ಅಂಬೇಡ್ಕರ್ ಹೆಸರು ಬದಲಾವಣೆ ರಾಜಕೀಯ ಪ್ರೇರಿತ: ಬಾಬಾ ಸಾಹೇಬರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್
ಬೆಂಗಳೂರು, ಮಾ.30: ಡಾ ಬಿ.ಆರ್.ಅಂಬೇಡ್ಕರ್ ಅವರ ಹೆಸರನ್ನು ‘ಭೀಮ್‌ರಾವ್ ರಾಮ್‌ಜಿ ಅಂಬೇಡ್ಕರ್’ ಎಂದು ಎಲ್ಲಾ ಸರಕಾರಿ ಕಚೇರಿಗಳಲ್ಲಿ ಹಾಗೂ ಹೈಕೋರ್ಟ್ ಪೀಠದ ದಾಖಲೆಗಳಲ್ಲಿ ಉಲ್ಲೇಖಿಸಬೇಕು ಎಂಬ ಉತ್ತರಪ್ರದೇಶ ಸರಕಾರದ ಆದೇಶ ರಾಜಕೀಯ ಪ್ರೇರಿತವಾಗಿದೆ ಎಂದು ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ.
ಅಂಬೇಡ್ಕರ್ ಅವರ ಹೆಸರು ಬದಲಿಸುವ ಬಿಜೆಪಿ ಹಾಗೂ ಆರೆಸ್ಸೆಸ್‌ನ ನಿರ್ಧಾರ ಸಮರ್ಥನೀಯವಲ್ಲ. ಕೇವಲ ರಾಜಕೀಯ ಲಾಭ ಪಡೆಯಲು ಅವರು ಹೀಗೆ ಮಾಡುತ್ತಿದ್ದಾರೆ. ಅಂಬೇಡ್ಕರ್ ಅವರ ಹೆಸರನ್ನು ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಬಾಬಾಸಾಹೇಬ್ ಎಂಬ ಉಲ್ಲೇಖದೊಂದಿಗೆ ಉಚ್ಚರಿಸಲಾಗುತ್ತದೆ. ಉತ್ತರ ಭಾರತದಲ್ಲಿ ಬಾಬಾ ಭೀಮರಾವ್ ಎಂದು ಉಲ್ಲೇಖಿಸಲಾಗುತ್ತದೆ. ಹಾಗಿರುವಾಗ ರಾಮ್‌ಜಿ ಹೆಸರನ್ನು ಸೇರಿಸಲು ಉತ್ತರ ಪ್ರದೇಶದ ಬಿಜೆಪಿ ಸರಕಾರ ಆದೇಶಿಸಿರುವುದು ತಪ್ಪು ನಿರ್ಧಾರ ಎಂದು ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ.
ಎಲ್ಲಾ ಸರಕಾರಿ ದಾಖಲೆಪತ್ರಗಳಲ್ಲಿ ಭೀಮ್‌ರಾವ್ ರಾಮ್‌ಜಿ ಅಂಬೇಡ್ಕರ್ ಎಂದು ಉಲ್ಲೇಖಿಸಬೇಕೆಂದು ಉತ್ತರಪ್ರದೇಶ ಸರಕಾರ ಮಾ.29ರಂದು ಆದೇಶ ಹೊರಡಿಸಿದೆ. ಅಂಬೇಡ್ಕರ್ ಹೆಸರಿನ ಎದುರು ‘ರಾಮ್’ ಎಂಬ ಪದ ಸೇರಿಸಬೇಕೆಂದು ಉತ್ತರಪ್ರದೇಶದ ರಾಜ್ಯಪಾಲ ರಾಮ್ ನಾಯ್ಕ್ 2017ರ ಡಿಸೆಂಬರ್‌ನಿಂದಲೂ ಆಗ್ರಹಿಸುತ್ತಾ ಬಂದಿದ್ದು, ಈ ಬಗ್ಗೆ ಪ್ರಧಾನಿ ಮೋದಿಗೂ ಪತ್ರ ಬರೆದಿದ್ದರು. ಇದೀಗ ಹೆಸರು ಬದಲಾವಣೆಗೆ ರಾಮ್ ನಾಯ್ಕ್ ಸಲಹೆ ಪ್ರಮುಖ ಕಾರಣವಾಗಿದೆ ಎನ್ನಲಾಗುತ್ತಿದೆ. ಉತ್ತರಪ್ರದೇಶ ಸರಕಾರದ ನಿರ್ಧಾರ ಕೇವಲ ಪ್ರಚಾರದ ಸ್ಟಂಟ್ ಆಗಿದೆ ಎಂದು ಬಿಎಸ್ಪಿ ನಾಯಕಿ ಮಾಯಾವತಿ ಟೀಕಿಸಿದ್ದಾರೆ.