೋಗದ ಚಿಕಿತ್ಸೆಯಲ್ಲಿ ಪರಿಣಾಮಕಾರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News