ಬಿಜೆಪಿಯನ್ನು ಸೋಲಿಸಲು ಬಿಜೆಪಿಯೇತರ ಪಕ್ಷಗಳಿಗೆ ಬೆಂಬಲ: ಶರದ್ ಯಾದವ್
ಬೆಂಗಳೂರು, ಮಾ.30: ವಿಧಾನಸಭಾ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿಯನ್ನು ಸೋಲಿಸುವುದೆ ಜೆಡಿಯು ಪಕ್ಷದ ಮುಖ್ಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿಯೇತರ ಪಕ್ಷಗಳಿಗೆ ಬೆಂಬಲ ನೀಡಲು ನಿರ್ಧರಿಸಿದ್ದೇವೆ ಎಂದು ಜೆಡಿಯು ಮುಖಂಡ ಶರದ್ ಯಾದವ್ ತಿಳಿಸಿದರು.
ಶುಕ್ರವಾರ ಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ವಿಧಾನಸಭಾ ಚುನಾವಣೆ ದೇಶದ ಮುಂಬರುವ ಚುನಾವಣೆಗಳಲ್ಲಿ ಮುಖ್ಯವಾದ ಪಾತ್ರ ವಹಿಸಲಿದೆ. ಈ ನಿಟ್ಟಿನಲ್ಲಿ ಸಂವಿಧಾನ ವಿರೋಧಿ ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ಬಿಜೆಪಿಯೇತರ ಪಕ್ಷಗಳಲ್ಲಿ ಯಾವ ಪಕ್ಷಕ್ಕೆ ಜೆಡಿಯು ಬೆಂಬಲ ಸೂಚಿಸಲಿದೆ ಎಂಬುದನ್ನು ಶೀಘ್ರವೆ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾಗಿರುವ ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಕರ್ನಾಟಕ ಜನತೆ ದೃಢ ನಿರ್ಧಾರ ಮಾಡಬೇಕು. ಬಿಜೆಪಿಯ ಅವನತಿ ಕರ್ನಾಟಕದಿಂದಲೆ ಪ್ರಾರಂಭವಾಗಲಿ. ಈ ನಿಟ್ಟಿನಲ್ಲಿ ಜೆಡಿಯು ಕಾರ್ಯಕರ್ತರು ಬಿಜೆಪಿ ವಿರುದ್ಧ ಜನ ಜಾಗೃತಿ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.
ಬಿಜೆಪಿಗೆ ತನ್ನ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರ ಮಾಡಲು ಅಭಿವೃದ್ಧಿಯ ಅಂಶಗಳೆ ಇಲ್ಲ. ಕೇವಲ ಕೋಮುವಾದಿ, ಲವ್ ಜಿಹಾದ್, ಘರ್ ವಾಪಸಿ ವಿಷಯಗಳನ್ನು ಜನರ ಮನಸ್ಸಿನಲ್ಲಿ ಬಿತ್ತುತ್ತಿದೆ. ಧರ್ಮಗಳ ನಡುವೆ ದ್ವೇಷ ಭಾವನೆ ಸೃಷ್ಟಿಸಿ ಮತಗಳನ್ನು ಪಡೆಯುವುದೆ ಬಿಜೆಪಿಯ ಚುನಾವಣಾ ತಂತ್ರವೆಂದು ಅವರು ಲೇವಡಿ ಮಾಡಿದರು.
ದೇಶದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಸರಕಾರಕ್ಕೆ ಜನರ ಬೆಂಬಲ ಇರುವುದು ಶೇ.35ಕ್ಕಿಂತ ಕಡಿಮೆ. ಉಳಿದ ಶೇ.60ರಿಂದ 70ರಷ್ಟು ಜನ ಬೆಂಬಲ ಜಾತ್ಯತೀತ ಪಕ್ಷಗಳಿಗಿದೆ. ಹೀಗಾಗಿ ಈ ಜಾತ್ಯತೀತ ಪಕ್ಷಗಳು ಒಟ್ಟಾಗಿ ಆಡಳಿತ ನಡೆಸುವ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂದು ಅವರು ಆಶಿಸಿದರು.
ಕಾರ್ಯಕ್ರಮದಲ್ಲಿ ಜೆಡಿಯು ರಾಜ್ಯಾಧ್ಯಕ್ಷ ನಾಡಗೌಡ, ಮಾಜಿ ಸಂಸದ ಕೋದಂಡರಾಮಯ್ಯ ಮತ್ತಿತರರಿದ್ದರು.
ಜೆಡಿಯು ಎರಡು ಬಣಗಳಾಗಿ ವಿಭಜನೆಗೊಂಡಿರುವುದರಿಂದ ಹೊಸ ಚಿಹ್ನೆ ಪಡೆಯುವುದಕ್ಕಾಗಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದೇವೆ. ಮುಂದಿನ ಸೋಮವಾರ ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಲಿದ್ದು, ಹೊಸ ಚಿಹ್ನೆ ಬಂದ ನಂತರ ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಹೊಸ ಪಕ್ಷದ ಉದ್ಘಾಟನೆ ಮಾಡಲಿದ್ದೇವೆ.
-ಶರದ್ ಯಾದವ್, ಜೆಡಿಯು ಮುಖಂಡ