ಓಲಾ-ಊಬರ್‌ಗಿಂತ ಶೇ.25ರಷ್ಟು ಕಡಿಮೆ ದರದಲ್ಲಿ ಪಬ್ಲಿಕ್ ಟ್ಯಾಕ್ಸಿ ಸೇವೆ ಆರಂಭ: ಬರಮೇಗೌಡ
ಬೆಂಗಳೂರು, ಮಾ.30: ಓಲಾ ಮತ್ತು ಊಬರ್‌ಗಿಂತ ಶೇ.25ರಷ್ಟು ಕಡಿಮೆ ದರದಲ್ಲಿ ಹೊಸದಾಗಿ ಆ್ಯಪ್ ಆಧಾರಿತ ಪಬ್ಲಿಕ್ ಟ್ಯಾಕ್ಸಿ ಜಾರಿಗೆ ಬಂದಿದ್ದು, ಹಿರಿಯ ನಾಗರಿಕರಿಗೆ ಮತ್ತು ಮಹಿಳೆಯರಿಗೆ ಶೇ.2ರಷ್ಟು ರಿಯಾಯಿತಿ ದರ, ಪ್ರಯಾಣಿಕರ ಸುರಕ್ಷತೆಗಾಗಿ ಪ್ಯಾನಿಕ್ ಬಟನ್, ಮೊದಲ ಮೂರು ರೈಡ್‌ಗಳಿಗೆ ಶೇ.15ರಷ್ಟು ರಿಯಾಯಿತಿ, ನಗದು ರಹಿತ ಶೇ.2ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಆ್ಯಪ್ ಆಧಾರಿತ ಪಬ್ಲಿಕ್ ಟ್ಯಾಕ್ಸಿ ಆರಂಭಿಸಿರುವ ಬರಮೇಗೌಡ ಮತ್ತು ರಘು ಜಂಟಿಯಾಗಿ ಹೇಳಿದ್ದಾರೆ.
ಶುಕ್ರವಾರ ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪಬ್ಲಿಕ್ ಟ್ಯಾಕ್ಸಿ ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡಿದ್ದು, ಓಲಾ ಮತ್ತು ಊಬರ್ ಕ್ಯಾಬ್‌ಗಳ ಚಾಲಕರಾಗಿ ಐದು ವರ್ಷ ಶ್ರಮಪಟ್ಟಿದ್ದೇವೆ. ಹಾಗೆಯೇ ಇದೇ ಅನುಭವದ ಆಧಾರದ ಮೇಲೆ ಪಬ್ಲಿಕ್ ಟ್ಯಾಕ್ಸಿ(ಕ್ಯಾಬ್ ಮತ್ತು ಆಟೋ)ಯನ್ನು ಜಾರಿಗೆ ತಂದಿದ್ದೇವೆ ಎಂದು ತಿಳಿಸಿದರು.
ಬಹುರಾಷ್ಟ್ರೀಯ ಓಲಾ, ಊಬರ್ ಆ್ಯಪ್ ಆಧಾರಿತ ಕ್ಯಾಬ್‌ಗಳ ಸೇವೆ ಬಹುತೇಕ ಸಂದರ್ಭಗಳಲ್ಲಿ ಲಭ್ಯತೆಯಿರುವುದಿಲ್ಲ. ಅಲ್ಲದೆ, ಹೆಚ್ಚಿನ ದರ, ಚಾಲಕರ ಒರಟು ವರ್ತನೆಯಿಂದ ಪ್ರಯಾಣಿಕರು ಬೇಸತ್ತಿದ್ದಾರೆ. ಹೀಗಾಗಿ, ಈ ಎಲ್ಲ ಸಮಸ್ಯೆಗಳನ್ನು ಹೋಗಲಾಡಿಸಲು ಪಬ್ಲಿಕ್ ಟ್ಯಾಕ್ಸಿಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಪಬ್ಲಿಕ್ ಟ್ಯಾಕ್ಸಿ ಯುವ ಆಡಿಟರ್ ವಾಸು ಉಪಸ್ಥಿತರಿದ್ದರು.