ಬಿಜೆಪಿಯವರು ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸಬೇಕು: ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್
ಬೆಂಗಳೂರು, ಮಾ. 30: ಆರು ತಿಂಗಳಿಂದ ಎಸ್‌ಡಿಪಿಐ, ಪಿಎಫ್‌ಐ ವಿರುದ್ಧ ಬಿಜೆಪಿ ನಾಯಕರು ಸುಳ್ಳು ಆರೋಪದ ಮೂಲಕ ಕೋಮು ರಾಜಕಾರಣ ಮಾಡುತ್ತಿದ್ದು, ದ್ವೇಷದ ಹೇಳಿಕೆ ನೀಡುವುದು ಸರಿಯಲ್ಲ ಎಂದು ಎಸ್‌ಡಿಪಿಐ ರಾಜಾಧ್ಯಕ್ಷ ಅಬ್ದುಲ್ ಹನ್ನಾನ್ ಆಕ್ಷೇಪಿಸಿದ್ದಾರೆ.
ರಾಜಕೀಯ ಲಾಭಕ್ಕಾಗಿ ಕೋಮುಗಲಭೆ ಸೃಷ್ಟಿಸಿಲು ಉದ್ರೇಕಕಾರಿ ಹೇಳಿಕೆಗಳನ್ನು ನೀಡುತ್ತಿದೆ. ಇತ್ತೀಚೆಗೆ ಬಿಜೆಪಿ ಅಧ್ಯಕ್ಷ ಮತ್ತೊಮ್ಮೆ ಎಸ್‌ಡಿಪಿಐ ಮತ್ತು ಪಿಎಫ್‌ಐ ವಿರುದ್ದ ಸುಳ್ಳು ಆರೋಪ ಮಾಡಿದ್ದಾರೆ. ನಮ್ಮ ಕಾರ್ಯಕರ್ತರು, ನಾಯಕರು ಹಿಂದೂ, ಮುಸ್ಲಿಂ, ಕ್ರೈಸ್ತ ಸಮುದಾಯಕ್ಕೆ ಸೇರಿದವರಾಗಿದ್ದು, ಪಕ್ಷದ ಎಲ್ಲ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಇದು ಯಾವುದೇ ಸಮುದಾಯಕ್ಕೆ ಸೀಮಿತವಾದ ಪಕ್ಷವಲ್ಲ ಎಂದು ಸ್ಪಷ್ಟಣೆ ನೀಡಿದ್ದಾರೆ.
ಎಸ್‌ಡಿಪಿಐ ಜಾತ್ಯತೀತ ಸಿದ್ಧಾಂತದ ಅನುಷ್ಠಾನ ಮತ್ತು ಕೋಮು ಸೌಹಾರ್ದತೆಗೆ ನಿರಂತರವಾಗಿ ಹೋರಾಡುತ್ತಿದೆ. ದೇಶದ ಎಲ್ಲ ಜಾತಿ-ಧರ್ಮದ ಜನರು ತಂಡೋಪ ತಂಡವಾಗಿ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಕೇರಳ ಸರಕಾರ ಪಿಎಫ್‌ಐ ನಿಷೇಧಿಸಬೇಕೆಂದು ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದೆ ಎಂಬ ಮತ್ತೊಂದು ಹಸಿ ಸುಳ್ಳನ್ನು ಅಮಿತ್ ಶಾ ಹೇಳಿದ್ದಾರೆಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಕೇರಳದ ಹಿರಿಯ ಪೋಲಿಸ್ ಅಧಿಕಾರಿಗಳು ಮತ್ತು ಸ್ವತಃ ಅಲ್ಲಿನ ಸಿಎಂ, ಪಿಎಫ್‌ಐ ನಿಷೇಧಿಸುವ ಯಾವುದೇ ಪ್ರಾಸ್ತಾವನೆಯನ್ನು ಕೇಂದ್ರಕ್ಕೆ ಸಲ್ಲಿಸಿಲ್ಲ ಮತ್ತು ಯಾವುದೇ ಸಂಘಟನೆಗಳನ್ನು ನಿಷೇಧಿಸುವ ಅವಶ್ಯಕತೆ ಇಲ್ಲ ಎಂದು ಅವರು ತಿಳಿಸಿದ್ದಾರೆ. ಗುಜರಾತಿನಿಂದ ಗಡಿಪಾರಾಗಿದ್ದ ಮತ್ತು ಕೊಲೆ ಆರೋಪದಲ್ಲಿ ಜೈಲು ಶಿಕ್ಷೆ ಅನುಭಸಿದ ಅಮಿತ್ ಶಾ ಪದೇ ಪದೇ ವಿವಾದಿತ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಕರ್ನಾಟಕದ ಶಾಂತಿಪ್ರಿಯ ರಾಜ್ಯ. ಇಲ್ಲಿ ಹಿಂದೂ-ಮುಸ್ಲಿಮರು ಒಗ್ಗಟ್ಟಾಗಿದ್ದು, ಬಿಜೆಪಿ ಮುಖಂಡರ ಹೇಳಿಕೆಗೆ ಸೊಪ್ಪು ಹಾಕುವುದಿಲ್ಲ ಎಂದಿರುವ ಅವರು, ಈ ಬಾರಿಯ ಚುನಾವಣೆ ಅಭಿವೃದ್ದಿ, ಸೌಹಾರ್ದತೆ, ಸುಭದ್ರ ಕರ್ನಾಟಕದ ವಿಷಯದಲ್ಲಿ ನಡೆಯಬೇಕು. ಧರ್ಮ-ಜಾತಿಯ ಹೆಸರಲ್ಲಿ ಜನರ ಮನಸ್ಸನ್ನು ಒಡೆಯುವವರಿಗೆ ತಕ್ಕ ಪಾಠ ಕಲಿಸಬೇಕೆಂದು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.