ಬೆಂಗಳೂರು: ಚಾಕುವಿನಿಂದ ಇರಿದು ಅಪರಿಚಿತ ವ್ಯಕ್ತಿಯ ಕೊಲೆ
ಬೆಂಗಳೂರು,ಮಾ.30: ರಾಮನಗರದ ಕೆಂಜಿಗರಹಳ್ಳಿ ಹೊರವಲಯದ ಅರಣ್ಯ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಗೆ ಚಾಕುವಿನಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಲೆಗೈದಿರುವ ದುರ್ಘಟನೆ ಗುರುವಾರ ರಾತ್ರಿ ನಡೆದಿದೆ.
ಕೊಲೆಯಾದ ವ್ಯಕ್ತಿಯು ಲಾರಿ ಚಾಲಕನಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಮೃತನ ಹೆಸರು ವಿಳಾಸ ಪತ್ತೆಯಾಗಿಲ್ಲ. ಲಾರಿ ಚಾಲಕನನ್ನು ದುಷ್ಕರ್ಮಿಗಳು ಕೆಂಜಿಗರಹಳ್ಳಿ ಹೊರವಲಯದ ಅರಣ್ಯ ಪ್ರದೇಶಕ್ಕೆ ಕರೆತಂದು ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಆತನನ್ನು ನೋಡಿದ ಸ್ಥಳೀಯರು ಆ್ಯಂಬುಲೆನ್ಸ್ ಮೂಲಕ ರಾಮನಗರ ಜಿಲ್ಲಾ ಸರಕಾರಿ ಆಸ್ಪತ್ರೆಗೆ ತಕ್ಷಣ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮತಪಟ್ಟಿದ್ದಾನೆ.
ಡಿವೈಎಸ್ಪಿ ತಮ್ಮಯ್ಯ, ಪಿಎಸ್‌ಐ ದೀಪಕ್ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ. ಕೊಲೆ ಮಾಡಿರುವ ಸ್ಥಳಕ್ಕೆ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆದಿದೆ. ಹಾಗೂ ಕೊಲೆಯಾದ ಸ್ಥಳದಲ್ಲಿ ಕೃತ್ಯಕ್ಕೆ ಬಳಸಿದ್ದ ಚಾಕು ಸಿಕ್ಕಿದೆ ಎಂದು ತಿಳಿದುಬಂದಿದೆ.