ಯೋಧನ ಕೊಲೆಗೈದು ಸಾಕ್ಷಿ ನಾಶಕ್ಕೆ ಯತ್ನ: ಇಬ್ಬರು ಯೋಧರ ಬಂಧನ
ಬೆಂಗಳೂರು, ಮಾ. 30: ಯೋಧನೊರ್ವನನ್ನು ಚಾಕುವಿನಿಂದ ಕೊಲೆ ಮಾಡಿ ಮೃತದೇಹವನ್ನು ಬೇರೆಡೆ ತೆಗೆದುಕೊಂಡು ಹೋಗಿ ಅರ್ಧಂಬರ್ಧ ಸುಟ್ಟು, ಅರೆಬೆಂದ ದೇಹವನ್ನು ತಂದು ಮಿಲ್ಟ್ರಿ ಕ್ಯಾಂಪಸ್‌ನ ಆವರಣದಲ್ಲೇ ಹಾಕಿದ್ದ ಇಬ್ಬರು ಯೋಧರನ್ನು ವಿವೇಕನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಂಕಜ್ ಎಂಬವರೇ ಕೊಲೆಯದ ಯೋಧ ಎಂದು ಪೊಲೀಸರು ಗುರುತಿಸಿದ್ದಾರೆ. ಕಳೆದ ಮಾ.23ರ ರಾತ್ರಿ ಜತೆಯಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶದ ಮೂಲದ ಯೋಧ ಪಂಕಜ್‌ಕುಮಾರ್ (26) ಎಂಬಾತನನ್ನು ಕೊಲೆ ಮಾಡಿ ಗುರುತು ಸಿಗದಂತೆ ಸಾಕ್ಷ ನಾಶಪಡಿಸಲು ಸುಟ್ಟು ಹಾಕಿದ್ದ ಆಂಧ್ರಪ್ರದೇಶದ ಶ್ರೀಕಾಕೂಳಂನ ಧನರಾಜ್ (25) ಹಾಗೂ ಮುರುಳೀಕಷ್ಣ (29)ನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಘಟನೆ ವಿವರ: ಕ್ಯಾಂಪಸ್‌ನಲ್ಲಿ ಆರೋಪಿ ಮುರುಳೀಕೃಷ್ಣನ ಗುರುತಿನ ಪತ್ರ ಇನ್ನಿತರ ದಾಖಲೆಗಳು ಕಳ್ಳತನವಾಗಿದ್ದು, ಅದರಲ್ಲಿ ಪಂಕಜ್ ಪ್ರಮುಖ ಸಾಕ್ಷಿದಾರನಾಗಿದ್ದ. ಆತನ ಸಾಕ್ಷಿಯಿಂದ ಕೆಲಸದಿಂದ ವಜಾ ಆಗುವ ಭೀತಿಯಲ್ಲಿದ್ದ ಮುರುಳೀಕಷ್ಣ, ಧನರಾಜ್ ಜತೆ ಸೇರಿ ಪಂಕಜ್‌ನನ್ನು ಕೊಲೆ ಮಾಡಿರುವುದು ತನಿಖೆಯಲ್ಲಿ ತಿಳಿದು ಬಂದಿದೆ.