'ಮಾಸ್ಟೀಕರು' ಭಿಕ್ಷಾಟನೆಯನ್ನೇ ಹಕ್ಕಾಗಿ ಪಡೆದವರು!

Update: 2018-03-31 12:55 GMT

‘ನಮ್ಮ ಪೂರ್ವಜರು ರಾಜರಿಂದ ಹಕ್ಕಿನ ಭಿಕ್ಷೆ ಪಡೆಯುವ ಬದಲು ಸಾಮ್ರಾಜ್ಯಗಳ ವರವನ್ನು ಪಡೆದಿದ್ದರೆ, ನಾವು ಬೇರೆಲ್ಲರಿಗಿಂತ ಉನ್ನತ ಮಟ್ಟದ ಜೀವನವನ್ನು ನಡೆಸುತ್ತಿದ್ದೆವು’ ಎಂದು ನಿಡುಸುಯ್ಯುತ್ತಾರೆ ಮಾಸ್ಟೀಕರು. ಕಳೆದ ಕೇವಲ ಒಂದು ದಶಕದ ಅವಧಿಯಲ್ಲಿ ಅವರ ಅಲೆಮಾರಿ ಬದುಕಿನಲ್ಲಿ ಆಗಿರುವ ಆರ್ಥಿಕ ಸಂಕ್ರಮಣವನ್ನು ನೋಡಿದಾಗ ಅವರ ಮಾತು ದಿಟವೆನಿಸದೆ ಇರದು.

ನಾನಾಗ ಸುಮಾರು 5 ವರ್ಷದ ಹುಡುಗನಾಗಿದ್ದೆ. ನಮ್ಮ ಮಾದಿಗರ ಕೇರಿಯ ಹಿಂಬದಿಯಲ್ಲಿ ನರಸಿಂಹಯ್ಯ ಎಂಬ ಗೊಲ್ಲರ ವ್ಯಕ್ತಿಗೆ ಸೇರಿದ್ದ ಹೊಲವಿತ್ತು. ಆ ಹೊಲದಲ್ಲಿ ವರ್ಷಕ್ಕೊಂದಾವರ್ತಿ ದಕ್ಕಲರು ತಮ್ಮ ಕತ್ತೆ, ಡೇರೆ, ಪಾತ್ರೆ-ಪಡಗಗಳೊಂದಿಗೆ ಬಿಡಾರ ಹೂಡುತ್ತಿದ್ದರು. ಹಾಗೂ ಅವರು ಎಂದೂ ನಮ್ಮ ಕೇರಿಯನ್ನು ಪ್ರವೇಶಿಸುತ್ತಿರಲಿಲ್ಲ. ಬದಲಿಗೆ, ಅವರು ಬಂದಿರುವುದನ್ನು ಕೂಗು ಹಾಕುವ ಮೂಲಕ ನಮ್ಮ ಕೇರಿಗೆ ಮುಟ್ಟಿಸುತ್ತಿದ್ದರು. ಆಗ ಊರ ಕೆಲ ಹಿರಿಯರು ಬೆಳಗ್ಗೆ ಮತ್ತು ರಾತ್ರಿ ಇಡೀ ಕೇರಿಯಿಂದ ಊಟ ಸಂಗ್ರಹಿಸಿ, ಅವರು ಬಿಡಾರ ಹೂಡಿದ್ದ ಹೊಲಕ್ಕೆ ಹೋಗಿ ಅದನ್ನು ಒಪ್ಪಿಸಿ ಬರುತ್ತಿದ್ದರು. ಸರಿಸುಮಾರು 15 ದಿನಗಳ ಕಾಲ ಬಿಡಾರ ಹೂಡುತ್ತಿದ್ದ ಅವರಿಗೆ ಅವರು ಹೊರಡುವ ಕೊನೆಯ ದಿನ ಊರ ಪ್ರಮುಖರು ತಲಾ ಮನೆಗೆ ಇಂತಿಷ್ಟು ಹಣವೆಂದು ಸಂಗ್ರಹಿಸಿ ಕೊಟ್ಟು ಕಳಿಸುತ್ತಿದ್ದರು. ವಾಸ್ತವವಾಗಿ ಅವರು ನಮ್ಮ ಮಾದಿಗರ ಪಾಲಿಗೆ ಅಸ್ಪಶ್ಯರು ಎಂದು ಅರ್ಥವಾಗಲು ತೊಡಗಿದ್ದು ನಾನು ಭಾರತೀಯ ಶ್ರೇಣೀಕೃತ ಸಮಾಜವನ್ನು ಕಾಲೇಜು ಹಂತದಲ್ಲಿ ಗ್ರಹಿಸಲು ಆರಂಭಿಸಿದ ಮೇಲೆಯೇ.

ಆದರೆ, ದಕ್ಕಲರಿಗಿಂತ ನನಗೆ ಹೆಚ್ಚು ಕುತೂಹಲ ಹುಟ್ಟಿಸುತ್ತಿದ್ದದ್ದು ‘ಮಾಸ್ತಿ’ ಅಥವಾ ‘ಮಾಸ್ಟೀಕರು ಎಂದು ಕರೆಸಿಕೊಳ್ಳುವ ಸಮುದಾಯಕ್ಕೆ ಸೇರಿದ್ದ ವ್ಯಕ್ತಿಗಳು. ಅವರು ನೇರಾ ನಮ್ಮ ಕೇರಿಗೇ ಪ್ರವೇಶಿಸುತ್ತಿದ್ದರಲ್ಲದೆ, ನಮ್ಮ ಕೇರಿ ಮಧ್ಯದಲ್ಲಿದ್ದ ದೊಡ್ಡಮ್ಮ ಗುಡಿಯ ಮುಂದೆ ಬೀಡು ಬಿಡುತ್ತಿದ್ದರು. ಅವರು ಕೂಡಾ ಬೆಳಗ್ಗೆ ಮತ್ತು ಸಂಜೆ ನಮ್ಮ ಕೇರಿಯ ಜನರಿಂದ ಆಹಾರವನ್ನು ಬೇಡಿ ಪಡೆಯುತ್ತಿದ್ದರು. ಸುಮಾರು 15ರಿಂದ 20 ದಿನಗಳ ಕಾಲ ಅಲ್ಲಿ ಬೀಡು ಬಿಡುತ್ತಿದ್ದ ಈ ಮಂದಿ, ತಮ್ಮ ಇರುವಿನ ಅವಧಿಯಲ್ಲಿ ಸಂಜೆ ಹೊತ್ತು ಹಾಡು, ನೃತ್ಯ, ಗಾರುಡಿ ಹಾಗೂ ಸಣ್ಣಪುಟ್ಟ ಸರ್ಕಸ್‌ಗಳನ್ನು ಮಾಡಿ ತೋರಿಸುತ್ತಿದ್ದರು. ಬೆಳಗ್ಗಿನ ಹೊತ್ತು ಬಾಚಣಿಗೆ, ಸೀರಣಿಗೆ, ನವಿಲು, ಹಂಸ ಮುಂತಾದ ಕಲಾಕೃತಿಗಳನ್ನು ಹಸುವಿನ ಕೊಂಬಿನಿಂದ ಸುಂದರವಾಗಿ ಕೆತ್ತನೆ ಮಾಡುತ್ತಿದ್ದರು. ಅವರು ಅಲ್ಲಿ ಬಿಡಾರ ಹೂಡಿರುವಷ್ಟೂ ದಿನ ಅಂತಹ ತಮ್ಮ ಕುಸುರಿ ಕಲಾಕೃತಿಗಳನ್ನು ನಮ್ಮ ಕೇರಿಯಲ್ಲಿ ಮಾರಾಟ ಮಾಡುತ್ತಿದ್ದರು. ಕೊನೆಗೊಂದು ದಿನ ದಕ್ಕಲರಂತೆಯೇ ನಮ್ಮ ಕೇರಿಯ ಜನರ ಬಳಿ ದುಡ್ಡು ವಸೂಲಿ ಮಾಡಿಕೊಂಡು ಕೇರಿ ಬಿಟ್ಟು ತೆರಳುತ್ತಿದ್ದರು.

ಆದರೆ, ಇದೆಲ್ಲಕ್ಕಿಂತ ಸೋಜಿಗ ಹುಟ್ಟಿಸುತ್ತಿದ್ದದ್ದು ದಕ್ಕಲರನ್ನು ಊರ ಹೊರಗೆ ಇರಿಸುತ್ತಿದ್ದ ಮಾದಿಗರ ಕೇರಿಯ ಜನ, ಅದೇ ಮಾಸ್ಟೀಕರ ಮಂದಿಯನ್ನು ತಮ್ಮ ಮನೆಯೊಳಗೆ ಬಿಟ್ಟುಕೊಂಡು ಅವರ ಕುಶಲೋಪರಿಯನ್ನೆಲ್ಲ ವಿಚಾರಿಸಿಕೊಳ್ಳುತ್ತಿದ್ದದ್ದು. ಒಂದು ದಿನ ನಮ್ಮ ತಾಯಿ ಹೀಗೆಯೇ ತಮ್ಮ ಮಾಸ್ಟೀಕರ ಗೆಳತಿಯೊಂದಿಗೆ ಉಭಯ ಕುಶಲೋಪರಿಯಲ್ಲಿ ತೊಡಗಿದ್ದರು. ಅವರು ತೆರಳಿದ ನಂತರ ನಾನು, ‘ದಕ್ಕಲರನ್ನು ಊರ ಹೊರಗೆ ಇರಿಸುವುದಕ್ಕೂ, ಮಾಸ್ಟೀಕರನ್ನು ಮನೆಯೊಳಕ್ಕೆ ಬಿಟ್ಟುಕೊಳ್ಳುವುದಕ್ಕೂ ಏನು ಕಾರಣ?’ ಎಂದು ಮುಗ್ಧವಾಗಿ ಪ್ರಶ್ನಿಸಿದ್ದೆ. ಆಗ ನನ್ನ ತಾಯಿ, ‘ದಕ್ಕಲರು ಜಾತಿಭ್ರಷ್ಟರೆಂದೂ, ಮಾಸ್ಟೀಕರು ನಮ್ಮ ಸೋದರ ಸಂಬಂಧಿಗಳು’ ಎಂದೂ ಹೇಳಿದ ಅಸ್ಪಷ್ಟ ನೆನಪು. ಮಾಸ್ಟೀಕರಲ್ಲಿ ಮಾದಿಗ ಮಾಸ್ಟೀಕರು ಹಾಗೂ ಹೊಲೆಯ ಮಾಸ್ಟೀಕರು ಎಂಬ ಎರಡು ಜಾತಿಗಳಿವೆ. ಮಾದಿಗ ಮಾಸ್ಟೀಕರು ಪೌರಾಣಿಕವಾಗಿ ಜಾಂಬುವ ತಾತನ ಸಂತಾನವಾಗಿಯೂ, ಚಾರಿತ್ರಿಕವಾಗಿ ಕುಸ್ತಿಪಟುಗಳೂ ಆಗಿದ್ದು, ತಮ್ಮ ನಿರಂತರ ಅಲೆಮಾರಿತನದಿಂದ ವರ್ತಮಾನದಲ್ಲಿ ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿ ಮಾತ್ರ ಉಳಿದಿದ್ದು, ಸಾಮಾಜಿಕ ಸವಲತ್ತು, ಅಸ್ಮಿತೆ, ಗೌರವದಿಂದ ವಂಚಿತಗೊಂಡು ಈ ಕ್ಷಣಕ್ಕೂ ಊರ ಹೊರಗೆ ತನ್ನ ನೆಲೆಯನ್ನು ಕಟ್ಟಿಕೊಂಡಿದ್ದಾರೆೆ. ಕೆಲವು ಕುಟುಂಬಗಳು ತಮ್ಮ ಅಲೆಮಾರಿತನದಿಂದ ಸಂಪೂರ್ಣವಾಗಿ ವಿಮುಖವಾಗಿ ಒಂದು ಕಡೆ ನೆಲೆ ನಿಂತಿದ್ದರೂ, ಚಿಂತಾಮಣಿ, ಮಾಲೂರು, ಕೋಲಾರಗಳಲ್ಲಿ ಈ ಕ್ಷಣಕ್ಕೂ ಕೋಲಾರ-ಆಂಧ್ರದ ಗಡಿಭಾಗಗಳಲ್ಲಿ ನಿರಂತರವಾಗಿ ಅಲೆಯುವ ಸಮುದಾಯವಾಗಿಯೇ ಉಳಿದುಕೊಂಡಿದೆ. ಇನ್ನು ಹೊಲೆಯ ಅಥವಾ ಮಾಲ ಮಾಸ್ಟೀಕರು ಪೌರಾಣಿಕವಾಗಿ ಪಾರ್ವತಿಯ ಸಂತಾನವೂ, ಚಾರಿತ್ರಿಕವಾಗಿ ಭಾಗಶಃ ಕುಸ್ತಿಪಟುಗಳು ಹಾಗೂ ಪೂರ್ಣಾವಧಿ ಮಾವುತರೂ ಆಗಿದ್ದು, ಅವರು ಕೂಡಾ ತಮ್ಮ ನಿರಂತರ ಅಲೆಮಾರಿತನದಿಂದ ಬಹುತೇಕ ತಮ್ಮ ಜಾತಿ ಅಸ್ಮಿತೆಯನ್ನು ಕಳೆದುಕೊಂಡಿದ್ದಾರೆ ಇಲ್ಲವೆ ತಾವು ಬಿಡಾರ ಹೂಡುವ ಪ್ರದೇಶಗಳಲ್ಲಿನ ಪ್ರಮುಖ ಪರಿಶಿಷ್ಟ ಜಾತಿಗಳನ್ನೇ ತಮ್ಮ ಜಾತಿಯೆಂದು ಜಾತಿಪಟ್ಟಿಗಳಲ್ಲಿ ನಮೂದಿಸಿಕೊಂಡು, ತಮ್ಮ ಹಿಂದಿನ ಜಾತಿಸೂಚಕಗಳಿಂದ ಸಂಪೂರ್ಣವಾಗಿ ಹೊರಬಂದಿದ್ದಾರೆ. ಈ ಹೊತ್ತಿಗೂ ಮಾದಿಗ ಮಾಸ್ಟೀಕರು ತಮ್ಮ ಸಾಂಸ್ಕೃತಿಕ ಬೇರುಗಳ ಕುರಿತು ಮಾತು ಶುರು ಮಾಡುವುದೇ ಕಂಚಿ ಕಾಮಾಕ್ಷಿಯ ತೇರನ್ನೆಳೆದ ಹನುಮಂತರಾವು, ತೇರಿಗೆ ‘ಬಲಿ’ಯಾದ ಆತನ ಗರ್ಭಿಣಿ ಪತ್ನಿಯ ಐತಿಹ್ಯದೊಂದಿಗೆ. ಶಾಕ್ತ್ಯ ಪಂಥಗಳಲ್ಲಿ ‘ಬಲಿ’ ಪ್ರಧಾನ ಅಂಶವಾಗಿದ್ದು, ಅದು ನರಬಲಿಯಿಂದ ಪ್ರಾಣಿಬಲಿಯವರೆಗೂ ವ್ಯಾಪಿಸಿಕೊಂಡಿದೆ. ತಾಂತ್ರಿಕ ವಿದ್ಯೆ ಎಂದೇ ಕರೆಸಿಕೊಂಡಿರುವ ಮಾಟ-ಮಂತ್ರಗಳಲ್ಲಿ ಈ ಕ್ಷಣಕ್ಕೂ ನರಬಲಿ, ಪ್ರಾಣಿಬಲಿ, ಶವಪೂಜೆ ಇರುವುದನ್ನು ನಾವಿಂದಿಗೂ ಕಾಣಬಹುದು. ಶವಪೂಜೆಯಲ್ಲಿ ಸತ್ತ ವ್ಯಕ್ತಿಯ ಆತ್ಮದೊಂದಿಗೆ ಮಾಂತ್ರಿಕ ಸಂವಾದಿಸುತ್ತಾನೆ ಎಂಬ ನಂಬಿಕೆಯೂ ನಮ್ಮ ಸಮಾಜದಲ್ಲಿ ಬಲವಾಗಿ ಬೇರುಬಿಟ್ಟಿದೆ. ಅಧೋಪ್ರಪಂಚದ ಆಚರಣೆಗಳೆಂದೇ ಕುಪ್ರಸಿದ್ಧವಾಗಿರುವ ಈ ತಾಂತ್ರಿಕ ಪಂಥಗಳಲ್ಲಿ ಮೈಥುನ, ಮದ್ಯಪಾನ, ಬಲಿ ಅತ್ಯಂತ ಸಾಮಾನ್ಯ ಸಂಗತಿ. ಅಗೋಚರ ಶಕ್ತಿಯ ವಶೀಕರಣಕ್ಕೆ ಇವೆಲ್ಲ ಸಹಕಾರಿ ಎಂಬ ನಂಬಿಕೆ ತಾಂತ್ರಿಕ ಪಂಥ ಹಾಗೂ ಶಾಕ್ತ್ಯಪಂಥಗಳಲ್ಲಿ ಹಾಸುಹೊಕ್ಕಾಗಿದೆ. ಇಂತಹ ಯಾವುದೋ ಶಾಕ್ತ್ಯಪಂಥದ ಸೆಳೆತ ಸಿಕ್ಕು ಕೆಲವು ಸಮುದಾಯಗಳು ತಮ್ಮ ಮೂಲ ಕುಲಗಳಿಂದ ದೂರೀಕರಿಸಲ್ಪಟ್ಟು ಉಪಜಾತಿಗಳಾಗಿ ರೂಪಾಂತರ ಹೊಂದಿದಂತಿದೆ ಎಂದು ಲಕ್ಷ್ಮೀಪತಿ ಕೋಲಾರ ಅವರು ತಮ್ಮ ‘ಮಾಸ್ಟೀಕರ ಸಂಸ್ಕೃತಿ’ ಎಂಬ ಸಂಶೋಧನಾ ಕೃತಿಯಲ್ಲಿ ಅಭಿಪ್ರಾಯಪಡುತ್ತಾರೆ. ಮಾಸ್ಟೀಕರ ಚೂಲಮೂಲಗಳನ್ನು ಹುಡುಕಹೊರಟಾಗ ಅವರ ಅನಿಸಿಕೆಯಲ್ಲಿ ತಥ್ಯವಿರುವಂತೆ ಭಾಸವಾಗುತ್ತದೆ.

ಮೂಲತಃ ಅಲೆಮಾರಿಗಳಾದ ಮಾಸ್ಟೀಕರ ಜನಸಂಖ್ಯೆ ಅತಿಸೂಕ್ಷ್ಮವೆನ್ನಬಹುದಾದ (Microscopic) ಆಘಾತಕಾರಿ ಸ್ಥಿತಿಯನ್ನು ತಲುಪಿದೆ. ದೊಡ್ಡಬಳ್ಳಾಪುರದ ಕೋಳೂರು, ಬೆಂಗಳೂರಿನ ಉತ್ತರಹಳ್ಳಿ, ಚಿಂತಾಮಣಿ, ಬೇಲೂರು, ಕಡೂರುಗಳಲ್ಲಿ ಸುಮಾರು 250ರಿಂದ 300 ಮಂದಿಯ ಕುಟುಂಬಗಳು ವಾಸವಾಗಿವೆ. ಉತ್ತರ ಕರ್ನಾಟಕದ ಚಿತ್ರದುರ್ಗ, ಬಳ್ಳಾರಿ, ಚಾಮರಾಜನಗರದ ಮಲೆಮಹದೇಶ್ವರ ಬೆಟ್ಟದಲ್ಲೂ ಬೆರಳೆಣಿಕೆಯ ಕುಟುಂಬಗಳು ವಾಸವಾಗಿವೆ ಎಂದೂ ಹೇಳಲಾಗುತ್ತದೆ. ವರ್ತಮಾನದ ಸಂದರ್ಭದಲ್ಲಿ ಮಾಸ್ಟೀಕರ ಆರ್ಥಿಕ ಪರಿಸ್ಥಿತಿ ತಕ್ಕಮಟ್ಟಿಗೆ ಸುಧಾರಿಸಿದಂತೆ ಕಂಡುಬಂದರೂ, ಅವರಿನ್ನೂ ತಮ್ಮ ಅನಿಶ್ಚಿತ ಬದುಕಿನಿಂದ ಹೊರಬಾರದಿರುವುದು ನಿಜಕ್ಕೂ ಖೇದಕರ.

ಈ ಕ್ಷಣಕ್ಕೂ ಮಾಸ್ಟೀಕ ಸಮುದಾಯ ಅಲೆಮಾರಿ ಬದುಕನ್ನೇ ಒಪ್ಪಿಕೊಂಡಿದ್ದರೂ, ಹಕ್ಕಿನ ಭಿಕ್ಷಾಟನೆಯನ್ನು ಸಂಪೂರ್ಣವಾಗಿ ತ್ಯಜಿಸಿವೆ. ಬದಲಿಗೆ ಬಡಗಿ ವೃತ್ತಿಯನ್ನು ರೂಢಿಸಿಕೊಂಡಿರುವ ಈ ಕುಟುಂಬಗಳು, ಅದರಿಂದ ಕುರ್ಚಿ, ಮೇಜು, ಟೀಪಾಯಿ ಇತ್ಯಾದಿಗಳನ್ನು ತಯಾರಿಸಿ, ನಗರಗಳಲ್ಲಿ ಮಾರಾಟ ಮಾಡುತ್ತವೆ. ಬಂದ ಹಣದಲ್ಲಿ ತಮ್ಮ ಕುಟುಂಬದ ದೈನಂದಿನ ನಿರ್ವಹಣೆಯನ್ನು ನಡೆಸುತ್ತಿವೆ. ತಮ್ಮ ಕಸುಬಿನ ಬದಲಾವಣೆಯ ಕಾರಣಕ್ಕೆ ಅವರಲ್ಲಿ ಒಂದಿಷ್ಟು ಆರ್ಥಿಕ ಶಕ್ತಿ ಸಂಚಯವಾಗಿದ್ದು, ಟಿವಿಎಸ್ ಎಕ್ಸ್‌ಎಲ್, ಮೋಟರ್ ಬೈಕ್‌ಗಳು ಅವರ ಗುಡಿಸಲಿನ ಬಳಿ ಕಾಣಿಸಿಕೊಂಡಿವೆ. ಆದರೆ, ಅದು ಅವರು ಐಶಾರಾಮಿ ಬದುಕಿನ ಕಾರಣಕ್ಕೆ ಕಾಣಿಸಿಕೊಂಡಿರುವ ವಾಹನಗಳಲ್ಲ. ತಮ್ಮ ಬಡಗಿ ವೃತ್ತಿಯಿಂದ ತಯಾರಿಸಲಾದ ವಸ್ತುಗಳನ್ನು ನಗರ ಪ್ರದೇಶಗಳಿಗೆ ಸಾಗಾಟ ಮಾಡಲು ಅನಿವಾರ್ಯವಾಗಿ ಅವಲಂಬಿಸಿರುವ ಸಾರಿಗೆ ಸಾಧನಗಳು.

‘ನಮ್ಮ ಪೂರ್ವಜರು ರಾಜರಿಂದ ಹಕ್ಕಿನ ಭಿಕ್ಷೆ ಪಡೆಯುವ ಬದಲು ಸಾಮ್ರಾಜ್ಯಗಳ ವರವನ್ನು ಪಡೆದಿದ್ದರೆ, ನಾವು ಬೇರೆಲ್ಲರಿಗಿಂತ ಉನ್ನತ ಮಟ್ಟದ ಜೀವನವನ್ನು ನಡೆಸುತ್ತಿದ್ದೆವು’ ಎಂದು ನಿಡುಸುಯ್ಯುತ್ತಾರೆ ಮಾಸ್ಟೀಕರು. ಕಳೆದ ಕೇವಲ ಒಂದು ದಶಕದ ಅವಧಿಯಲ್ಲಿ ಅವರ ಅಲೆಮಾರಿ ಬದುಕಿನಲ್ಲಿ ಆಗಿರುವ ಆರ್ಥಿಕ ಸಂಕ್ರಮಣವನ್ನು ನೋಡಿದಾಗ ಅವರ ಮಾತು ದಿಟವೆನಿಸದೆ ಇರದು.

Writer - ಸದಾನಂದ ಗಂಗನಬೀಡು

contributor

Editor - ಸದಾನಂದ ಗಂಗನಬೀಡು

contributor

Similar News