‘ದಿನಕ್ಕೊಂದು ಭ್ರಷ್ಟಾಚಾರ-ಲೂಟಿಕೋರರು ಓಡಿ ಹೋಗುವುದು’ ಮೋದಿ ಸರಕಾರದ ಹೊಸ ಘೋಷಣೆ: ರಣದೀಪ್ ಸಿಂಗ್ ಸುರ್ಜೆವಾಲ

Update: 2018-03-30 14:35 GMT

ಬೆಂಗಳೂರು, ಮಾ.30: ‘ದಿನಕ್ಕೊಂದು ಭ್ರಷ್ಟಾಚಾರ ಮತ್ತು ಲೂಟಿಕೋರರು ಓಡಿ ಹೋಗುವುದು’ ಪ್ರಧಾನಿ ನರೇಂದ್ರಮೋದಿ ಸರಕಾರದ ಹೊಸ ಘೋಷಣೆಯಾಗಿದ್ದು, ಬ್ಯಾಂಕುಗಳಲ್ಲಿರುವ ಸಾರ್ವಜನಿಕರ ಹಣವನ್ನು ಬಂಡವಾಳ ಶಾಹಿಗಳು ಲೂಟಿ ಮಾಡಲು ಸಹಕರಿಸಿದ ಆರೋಪವನ್ನು ಎದುರಿಸುತ್ತಿದೆ ಎಂದು ಎಐಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದ್ದಾರೆ.

ಶುಕ್ರವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬ್ಯಾಂಕಿಂಗ್ ಕ್ಷೇತ್ರಕ್ಕೆ ಪಾರ್ಶ್ವವಾಯು ಬರಿಸಿದ ಹೆಗ್ಗಳಿಕೆ ಪ್ರಧಾನಿ ಮೋದಿಗೆ ಸಲ್ಲಬೇಕು. ಸಾರ್ವಜನಿಕರ ಹಣವನ್ನು ಬ್ಯಾಂಕುಗಳು ವಿವಿಧ ಶುಲ್ಕಗಳ ಮೂಲಕ ಕಬಳಿಸಲಾಗುತ್ತಿದೆ. ಬಿಜೆಪಿ ಸರಕಾರದ ಅವಧಿಯಲ್ಲಿ 11 ಬ್ಯಾಂಕುಗಳಲ್ಲಿ ನಡೆದಿರುವ ಹಗರಣಗಳಿಂದ 61 ಸಾವಿರ ಕೋಟಿ ರೂ.ದೇಶದ ಖಜಾನೆಗೆ ನಷ್ಟವಾಗಿದೆ ಎಂದು ಅವರು ಆರೋಪಿಸಿದರು.

ಪ್ರತಿದಿನ ಬ್ಯಾಂಕ್‌ಗಳ ಹೊಸ ಹೊಸ ವಂಚನೆ ಪ್ರಕರಣಗಳು ಮಾಧ್ಯಮದ ಮುಖಪುಟಗಳಲ್ಲಿ ರಾರಾಜಿಸುತ್ತಿವೆ ಮತ್ತು ವಂಚಿತರು ನರೇಂದ್ರಮೋದಿ ಸರಕಾರದ ಸಹಕಾರದೊಂದಿಗೆ ದೇಶಬಿಟ್ಟು ಪರಾರಿಯಾಗುತ್ತಿದ್ದಾರೆ. ವಿಜಯ್‌ಮಲ್ಯ, ಲಲಿತ್‌ಮೋದಿ, ಛೋಟಾ ಮೋದಿ ಯಾನೆ ನೀರವ್‌ಮೋದಿ, ಮೆಹುಲ್ ಚೋಕ್ಸಿ ಮತ್ತು ಜತಿನ್ ಮೆಹ್ತಾ ಅವರಂತಹವರು ಕೊಳ್ಳೆ ಹೊಡೆಯುತ್ತಿದ್ದರೂ ಅಧಿಕಾರದಲ್ಲಿರುವವರು ಮೌನವಾಗಿದ್ದಾರೆ ಎಂದು ಅವರು ದೂರಿದರು.

ಬ್ಯಾಂಕ್ ಆಫ್ ಬರೋಡಾ ಫಾರೆಕ್ಸ್ ಹಗರಣ-6400 ಕೋಟಿ ರೂ., ವಿಜಯ್ ಮಲ್ಯ ಬ್ಯಾಂಕ್ ಹಗರಣ-9 ಸಾವಿರ ಕೋಟಿ ರೂ., ನೀರವ್‌ಮೋದಿ ಮತ್ತು ಚೋಕ್ಸಿ ಬ್ಯಾಂಕ್ ಲೂಟ್ ಹಗರಣ-23,484 ಕೋಟಿ ರೂ., ಮೆಹುಲ್ ಚೋಕ್ಸಿ ಜನಧನ್ ಲೂಟ್ ಯೋಜನೆ-5 ಸಾವಿರ ಕೋಟಿ ರೂ., ವಿಕ್ರಮ್ ಕೋಠಾರಿ ರೋಟೋಮ್ಯಾಕ್ ಹಗರಣ-3695 ಕೋಟಿ ರೂ., ದ್ವಾರಕಾದಾಸ್ ಜ್ಯುವೆಲರಿ ಬ್ಯಾಂಕ್ ಹಗರಣ-390 ಕೋಟಿ ರೂ.ಲೂಟಿಯಾಗಿದೆ ಎಂದು ಅವರು ಹೇಳಿದರು.

ಅಲ್ಲದೆ, ಕೆನರಾ ಬ್ಯಾಂಕ್ ಹಗರಣ-515 ಕೋಟಿ ರೂ., ವಿನ್ಸಮ್ ಬ್ಯಾಂಕ್ ಲೂಟ್ ಹಗರಣ-6712 ಕೋಟಿ ರೂ., ಯೂನಿಯನ್ ಬ್ಯಾಂಕ್ ಟೋಟೆಂ ಇಫ್ರಾ ಹಗರಣ-1395 ಕೋಟಿ ರೂ., ಕಾನಿಷ್ಕ್ ಗೋಲ್ಡ್ ಜ್ಯುವೆಲರಿ ಹಗರಣ-824 ಕೋಟಿ ರೂ., ಐಡಿಬಿಐ ಬ್ಯಾಂಕ್ ಹಗರಣ-772 ಕೋಟಿ ರೂ., ಐಸಿಐಸಿಐ ಬ್ಯಾಂಕ್ ಹಗರಣ-2849 ಕೋಟಿ ರೂ., ಸೇರಿದಂತೆ ಒಟ್ಟು 61036 ಕೋಟಿ ರೂ.ಗಳ ವಂಚನೆಯಾಗಿದೆ ಎಂದು ಅವರು ತಿಳಿಸಿದರು.

ಇಂಟರ್‌ಪೋಲ್ ಮೂಲಕವು ಈ ವಂಚಕರ ಜಾಡಿನ ಕುರಿತು ಮಾಹಿತಿ ಬಂದಿದೆ. ಆದರೆ, ಕೇಂದ್ರ ಸರಕಾರ ಮಾತ್ರ ಯಾವುದೆ ಕ್ರಮ ಕೈಗೊಳ್ಳದೆ ಸುಮ್ಮನಿದೆ. ಸಿಬಿಎಸ್‌ಇ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಿಂದಾಗಿ, ನರೇಂದ್ರಮೋದಿ ಸರಕಾರವು ಲೀಕ್ ಸರಕಾರ ಆಗಿದೆ. ದೇಶದಲ್ಲಿ ಪರೀಕ್ಷಾ ಅಕ್ರಮಗಳು ಹೆಚ್ಚಾಗಿವೆ. ಸಿಬಿಎಸ್‌ಇ ಬೋರ್ಡ್‌ನಲ್ಲಿ ಪರೀಕ್ಷಾ ಅಕ್ರಮಗಳು ನಡೆಯುತ್ತಿವೆ. ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಈ ಅಕ್ರಮಗಳಿಂದ ಧಕ್ಕೆ ಯಾಗಿದೆ ಎಂದು ಅವರು ಕಿಡಿಗಾರಿದರು.

ಪ್ರಧಾನಿ ಮೋದಿ, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈ ಅಕ್ರಮಗಳಿಗೆ ಕಾರಣ. ಸಿಬಿಎಸ್‌ಇ ಮಂಡಳಿ ಅಧ್ಯಕ್ಷ ಸ್ಥಾನ ಎರಡು ವರ್ಷ ಖಾಲಿ ಇದ್ದದ್ದು ಯಾಕೆ? ಅಕೌಂಟ್ಸ್, ಗಣಿತ, ಭೌತಶಾಸ್ತ್ರ, ಜೀವಶಾಸ್ತ್ರ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಯಾಗಿದ್ದು ಹೇಗೆ, ಈ ಅಕ್ರಮದ ರೂವಾರಿಗಳನ್ನು ಯಾಕೆ ಇನ್ನೂ ಬಂಧಿಸಿಲ್ಲ ಎಂದು ಅವರು ಪ್ರಶ್ನಿಸಿದರು.

ಪ್ರಶ್ನೆ ಪತ್ರಿಕೆಗಳ ಸೋರಿಕೆ ಪ್ರಕರಣದಿಂದ ಪ್ರಕಾಶ್ ಜಾವಡೇಕರ್‌ಗೆ ನಾಚಿಕೆ ಆಗಲಿಲ್ಲವೇ? ಯಾರನ್ನಾದರೂ ರಕ್ಷಿಸುವ ಉದ್ದೇಶ ನಿಮಗಿದೆಯೇ? ವಿದ್ಯಾರ್ಥಿಗಳ ಭವಿಷ್ಯಕ್ಕಿಂತಲೂ ಆರೋಪಿಗಳ ರಕ್ಷಣೆಯೇ ಬಿಜೆಪಿಯವರಿಗೆ ಹಚ್ಚಾಗಿದೆ. ಅಮಿತ್ ಶಾ ಹಲವು ಆರೋಪಗಳನ್ನು ಹೊಂದಿರುವ ಅರಸ ಎಂದು ರಣದೀಪ್ ಸಿಂಗ್ ವ್ಯಂಗ್ಯವಾಡಿದರು.

ಕೇಂದ್ರ ಸರಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಅವಕಾಶ ಕೊಡಲು ಬಿಜೆಪಿಗೆ ಭಯ. ಈಗಾಗಲೆ ಬಿಜೆಪಿ 10 ಲೋಕಸಭಾ ಕ್ಷೇತ್ರಗಳನ್ನು ಕಳೆದುಕೊಂಡಿದೆ. ನಾಲ್ಕು ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. ಉಳಿದ ಆರನ್ನು ಬೇರೆ ಪಕ್ಷಗಳು ಗೆದ್ದಿವೆ. ಎನ್‌ಡಿಎ ಮುಖ್ಯ ಅಂಗ ಪಕ್ಷಗಳಾದ ಟಿಡಿಪಿ, ಶಿವಸೇನೆ ಅವರಿಂದ ದೂರ ಆಗಿವೆ. ಬಿಜೆಡಿಯ ಸಹಾಯ ಕೂಡ ಅವರಿಗಲ್ಲ. ಆದುದರಿಂದ, ಭಯ ಆವರಿಸಿಕೊಂಡಿದೆ ಎಂದು ರಣದೀಪ್‌ಸಿಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News