ಕಾಲ ಮಿತಿಯ ಉದ್ಯೋಗ ತಿದ್ದುಪಡಿ ವಿರೋಧಿಸಿ ಕಾರ್ಮಿಕರ ಪ್ರತಿಭಟನೆ
ಬೆಂಗಳೂರು, ಮಾ.31: ಕೇಂದ್ರ ಸರಕಾರ ಕಾಲ ಮಿತಿಯ ಉದ್ಯೋಗ(ಕೇಂದ್ರ ಸ್ಥಾಯಿ ನಿಯಮಾವಳಿಗೆ) ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ಹಾಗೂ ಜಾಕಿ ಕಂಪೆನಿಯ ಆಡಳಿತ ಮಂಡಳಿಯ ವಿರುದ್ಧ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್(ಎಐಟಿಯುಸಿ) ವತಿಯಿಂದ ನಗರದ ಕಾರ್ಮಿಕ ಇಲಾಖೆ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸಂಘಟನೆ ಕಾರ್ಯಾಧ್ಯಕ್ಷ ಎಚ್.ಮಹದೇವನ್, ಕೇಂದ್ರ ಸರಕಾರ ಹೊರಡಿಸಿರುವ ಈ ಆದೇಶ ಆತಂಕಕಾರಿಯಾಗಿದ್ದು, ಇದರಿಂದ ಕಾರ್ಮಿಕರು ತಮ್ಮ ಉದ್ಯೋಗ ಹಾಗೂ ಸಾಮಾಜಿಕ ಭದ್ರತೆಯನ್ನು ಕಳೆದುಕೊಳ್ಳುತಾರೆ. ಆದುದರಿಂದ ಕೂಡಲೇ ಕೇಂದ್ರ ಸರಕಾರ ಈ ಅಧಿಸೂಚನೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಬೊಮ್ಮಸಂದ್ರದಲ್ಲಿರುವ ಜಾಕಿ ಗಾರ್ಮೆಂಟ್ಸ್‌ನಲ್ಲಿ ಕಳೆದ ವರ್ಷ ಕಾರ್ಮಿಕ ಸಂಘಟನೆ ರಚನೆ ಮಾಡಿ ತಮ್ಮ ಬೇಡಿಕೆಗಳನ್ನು ಆಡಳಿತ ಮಂಡಳಿಗೆ ನೀಡಿದ್ದರು. ಇದರಿಂದ ಕೋಪಗೊಂಡ ಮಂಡಳಿಯವರು ಕಾರ್ಮಿಕರನ್ನು ಬೆದರಿಸಿ ಕಿರುಕುಳ ನೀಡಿ ಕಾರ್ಮಿಕ ಇಲಾಖೆಯಲ್ಲಿ ಸಂಧಾನ ಸಭೆಗಳನ್ನು ನಿರ್ಲಕ್ಷ ಮಾಡಿದೆ. ಅಲ್ಲದೆ, ಸಂಘದ 4 ಕಾರ್ಮಿಕ ಮುಖಂಡರನ್ನು ಅಮಾನತ್ತು ಮಾಡಲಾಗಿದೆ. ಹೀಗಾಗಿ, ಕೂಡಲೇ ಕಾರ್ಮಿಕ ಇಲಾಖೆ ಮಧ್ಯಪ್ರವೇಶಿಸಿ ಕಾರ್ಮಿಕರಿಗೆ ಉಂಟಾಗುತ್ತಿರುವ ಕಿರುಕುಳವನ್ನು ನಿಲ್ಲಿಸಿ ಸಂಘದ ಜೊತೆ ಮಾತುಕತೆ ನಡೆಸಬೇಕು. ಹಾಗೂ ಅಮಾನತ್ತು ಮಾಡಿರುವ ಕಾರ್ಮಿಕರು ಮರು ಕೆಲಸಕ್ಕೆ ನೇಮಕ ಮಾಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ನಗರದಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಕಾರ್ಮಿಕರಿಗೂ ಕನಿಷ್ಟ ವೇತನ 18 ಸಾವಿರ ನಿಗದಿ ಮಾಡಬೇಕು ಎಂದ ಅವರು, ನಗರದಲ್ಲಿ ದಿನದಿಂದ ದಿನಕ್ಕೆ ತರಕಾರಿ, ದಿನನಿತ್ಯದ ಬಳಕೆ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಆದರೆ, ಕಾರ್ಮಿಕರಿಗೆ ವೇತನ ಹೆಚ್ಚಳವಾಗುತ್ತಿಲ್ಲ. ಇದರಿಂದಾಗಿ ಕಾರ್ಮಿಕರು ಜೀವನ ನಡೆಸುವುದು ಅತ್ಯಂತ ಕಷ್ಟಕರವಾಗಿದೆ. ಆದುದರಿಂದ ಕೂಡಲೇ ಕೇಂದ್ರ ಸರಕಾರ 7 ನೆ ವೇತನ ಆಯೋಗವು ನೀಡಿದ ಶಿಪಾರಸ್ಸಿನಂತೆ ಕನಿಷ್ಟ ವೇತನ ನಿಗದಿ ಮಾಡಬೇಕು ಎಂದು ಅವರು ಹೇಳಿದರು.