ದಲಿತಲೋಕದ ಕಥೆಗಳಲ್ಲ - ಮನುಕುಲದ ಕಥೆಗಳು

Update: 2018-04-01 07:15 GMT

ಜಾಗತೀಕರಣದ ಜತೆಗಾರ ಕೋಮುವಾದದ ಬಗ್ಗೆಯೂ ಕಥೆಗಾರನಿಗೆ ಆಕ್ರೋಶವಿದೆ. ‘ದೇವರ ಮರ’ ಮತ್ತು ‘ದೇಶದ್ರೋಹ’ ಕಥೆಗಳು ಕೋಮುವಾದ ಹರಡುವ ‘ಮುಸ್ಲಿಂ ವಿರೋಧ’ ಮತ್ತು ‘ಗೋಮಾಂಸ ಸೇವನೆಯ ವಿರೋಧ’ ವಿಚಾರ ಕುರಿತದ್ದಾಗಿವೆ. ‘ದೇಶದ್ರೋಹ’ ಕಥೆ ದಟ್ಟವಿವರಗಳಿಂದ ಕೂಡಿ ಪರಿಣಾಮಕಾರಿಯಾಗಿದ್ದರೆ ‘ದೇವರ ಮರ’ ಕಥೆ ಹಿಂದೂ-ಮುಸ್ಲಿಮರ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿರುವ ವ್ಯವಸ್ಥಿತ ಹುನ್ನಾರಗಳ ಕುರಿತಂತೆ ಚಿಂತಿಸದೆ ಈ ಸಂಘರ್ಷವನ್ನು ಸರಳೀಕರಿಸಿ ನೋಡುತ್ತಿದೆ ಎನಿಸುತ್ತದೆ. ಕಥೆಯ ಅಂತ್ಯ ಜೀವಪರ ಕಥೆಗಾರನ ರಮ್ಯ ಕಲ್ಪನೆಯಂತಿದೆ.

‘ದೇವರ ದಾರಿ’ ಮೊಗಳ್ಳಿ ಗಣೇಶರ ಹೊಸ ಕಥೆಗಳ ಪುಸ್ತಕ. ಒಟ್ಟು ಹತ್ತೊಂಬತ್ತು ಕಥೆಗಳು ಇಲ್ಲಿವೆ. ಮೊಗಳ್ಳಿ ಅವರ ಈ ಕಥೆಗಳು ಹುಟ್ಟಿರುವುದು ದಲಿತ ಜಗತ್ತಿನಿಂದಲೇ. ಬಡ ದಲಿತರ, ದಲಿತ ಹೆಣ್ಣುಮಕ್ಕಳ ಜೀವನಪ್ರೀತಿ, ಬದುಕಲಿಕ್ಕಾಗಿನ ನಿತ್ಯದ ಹೋರಾಟ, ಅವರ ಅಪಾರ ಚೈತನ್ಯ, ಕೆಚ್ಚು ಇವುಗಳನ್ನೆಲ್ಲ ಈ ಕಥೆಗಳು ತಾಯ್ತನದಲ್ಲಿ ನಿರೂಪಿಸುತ್ತವೆ. ಮನುಷ್ಯನ ಹಿಂಸಾರುಚಿಯ ತಹತಹಿಕೆಯನ್ನು, ಈ ತಹತಹಿಕೆ ಸೃಷ್ಟಿಸುವ ದಾರುಣತೆಯನ್ನು ಈ ಕಥೆಗಳು ಚಿತ್ರಿಸುತ್ತವೆ. ದಲಿತರನ್ನು ದೈಹಿಕ ಹಿಂಸೆಯ ಮೂಲಕ, ಅವಮಾನಿಸುವ ಮಾನಸಿಕ ಹಿಂಸೆಯ ಮೂಲಕ, ಅವರ ಹೊಲ-ಗುಡಿಸಲುಗಳಿಗೆ ಬೆಂಕಿ ಹಚ್ಚಿ ಅವರ ಕುಲವನ್ನೇ ನಾಶ ಮಾಡುವ ಮೇಲ್ಜಾತಿಗಳ ಮೇರೆ ಮೀರಿದ ಕ್ರೌರ್ಯ ಇಲ್ಲಿನ ಕಥೆಗಳಲ್ಲಿ ಮತ್ತೆ ಮತ್ತೆ ಮರುಕಳಿಸುತ್ತ ಸಂವೇದನಾಶೀಲ ಓದುಗನನ್ನು ಅಸ್ವಸ್ಥಗೊಳಿಸುತ್ತವೆ. ಯಾವುದೋ ಕಾಲದಲ್ಲಿ ಊರಿನ ಜಲದೇವತೆಯಂತೆ ಮೆರೆದಿದ್ದ, ಆದರೆ ಈಗ ಪಾಳುಬಿದ್ದ, ಕೊಳಕು ಕೊಂಪೆಯಾಗಿದ್ದ ಕೊಳವನ್ನೂ ಅದರ ಸುತ್ತಮುತ್ತಲ ವಿಶಾಲ ಜಾಗವನ್ನು ಅದರ ಮಾಲಕನ ಉದಾರತೆಯಿಂದ ಪಡೆದ ಊರ ದಲಿತರು ಅದನ್ನು ಸುಸ್ಥಿತಿಗೆ ತಂದು ಬೆಳೆ ಬೆಳೆಯತೊಡಗಿದಾಗ ಅದನ್ನು ಸಹಿಸಿಕೊಳ್ಳಲಾಗದ ಮೇಲ್ಜಾತಿಗಳು ಆ ತೆನೆಭರಿತ ಹೊಲವನ್ನು ಬೆಂಕಿಯಿಟ್ಟು ನಾಶಪಡಿಸುವ ದುರಂತದ ‘ಜಾಂಬವತಿ ಕೊಳ’ ಕಥೆ, ದಲಿತರು ಸಂಗ್ರಹಿಸಿದ ಕಟಾವಿನ ನಂತರ ಅಳಿದುಳಿಯುವ ಕಾಳುಕಡ್ಡಿಗಳಿಗೆ ಬೆಂಕಿ ಕೊಡುವ ‘ಅಕ್ಕಲು’ ಕಥೆ, ತನ್ನೂರ ಜಾತ್ರೆಗೆ ಬಂದಿರುವ ಬಳ್ಳಾರಿಯಲ್ಲಿರುವ ದಲಿತ ಯುವಕ ಪರಮೇಶನನ್ನು ಹಬ್ಬದೂಟಕ್ಕೆ ಕರೆದು ಅವಮಾನಿಸುವ ಹಳ್ಳಿಗೌಡನ ಕ್ರೌರ್ಯವನ್ನು ಕುರಿತ ‘ಸತ್ಕಾರ’ ಕಥೆಗಳಲ್ಲೆಲ್ಲ ಮೇಲ್ಜಾತಿಗಳು ದಲಿತರಿಗೆ ಎಸಗುವ ದೈಹಿಕ ಮತ್ತು ಮಾನಸಿಕ ಕ್ರೌರ್ಯ ಮುಖಕ್ಕೆ ರಾಚುತ್ತವೆ. ಆದರೆ ಕಥೆಗಾರ ಈ ಎಲ್ಲ ಹಿಂಸೆಗಳನ್ನು ಯಾವುದೇ ಒಂದು ವರ್ಗದ ವಿಕೃತಿಯಾಗಿ ನೋಡುವುದಿಲ್ಲ. ದಲಿತಲೋಕದಲ್ಲಿಯೂ ಹಿಂಸೆ ವಿವಿಧ ರೂಪಗಳಲ್ಲಿರುವುದನ್ನು ಈ ಕಥೆಗಳು ವಿಷಾದದಿಂದ ನಮ್ಮ ಮುಂದಿಡುತ್ತವೆ. ತನ್ನ ಗಂಡ ಎರಡನೇ ಮದುವೆಯಾಗುತ್ತಿದ್ದಾನೆ ಎಂಬುದನ್ನು ತಿಳಿದ ದಲಿತ ಹೆಣ್ಣೊಬ್ಬಳು ಅದನ್ನು ಪ್ರಶ್ನಿಸಲು ಹೊರಟಾಗ ಆಕೆಯನ್ನು ಅಮಾನುಷವಾಗಿ ಗಂಡ ಥಳಿಸುವುದೂ, ಇದನ್ನು ನೋಡಿಯೂ ಆತನ ಕ್ರೌರ್ಯದ ಅಟ್ಟಹಾಸಕ್ಕೆ ಬೆದರಿಯೋ, ಸ್ವಂತ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಈ ಹಿಂಸೆಯನ್ನು ನೋಡಿಯೂ ಕೇರಿಯ ಜನ ಸ್ಪಂದಿಸದಿರುವ ‘ದೇವರ ದಾರಿ’, ಜೂಜಿಗೆ ಬಿದ್ದ ಗಂಡ ಹೆಂಡತಿಯನ್ನು ಅಮಾನುಷವಾಗಿ ಹಿಂಸಿಸುವ ದಾರುಣ ಚಿತ್ರಗಳ ‘ಕತ್ತಲಿಗೆ ಕಿಚ್ಚು ಹಚ್ಚಿ’ ಕಥೆ, ಇಂದಿರಾ ಗಾಂಧಿ ಹೇರಿದ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಆ ಸಂದರ್ಭದ ಕಾನೂನನ್ನು ದುರುಪಯೋಗ ಪಡಿಸಿಕೊಂಡು ಪ್ರಾಮಾಣಿಕವಾಗಿ ಹಣದ ಲೇವಾದೇವಿ ಮಾಡುವ ತನ್ನನ್ನು ತನ್ನದೇ ಕೇರಿಯ ಜನ ಹಿಂಸಿಸಿ ತನ್ನ ಬದುಕನ್ನು ನಾಶ ಮಾಡುವಾಗ ತನಗಾದ ಅನ್ಯಾಯವನ್ನು ನೇರ ಮುಖ್ಯಮಂತ್ರಿ ದೇವರಾಜ ಅರಸು ಅವರನ್ನು ಕಂಡು ನಿವೇದಿಸಿಕೊಳ್ಳುವ ತಾತ, ಅರಸು ನೀಡಿದ ಸರಕಾರಿ ಜಮೀನಿನಲ್ಲಿ ಕಷ್ಟಪಟ್ಟು ದುಡಿದು ಬದುಕು ಕಟ್ಟಿಕೊಳ್ಳುವಾಗಲೇ ಅದನ್ನು ದೋಚುವ ಸಂಚುಗಳು (ತುರ್ತು ಪರಿಸ್ಥಿತಿ) ಈ ಮಾತುಗಳಿಗೆ ನಿದರ್ಶನ ಒದಗಿಸುತ್ತವೆ. ಮೇಲ್ಜಾತಿ ಗಂಡು ಮತ್ತು ದಲಿತ ಹೆಣ್ಣಿನ ನಡುವಿನ ದೈಹಿಕ ಸಂಬಂಧಗಳು ಎರಡೂ ಸಮುದಾಯಗಳ ಕೆಲವರ ಸ್ವಹಿತಾಸಕ್ತಿ ಮತ್ತು ಸ್ವಪ್ರತಿಷ್ಠೆಗಳ ಕಾರಣದಿಂದಾಗಿ ಎರಡೂ ಕುಟುಂಬಗಳನ್ನೂ ನರಳಿಸುವ ಮತ್ತು ದಾರುಣ ಅಂತ್ಯಕ್ಕೆ ದೂಡುವ ವಸ್ತುವುಳ್ಳ ‘ರುಕ್ಮಿಣಿ’ ಕಥೆ, ದಲಿತರನ್ನು ಅಮಾನುಷವಾಗಿ ನಡೆಸಿಕೊಂಡ ಗೌಡನ ಕುಟುಂಬವೇ ಕಾಲಾಂತರದಲ್ಲಿ ದಯನೀಯ ಸ್ಥಿತಿಗೆ ತಲುಪುವುದನ್ನು ಗತವನ್ನೂ ವರ್ತಮಾನವನ್ನೂ ಮುಖಾಮುಖಿಗೊಳಿಸುವ ವಿಶಿಷ್ಠ ತಂತ್ರವನ್ನು ಬಳಸಿ ಕರುಣೆಯಿಂದ ಚಿತ್ರಿಸುವ ‘ನಮ್ಮೂರ ಸಿದ್ದೇಗೌಡ’ ಕಥೆ, ‘ನಮ್ಮ ಕೇರಿಗೆ ಬಂದು ನೀರು ಕುಡಿದು ನಮ್ಮನ್ನು ಮುಟ್ಟಿಸಿಕೊಳ್ಳಿ’ ಎಂಬ ನೀರಧರಣಿ ಹಮ್ಮಿಕೊಳ್ಳುವ ಹಳ್ಳಿಯೊಂದರ ಹೊಲಗೇರಿ, ಅದನ್ನು ಬೆಂಬಲಿಸಿ ಹೋರಾಟಕ್ಕೆ ಬರುವ ದಲಿತ ಸಂಘರ್ಷ ಸಮಿತಿ, ಇಡೀ ದಿನ ಕಾದರೂ ನೀರು ಕುಡಿಯಲು ಯಾರೂ ಬಾರದಿದ್ದಾಗ ದುಷ್ಟನೊಬ್ಬನಿಂದ ಅತ್ಯಾಚಾರಕ್ಕೊಳಗಾಗಿ ಹುಚ್ಚಿಯಾದ ಅಯ್ನೋರ ಮಗಳು ಜಲಜಾಕ್ಷಿಯ ಪ್ರವೇಶವಾಗಿ ಅವಳಿಗೆ ಚಿಕಿತ್ಸೆ ಕೊಡಿಸಿ ಗುಣಪಡಿಸುವ ದಲಿತ ಸಂಘರ್ಷ ಸಮಿತಿಯ ಮುಖಂಡರು, ಆ ಮುಖಂಡರಲ್ಲಿಯೇ ಒಬ್ಬರು ಅವಳನ್ನು ಮದುವೆಯಾಗುವ ‘ನೀರಧರಣಿ’ ಕಥೆಗಳು ಮೊದಲಿಗೆ ಪ್ರಸ್ತಾಪಿಸದ ಕಥೆಗಳೊಂದಿಗೆ ಮತ್ತೆ ಮತ್ತೆ ಕಾಡುವ ಕಥೆಗಳಾಗಿವೆ.

ಮೊಗಳ್ಳಿ ಗಣೇಶ

ಮೊಗಳ್ಳಿಯವರು ಪುಸ್ತಕದ ತಮ್ಮ ಮಾತಿನಲ್ಲಿ ‘ನಾನು ಜಾಗತೀಕರಣದ ಪರ ಎಂಬ ಒಂದು ಬೀಸು ಅಭಿಪ್ರಾಯವಿದೆ. ಇರಬಹುದು, ಆದರೆ ಕಥೆ ಬರೆವಾಗ ನಾನು ಅದನ್ನು ಅನುಮಾನಿಸುತ್ತೇನೆ; ವೈಚಾರಿಕ ನಿರ್ವಚನದಲ್ಲಿ ಅದರ ಬಗ್ಗೆ ಉದಾರವಾಗಿರುತ್ತೇನೆ’ ಎಂದಿದ್ದಾರೆ. ಇಲ್ಲಿನ ಕಥೆಗಳನ್ನು ಓದಿದಾಗ ಈ ಕಥೆಗಳು ಜಾಗತೀಕರಣವನ್ನು ಕೇವಲ ಅನುಮಾನಿಸುತ್ತಿಲ್ಲ, ಕಟುವಾಗಿ ವಿರೋಧಿಸುತ್ತಿವೆ ಎಂಬುದು ಗಮನಕ್ಕೆ ಬರುತ್ತದೆೆ. ಈ ವಿರೋಧ ಮೊಗಳ್ಳಿಯವರು ತಮ್ಮ ಕಥೆಗಳಲ್ಲಿ ಕಟ್ಟಿಕೊಡುವ ಜೀವಂತ ಬದುಕಿನ ಮೂಲಕ ಹೊಮ್ಮುವುದರಿಂದ ವೈಚಾರಿಕ ನಿರ್ವಚನದಲ್ಲಿ ಮೊಗಳ್ಳಿ ಅವರ ಜಾಗತೀಕರಣದ ಪರವಾಗಿ ಇದ್ದಿರಬಹುದಾದ ನಿಲುವುಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಇವು ಓದುಗನನ್ನು ತಟ್ಟುತ್ತವೆ. ‘ಅಕ್ಕಲು’ ಕಥೆಯು ಇದಕ್ಕೆ ಅತ್ಯುತ್ತಮ ನಿದರ್ಶನವಾಗಿದೆ.

ಜಾಗತೀಕರಣದ ಜತೆಗಾರ ಕೋಮುವಾದದ ಬಗ್ಗೆಯೂ ಕಥೆಗಾರನಿಗೆ ಆಕ್ರೋಶವಿದೆ. ‘ದೇವರ ಮರ’ ಮತ್ತು ‘ದೇಶದ್ರೋಹ’ ಕಥೆಗಳು ಕೋಮುವಾದ ಹರಡುವ ‘ಮುಸ್ಲಿಂ ವಿರೋಧ’ ಮತ್ತು ‘ಗೋಮಾಂಸ ಸೇವನೆಯ ವಿರೋಧ’ ವಿಚಾರ ಕುರಿತದ್ದಾಗಿವೆ. ‘ದೇಶದ್ರೋಹ’ ಕಥೆ ದಟ್ಟವಿವರಗಳಿಂದ ಕೂಡಿ ಪರಿಣಾಮಕಾರಿಯಾಗಿದ್ದರೆ ‘ದೇವರ ಮರ’ ಕಥೆ ಹಿಂದೂ-ಮುಸ್ಲಿಮರ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿರುವ ವ್ಯವಸ್ಥಿತ ಹುನ್ನಾರಗಳ ಕುರಿತಂತೆ ಚಿಂತಿಸದೆ ಈ ಸಂಘರ್ಷವನ್ನು ಸರಳೀಕರಿಸಿ ನೋಡುತ್ತಿದೆ ಎನಿಸುತ್ತದೆ. ಕಥೆಯ ಅಂತ್ಯ ಜೀವಪರ ಕಥೆಗಾರನ ರಮ್ಯ ಕಲ್ಪನೆಯಂತಿದೆ.

ಈ ಕಥೆಗಳನ್ನು ಬರೆದಿರುವವರು ದಲಿತರಾಗಿರಬಹುದು. ಇಲ್ಲಿನ ಕಥೆಗಳೂ ದಲಿತಲೋಕದ್ದೇ ಆಗಿರಬಹುದು. ಈ ಕಾರಣಗಳಿಂದ ಮೊಗಳ್ಳಿ ಅವರನ್ನು ದಲಿತ ಲೇಖಕ, ದಲಿತ ಕಥೆಗಾರ ಎಂದು ಕರೆಯುವುದು ಘೋರ ಅನ್ಯಾಯದಂತೆ ನನಗೆ ಕಾಣುತ್ತದೆ. ಬಹಳ ಒಳ್ಳೆಯ ಕಥೆಗಾರರಾದ ದೇವನೂರು, ಮಂಜುನಾಥ ಲತಾ ಕೂಡ ಇಂತಹ ಅನ್ಯಾಯಕ್ಕೆ ಒಳಗಾಗಿದ್ದಾರೆ. ಹಾಗೆ ನೋಡಿದರೆ ನಾವು ಯಾರನ್ನು ‘ಬ್ರಾಹ್ಮಣ ಲೇಖಕ’, ‘ಲಿಂಗಾಯತ ಲೇಖಕ’ ಎಂದು ಕರೆಯುವುದಿಲ್ಲವೊ ಇಂತಹ ಕೆಲವು ಸಾಹಿತಿಗಳ ಕಥೆ-ಕಾದಂಬರಿಗಳು ಈ ಸಾಹಿತಿಗಳು ಹುಟ್ಟಿದ ಜಾತಿಗಳ ಪರವಾದ ವಾದಮಂಡನೆಯಂತಿವೆ ಎಂಬುದನ್ನು ಗುರುತಿಸಲು ವಿಶೇಷವಾದ ವಿಮರ್ಶಾಪ್ರತಿಭೆಯ ಅಗತ್ಯವಿಲ್ಲ. ಆದರೆ ದೀರ್ಘ ಪರಂಪರೆಯಿಂದ ಅಗಾಧ ಅವಮಾನ, ಹಿಂಸೆಗೆ ಒಳಗಾದ ಸಮುದಾಯದ ಪ್ರತಿಭೆೆಗಳು ಪ್ರತೀಕಾರ, ಸ್ವಾನುಕಂಪಗಳಿಗೆ ಬದಲಾಗಿ ಇಡೀ ಮನುಕುಲವನ್ನು ತಾಯ್ತನದಲ್ಲಿ ನೋಡುತ್ತ, ದಲಿತನ ಕ್ರೌರ್ಯವನ್ನೂ, ಗೌಡನ ತಬ್ಬಲಿತನವನ್ನೂ ಗುರುತಿಸುವ ವಿವೇಕವನ್ನು ಕಾಯ್ದುಕೊಂಡು ಬರೆಯುತ್ತಿರುವುದು ಸಣ್ಣ ಸಂಗತಿಯಲ್ಲ. ಮೊಗಳ್ಳಿ ಅವರ ದೇವರ ದಾರಿ ದಲಿತಲೋಕದ ಕಥೆಗಳಲ್ಲ, ಅವು ಮನುಕುಲದ ಕಥೆಗಳು.

ನಾನು ಓದಿದ ಪುಸ್ತಕ

ಸರ್ಜಾಶಂಕರ ಹರಳಿಮಠ

Writer - ಸರ್ಜಾಶಂಕರ ಹರಳಿಮಠ

contributor

Editor - ಸರ್ಜಾಶಂಕರ ಹರಳಿಮಠ

contributor

Similar News