ಓದುಗರ ಅಭಿರುಚಿಗನುಗುಣವಾಗಿ ಪುಸ್ತಕ ಬರೆಯಬೇಕು: ದೊಡ್ಡರಂಗೇಗೌಡ

Update: 2018-03-30 15:22 GMT

ಬೆಂಗಳೂರು, ಮಾ.30: ಈ ತಲೆಮಾರಿನವರು ಪುಸ್ತಕಗಳನ್ನು ರಸಿಕನಾಗಿ, ಆಕರ್ಷಿಣೀಯವಾಗಿ ಓದುಲು ಇಷ್ಟಪಡುತ್ತಾನೆ. ಹೀಗಾಗಿ, ಓದುಗರ ಅಭಿರುಚಿಗೆ ತಕ್ಕಂತೆ ಪುಸ್ತಕಗಳನ್ನು ಬರೆಯಬೇಕೆಂದು ಸಾಹಿತಿ ಡಾ.ದೊಡ್ಡರಂಗೇಗೌಡ ಸಲಹೆ ನೀಡಿದ್ದಾರೆ.

ಶುಕ್ರವಾರ ನಗರದ ಬಿ.ಪಿ ವಾಡಿಯಾ ಸಭಾಂಗಣದಲ್ಲಿ ಟೋಟಲ್ ಕನ್ನಡ ಪ್ರಕಾಶನ ಬಾಷಾ ಭಾವೈಕ್ಯ ಕಾವ್ಯ ಕವಿ ಕೂಟ ಸಹಕಾರದೊಂದಿಗೆ ಆಯೋಜಿಸಿದ್ದ ಲೇಖಕ ಶಾಂತಾರಾಮ ವಿ.ಶೆಟ್ಟಿ ಅವರ ‘ಸುಳ್ಳು ಹೇಳಿದ ಸತ್ಯ’ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕ್ಲಿಷ್ಟಕರ ಸಾಹಿತ್ಯದಿಂದ ಓದುಗರು ಪುಸ್ತಕಗಳಿಂದ ವಿಮುಖರಾಗುತ್ತಿದ್ದಾರೆ. ಹೀಗಾಗಿ ಓದುಗರ ಅಭಿರುಚಿಗೆ ತಕ್ಕಂತೆ ಪುಸ್ತಕಗಳನ್ನು ಬರೆಯಬೇಕು ಎಂದರು.

ಇಂದಿನ ಪೀಳಿಗೆ ಕ್ಲಿಷ್ಟಕರ ಕೃತಿಗಳನ್ನು ಓದಲು ಇಷ್ಟಪಡುವುದಿಲ್ಲ. ಓದುಗರನ್ನು ಹಿಡಿದಿಟ್ಟುಕೊಂಡು ಓದಿಸುವಂತ ಸಾಹಿತ್ಯವನ್ನು ಬೇಂದ್ರೆಯವರು ಬಳಸುತ್ತಿದ್ದರು. ಈ ಪರಂಪರೆಯನ್ನು ತಿನಂಶ್ರೀ, ಪಾ.ವೆಂ. ಆಚಾರ್ಯ, ಎಚ್.ಎಸ್.ಬಿಳಿಗಿರಿ, ವಿ.ಜಿ.ಭಟ್ ಮುಂದುವರೆಸಿದರು. ಲೇಖಕ ಶಾಂತಾರಾಮ ವಿ.ಶೆಟ್ಟಿ ಅವರ ಸುಳ್ಳು ಹೇಳಿದ ಸತ್ಯ ಈ ಕಾಲದ ಓದುಗರಿಗೆ ಓಯಸಿಸ್ ಆಗಿದೆ ಎಂದು ಅವರು ಹೇಳಿದರು.

ಸುಳ್ಳು ಹೇಳಿದ ಸತ್ಯ ಕೃತಿಯಲ್ಲಿ ಲೇಖಕರು ಆಡುಮಾತಿನ ಅನೇಕ ಅರ್ಥಗಳನ್ನು ತೆರೆದಿಟ್ಟಿದ್ದಾರೆ. ಈ ಕೃತಿಯು ನಾಟಕ, ರಂಗಭೂಮಿ, ಯಕ್ಷಗಾನದ ನೆರಳಿನಂತಿದೆ. ಕೃತಿಯಲ್ಲಿನ ವಿನೋಧಿಕ ಕಾವ್ಯಗಳು ಚಿಂತನಶೀಲವಾಗಿವೆ. ಇಲ್ಲಿ ಭಾವನತ್ಮಾಕವಾದ, ನಿರ್ಮಲವಾದ, ಸೂರ್ಯ ಮೂಡಿದ, ತಂಗಾಳಿ ಬೀಸಿದ ಹಾಗೆ ಕಾವ್ಯಗಳು ಮೂಡಿಬಂದಿವೆ. ಸಾರ್ವತ್ರಿಕ ಸತ್ಯಗಳನ್ನು ಹೇಳುವ ಮೂಲಕ ರೋಗಗ್ರಸ್ಥ ಸಮಾಜವನ್ನು ಜಾಗೃತಗೊಳಿಸಲು ಪ್ರಯತ್ನಪಟ್ಟಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ಮುಂಬೈ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ಪೂರ್ಣಿಮಾ ಶೆಟ್ಟಿ ಮಾತನಾಡಿ, ನವೀರಾದ ಹಾಸ್ಯ, ವ್ಯಂಗ್ಯನುಡಿಗಳಿಂದ ಲೇಖಕರು ಸಮಾಜವನ್ನು ಬಡಿದ್ದೆಬ್ಬಿಸಿದ್ದಾರೆ. ಕೃತಿಯಲ್ಲಿರುವ ವ್ಯಾಖ್ಯೆಗಳು ಸಾಗರದಿಂದ ಮುತ್ತುಗಳನ್ನು ಹೆಕ್ಕಿ ತಂದಂತಿವೆ. ಓದುಗರನ್ನು ಚಿಂತನೆಗೆ ಹಚ್ಚುವ ಕಾವ್ಯ ಕೃತಿಯಲ್ಲಿದೆ ಎಂದು ವರ್ಣಿಸಿದರು.

ನಿರ್ದೇಶಕ ಟಿ.ಎಸ್.ನಾಗಾಭರಣ ಮಾತನಾಡಿ, ಪರರಿಗಾಗಿ ಸ್ಪಂದಿಸುವಂತ ಸಾಹಿತ್ಯ ಅತ್ಯಂತ ಅದ್ಭುತವಾದದು. ಹೃದಯದಿಂದ ಹೃದಯಕ್ಕೆ ತಲುಪುವ ಭಾಷೆ ಸಾಹಿತ್ಯ. ಆದರೆ ಇತ್ತೀಚಿನ ಕಾವ್ಯಲೋಕ ಗೊಂದಲಕ್ಕೆ ಸಿಲುಕಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಡಾ.ದೊಡ್ಡರಂಗೇಗೌಡರನ್ನು ಅಭಿನಂದಿಸಿ ಗೌರವಿಸಲಾಯಿತು. ಚುಟುಕು ಕವಿ ಎಚ್.ಡುಂಡಿರಾಜ್, ಲೇಖಕ ವೈ.ವಿ.ಗುಂಡೂರಾವ್, ಕವಿ ಪೇತ್ರಿ ವಿಶ್ವನಾಥ್ ಶೆಟ್ಟಿ, ಕಲಾವಿದ ಮೋಹನ್ ಮಾರ್ನಾಡ್, ಲೇಖಕ ಶಾಂತಾರಾಮ್ ವಿ.ಶೆಟ್ಟಿ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News