×
Ad

ಲಂಬಾಣಿ ಭಾಷೆಗೆ ಲಿಪಿಯ ಹುಡುಕಾಟ ನಡೆಯುತ್ತಿದೆ: ಚಂದ್ರಶೇಖರ ಪಾಟೀಲ

Update: 2018-03-31 22:53 IST

ಬೆಂಗಳೂರು, ಮಾ.31: ಅಲೆಮಾರಿ ಬುಡಕಟ್ಟು ಹಿನ್ನೆಲೆ ಹೊಂದಿರುವ ಲಂಬಾಣಿ ಭಾಷೆಗೆ ಲಿಪಿ ಪಡೆಯುವ ಬಗ್ಗೆ ಗಂಭೀರ ಚಿಂತನೆ ನಡೆಯುತ್ತಿದೆ ಎಂದು ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ತಿಳಿಸಿದರು.

ಬಂಜಾರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ನಗರದ ಕೋಣನಕುಂಟೆಯ ಸಿಲಿಕಾನ್ ಸಿಟಿ ಸಭಾಂಗಣದಲ್ಲಿ ಆಯೋಜಿಸಿದ್ದ ಲೇಖಕ ಎ.ಆರ್.ಗೋವಿಂದ ಸ್ವಾಮಿರವರ ‘ರಂಗ ವಿಮರ್ಶೆ’ ಹಾಗೂ ‘ರಾಮನಗರ ಜಿಲ್ಲಾ ರಂಗ ಮಾಹಿತಿ ಕೈಪಿಡಿ’ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕನ್ನಡದ ಉಪಭಾಷೆಗಳಲ್ಲಿ ಲಂಬಾಣಿ ಭಾಷೆ ವಿಶಿಷ್ಟವಾಗಿದೆ. ಈ ಭಾಷೆಯನ್ನು ಬೆಳೆಸುವ ನಟ್ಟಿನಲ್ಲಿ ಭಾಷಾ ತಜ್ಞರು, ಸಾಹಿತಿಗಳು ವಿಶೇಷ ಆಸಕ್ತಿ ವಹಿಸಬೇಕು. ಈಗಾಗಲೆ ಲಂಬಾಣಿಗೆ ಲಿಪಿ ಹುಡುಕುವ ಕಾರ್ಯ ನಡೆಯುತ್ತಿದ್ದು, ದೇವನಾಗರಿ ಇಲ್ಲವೆ ಇತರೆ ಲಿಪಿಯನ್ನು ಅಳವಡಿಸಿಕೊಳ್ಳುವುದರ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಲೇಖಕ ಡಾ.ಎ.ಆರ್.ಗೋವಿಂದಸ್ವಾಮಿ ರಚಿಸಿರುವ ’ರಂಗ ವಿಮರ್ಶೆ’ ಹಾಗೂ ’ರಾಮನಗರ ಜಿಲ್ಲಾ ರಂಗಮಾಹಿತಿ ಕೈಪಿಡಿ’ ಅಪರೂಪದ ಕೃತಿಗಳಾಗಿವೆ. ರಂಗಭೂಮಿಯ ಕುರಿತು ಶಾಸ್ತ್ರೀಯವಾಗಿ, ಶೈಕ್ಷಣಿಕವಾಗಿ ಗಂಭೀರ ಅಭ್ಯಾಸ ಮಾಡಿರುವ ಡಾ.ಎ.ಆರ್.ಗೋಂದಸ್ವಾಮಿ ತಮ್ಮ ಕೃತಿಗಳಲ್ಲಿ ಉಪಯು್ತ ಮಾಹಿತಿಯನ್ನು ನೀಡಿದ್ದಾರೆ ಎಂದರು.

ಹಿರಿಯ ಲೇಖಕ ಡಾ.ವಡ್ಡಗೆರೆ ನಾಗರಾಜಯ್ಯ ಮಾತನಾಡಿ, ಡಾ.ಗೋವಿಂದಸ್ವಾಮಿ ಸಾಹಿತ್ಯಿಕವಾಗಿ, ಸಾಂಸ್ಕೃತಿಕ ಅಧ್ಯಯನದಲ್ಲಿ ಗಂಭೀರವಾಗಿ ತೊಡಗಿಕೊಂಡಿದ್ದಾರೆ. ಪ್ರಪ್ರಥಮ ಬಾರಿಗೆ ಬಂಜಾರ ಭಾಷೆಯಲ್ಲಿ ’ಕಾವ್ಯಕಮ್ಮಟ’ದ ಮೂಲಕ ಬಂಜಾರ ಭಾಷೆ ಹಾಗೂ ಸಾಹಿತ್ಯಿ ಹಾಗೂ ಸಂಸ್ಕೃತಿ ಬೆಳವಣಿಗೆಗಾಗಿ ಶ್ರಮಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಕೆಬಿಎಲ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಕೆ.ಬಿ.ಲಕ್ಷ್ಮಣ್, ಬಂಜಾರಕಾವ್ಯ ಗೋಷ್ಟಿಯಲ್ಲಿ ಕವಿಗಳಾದ ಪಳನಿಸ್ವಾಮಿ, ಕೃಷ್ಣಾನಾಯಕ್, ಸದಾಶಿವಯ್ಯ ಜರಗನಹಳ್ಳಿ, ಸುಭಾಶ್‌ಚಮಾಣ್, ಡಾ.ಗೋವಿಂದಸ್ವಾಮಿ, ಬಂಜಾರ ಸಮುದಾಯದ ಮುಖಂಡರಾದ ಜನಾರ್ಧನ ನಾಯಕ್, ಮಹದೇವನಾಯಕ್, ಶಶಿ ಪಬ್ಲಿಕೇಷನ್‌ನ ನಾಗಭೂಷಣ್ ಜಾಲಮಂಗಲ, ಕೆಪಿಟಿಸಿಎಲ್ ನೌಕರರ ಸಂಘದ ಉಪಾಧ್ಯಕ್ಷರಾದ ಎಸ್.ಆರ್.ರಾಜನಾಯಕ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News